Advertisement

ತಿಂಗಳಾದರೂ ಸ್ಪಂದಿಸದ ಸರ್ಕಾರ

09:40 AM Jul 23, 2019 | Team Udayavani |

ಜಗಳೂರು: ಕಳೆದ ಒಂದು ತಿಂಗಳಿನಿಂದ ರೈತರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ತೊರೆದು ಹೋರಾಟ ಮಾಡುತ್ತಿದ್ದರೂ ಸಹ ಸರಕಾರ ರೈತರ ಸಮಸ್ಯೆಗೆ ಸ್ಪಂದಿಸದೇ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಮುಸ್ಟೂರು ಓಂಕಾರ ದಾಸೋಹ ಮಠದ ಶ್ರೀ ರುದ್ರಮುನಿ ಶಿವಚಾರ್ಯ ಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸೋಮವಾರ ಮುಸ್ಟೂರು ಗ್ರಾಮಸ್ಥರ ಪ್ರತಿಭಟನೆಯ ನೇತೃತ್ವ ವಹಿಸಿ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೂ ಮೆರವಣಿಗೆಯಲ್ಲಿ ತೆರಳಿ, ಕಳೆದ 33 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.

ಕಳೆದ 10 ವರ್ಷಗಳ ಸತತ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ ಹಂಚಿಕೆಯಾಗಿರುವ 2.5 ಟಿಎಂಸಿ ನೀರನ್ನು ಸಮರ್ಪಕವಾಗಿ ಹರಿಸಬೇಕು. ಬೆಳಗಟ್ಟ ಮೂಲ ಮಾರ್ಗದ ಮೂಲಕವೇ ತಾಲೂಕಿಗೆ ನೀರು ಹರಿದು ಬರಬೇಕು. ತಾಲೂಕಿಗೆ ಹಂಚಿಕೆಯಾದ ನೀರನ್ನು ಬೇರೆ ತಾಲೂಕಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ನಮ್ಮ ಪಾಲಿನ ನೀರು ನಮಗೆ ಸಂಪೂರ್ಣವಾಗಿ ಹರಿದರೆ ಮಾತ್ರ ತಾಲೂಕು ಸಮಗ್ರ ನೀರಾವರಿಯಾಗಲು ಅನುಕೂಲವಾಗಲಿದೆ. ಸರಕಾರದ ಕೆಲಸ ದೇವರ ಕೆಲಸ ಎನ್ನುವ ಬದಲಾಗಿ ಪ್ರಜೆಗಳ ಕೆಲಸ ದೇವರ ಕೆಲಸವೆಂದು ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕಿದೆ ಎಂದರು.

ರೈತರ ಸಮಸ್ಯೆಯನ್ನು ಆಲಿಸುವಂತಹ ತಾಳ್ಮೆ ಸಹ ಸರಕಾರಕ್ಕಿಲ್ಲ. ಜನಪ್ರತಿನಿಧಿಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ, ವಿನಃ ಜನರ ಸಮಸ್ಯೆ ಕಡೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂರರಲ್ಲಿ 78 ವರ್ಷ ಬರಗಾಲಕ್ಕೆ ತುತ್ತಾದ ತಾಲೂಕು ಇದಾಗಿದ್ದು, ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಬಾರಿ ಮಳೆ ಕೊರತೆಯಿಂದ ತಾಲೂಕಿನಲ್ಲಿ ಶೇ. 15 ರಷ್ಟು ಬಿತ್ತನೆಯಾಗಿದ್ದು, ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಇಲ್ಲಿನ ಚಿಂತಾಜನಕ ಪರಿಸ್ಥಿತಿಯನ್ನು ಕಂಡರೂ ಸಹ ಈ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೆ ಸರಕಾರ ಹೋಗಿಲ್ಲ.

ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನೀರಿಗಾಗಿ ಜೈಲ್ ಭರೋ ಚಳವಳಿಗೂ ನಾವು ಸಿದ್ಧ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ, ಸದಸ್ಯರಾದ ಎಂ.ಬಿ.ಲಿಂಗರಾಜ್‌, ಜೆ.ಮಹಾಲಿಂಗಪ್ಪ, ಮಹಮದ್‌ ಅನ್ವರ್‌, ಅನಂತ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next