Advertisement
ಶಿಶು ಮೇರಿ ಮಾತೆಯನ್ನು ‘ಮೋಂತಿ ಮಾತೆ’ ಎಂದು ಕರಾವಳಿಯ ಕ್ರೈಸ್ತರು ಕರೆಯುತ್ತಾರೆ. ಹಬ್ಬಕ್ಕೆ ಸಿದ್ಧತೆಯಾಗಿ 9 ದಿನಗಳ ವಿಶೇಷವಾದ ಬಲಿಪೂಜೆಗಳೊಂದಿಗೆ ಪ್ರಾರ್ಥನೆಗಳಿವೆ. ದೇವಪುತ್ರ ಯೇಸುವಿನ ತಾಯಿಯಾದ ಮರಿಯಮ್ಮ ಪಾಪರಹಿತವಾಗಿ ಜನ್ಮವಿತ್ತರು. ಆದ್ದರಿಂದ ಈ ಪಾವನ ಶಿಶುವನ್ನು ಗೌರವಿಸುವುದು ಹಬ್ಬದ ಉದ್ದೇಶಗಳಲ್ಲಿ ಮುಖ್ಯವಾದದ್ದು.
Related Articles
ಸಕ್ಕಡ್ ಲಾಗಿಂ ಸರ್ಯಾಂ
ಆಮೆc ತಾಳೆ ಏಕ್ ಕರ್ಯಾಂ,
ಮರ್ಯೆಕ್ ಹೋಗಳಿÕಯಾಂ
ಈ ಕವಿತೆಯ ಅರ್ಥ ಹೀಗಿದೆ- ‘ನಾವೆಲ್ಲ ಒಟ್ಟು ಸೇರೋಣ, ಎಲ್ಲರೂ ಹತ್ತಿರ ಬರೋಣ, ನಮ್ಮೆಲ್ಲರ ಸ್ವರಗಳನ್ನು ಒಂದಾಗಿಸಿ ಶಿಶು ಮೇರಿಯನ್ನು ಹೊಗಳ್ಳೋಣ’.
Advertisement
ಪೂಜೆಯ ವೇಳೆಯಲ್ಲಿ ಗುರುಗಳು ಹೊಸ ಬತ್ತದ ತೆನೆಗಳನ್ನು ಆಶೀರ್ವದಿಸಿ ಅನಂತರ ಜನರಿಗೆ ಹಂಚುತ್ತಾರೆ. ತಾವು ಬೆಳೆದ ತರಕಾರಿಗಳನ್ನು ತಂದು ದೇವಾಲಯಕ್ಕೆ ಕಾಣಿಕೆಯಾಗಿ ಅರ್ಪಿಸುವ ಸಂಪ್ರದಾಯವೂ ಇದೆ. ಪೂಜೆಯ ಅನಂತರ ಮಕ್ಕಳಿಗೆಲ್ಲ ಸಿಹಿತಿಂಡಿಯ ಜೊತೆಗೆ ಕಬ್ಬನ್ನೂ ಹಂಚುತ್ತಾರೆ.
ಅಂದು ಮಧ್ಯಾಹ್ನ ಮನೆಯಲ್ಲಿ ಹಲವು ಬಗೆಯ ತರಕಾರಿಗಳ ಪಲ್ಯಗಳನ್ನು ಸಿದ್ಧ ಮಾಡುವುದು ರೂಢಿ. ಸಡಗರದ ಕೂಟ. ಮನೆಯ ಯಜಮಾನ ಪವಿತ್ರೀಕರಿಸಿದ ತೆನೆಯ ಕಾಳುಗಳನ್ನು ಬಿಡಿಸಿ ಪುಡಿ ಮಾಡುತ್ತಾರೆ. ಅನಂತರ ಈ ಪುಡಿಯನ್ನು ಸಿಹಿರಾಸ ಅಥವಾ ತೆಂಗಿನಕಾಯಿ ಹಾಲಿನಲ್ಲಿ ಕಲಕಿ ಪ್ರಾರ್ಥನೆಯೊಂದಿಗೆ ಎಲ್ಲರಿಗೂ ಸ್ವಲ್ಪ ಸ್ವಲ್ಪವಾಗಿ ಕೊಡುವುದು ಮನೆಯ ಯಜಮಾನನ ಕೆಲಸ. ಅಂದು ಮನೆಯಲ್ಲಿ ಮಾಂಸಾಹಾರದ ಊಟವಿಲ್ಲ, ಮದ್ಯಪಾನ ಮಾಡುವಂತಿಲ್ಲ. ಎಲ್ಲಕ್ಕಿಂತ ಮೊದಲು ಹೊಸ ಊಟದ ಸೇವನೆಯಾಗಬೇಕು. ಸಕಾರಣದಿಂದ ಮನೆಗೆ ಬಂದ ತಮ್ಮೊಂದಿಗೆ ಸೇರಲಾಗದ ಸದಸ್ಯರ ನೆನಪನ್ನು ಮಾಡಿ ಅವರಿಗೂ ಪವಿತ್ರೀಕರಿಸಿದ ಕಾಳುಗಳನ್ನು ಅಂಚೆಯಲ್ಲಿ ಕಳುಹಿಸಿಕೊಡುವ ಏರ್ಪಾಡನ್ನು ಮಾಡುತ್ತಾರೆ.
ಇಂತಹ ಪದ್ಧತಿ ಮುಖ್ಯವಾಗಿ ಕರಾವಳಿ ಕ್ರೈಸ್ತರಲ್ಲಿ ಪ್ರಚಲಿತದಲ್ಲಿದೆ. ಈ ಪದ್ಧತಿಯ ಶ್ರೇಷ್ಟತೆಯನ್ನು ಅರಿತ ಒಳನಾಡಿನ ಕ್ರೈಸ್ತರು ಇತ್ತೀಚೆಗೆ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ಹಬ್ಬದ ದಿನಗಳು ವಿವಿಧ ಪಂಗಡಗಳ ಜನರಲ್ಲಿ ಬೇರೆ ಬೇರೆಯಾಗಿರುತ್ತದೆ. ರೈತ ಮನೆತನದವರಾದ ಕರಾವಳಿ ಕ್ರೈಸ್ತರಿಗೆ ಈ ಹಬ್ಬ ದೇವರು ಒಳ್ಳೆಯ ಮಳೆ ಬೆಳೆಯನ್ನು ದಯಪಾಲಿಸಿ ತಮ್ಮ ಕೃಷಿ ಕಾರ್ಯವನ್ನು ಆಶೀರ್ವದಿಸಿಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಲೂ ಸದವಕಾಶವಾಗಿದೆ.
ಈ ಹಬ್ಬಕ್ಕೆ ಸಂಬಂಧಿಸಿದಂತೆ ಕತೆಗಳೇನೇ ಇರಲಿ. ಮೋಂತಿ ಮಾತೆಯ ಭಕ್ತಿ ಕ್ರೈಸ್ತರಲ್ಲಿ ಬೇರೂರಿದೆ. ಕೌಟುಂಬಿಕ ಸ್ನೇಹ ಸೌಹಾರ್ದವನ್ನು ನವೀಕರಿಸಲು ಈ ಭಕ್ತಿ ಚೇತನವೀಯುತ್ತದೆ. ವರ್ಷವಿಡೀ ಒಂದಿಷ್ಟು ಕೂಲಿಗಾಗಿ ಕೃಷಿ ಕಾರ್ಯಗೈಯ್ಯುವವರ ಮನಸ್ಸಿಗೆ ಆನಂದವನ್ನೀಯುತ್ತದೆ. ಕುಟುಂಬ ಜೀವನ ಕುಸಿಯುತ್ತಿರುವ ಈ ಕಾಲದಲ್ಲಿ ಮೋಂತಿ ಮಾತೆಯ ಹಾಗೂ ಹೊಸ ಪೈರಿನ ಹಬ್ಬ ಮಹತ್ವಪೂರ್ಣವೆನಿಸುತ್ತದೆ.
– ದೋನಾತ್ ಡಿ’ಆಲ್ಮೇಡಾ ತೊಟ್ಟಂ ಮಲ್ಪೆ