Advertisement

ತಿಂಗಳು ಪೂರೈಸಿದ ಇಂದಿರಾ ಕ್ಯಾಂಟೀನ್‌

12:51 PM Sep 16, 2017 | Team Udayavani |

ಬೆಂಗಳೂರು: ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್‌ ಯೋಜನೆಗೆ ನಗರದ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಕ್ಯಾಂಟೀನ್‌ ಆರಂಭವಾಗಿ ಸೆ.16ಕ್ಕೆ ಒಂದು ತಿಂಗಳು ತುಂಬಿದೆ. ಈ ಅವಧಿಯಲ್ಲಿ ಲಕ್ಷಾಂತರ ಜನ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಆಹಾರ ಸೇವಿಸಿದ್ದು, ಕ್ಯಾಂಟೀನ್‌ನಲ್ಲಿನ ಆಹಾರದ ಗುಣಮಟ್ಟ ಹಾಗೂ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಕ್ಯಾಂಟೀನ್‌ಗಳಲ್ಲಿ ಆಹಾರ ಸೇವನೆ ಮಾಡಿದ ಜನ ರುಚಿಗೆ ಸಂತಸಗೊಂಡಿದ್ದು ಮಾತ್ರವಲ್ಲ, ಕ್ಯಾಂಟೀನ್‌ಗಳಲ್ಲಿ ನೀಡಲಾಗುತ್ತಿರುವ ಆಹಾರದ ಪ್ರಮಾಣ ಹಾಗೂ ಹೆಚ್ಚಿನ ಜನರಿಗೆ ಆಹಾರ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

ಆಗಸ್ಟ್‌ 16ರಂದು ಜಯನಗರ ಕನಕನಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರು ಚಾಲನೆ ನೀಡಿದ ನಂತರ ನಗರದಲ್ಲಿ 101 ಕ್ಯಾಂಟೀನ್‌ಗಳಿಗೆ ಚಾಲನೆ ನೀಡಲಾಗಿತ್ತು. ಅದಾದ ಬಳಿಕ ಹಲವಾರು ಕಡೆಗಳಲ್ಲಿ ಆಹಾರ ತಡವಾಗಿ ಬರುತ್ತಿದೆ, ಕೆಲವು ಕಡೆಗಳಲ್ಲಿ ಆಹಾರವೇ ಬಂದಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಅವುಗಳನ್ನು ಈಗ ಸರಿಪಡಿಸುವಲ್ಲಿ ಪಾಲಿಕೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳು ಆರಂಭವಾದ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಹೆಚ್ಚಿನ ಜನರಿಗೆ ಆಹಾರ ದೊರೆಯುತ್ತಿರಲಿಲ್ಲ. ಈ ವೇಳೆ ಹೆಚ್ಚಿನ ಜನರು ಆಹಾರ ಹೇಗಿದೆ ಎಂಬುದನ್ನು ನೋಡಲು ಆಸಕ್ತಿಗಾಗಿ ಬರುತ್ತಿದ್ದರು. ದಿನ ಕಳೆದಂತೆ ಆರ್ಥಿಕವಾಗಿ ಸಬಲರಾಗಿರುವವರು ಬರುವುದು ಕಡಿಮೆಯಾಗಿದ್ದು, ನಿಜವಾಗಿಯೂ ಸರ್ಕಾರ ಯಾರಿಗಾಗಿ ಯೋಜನೆ ಜಾರಿಗೆ ತಂದಿದೆಯೋ ಅವರು ಯೋಜನೆ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್‌ ಆರಂಭವಾಗಿ ಶನಿವಾರಕ್ಕೆ ಒಂದು ತಿಂಗಳಾಗಿದ್ದು, ಕ್ಯಾಂಟೀನ್‌ನಲ್ಲಿ ನೀಡಲಾಗುತ್ತಿರುವ ಆಹಾರ ರುಚಿ, ಪ್ರಮಾಣ ಹಾಗೂ ಕ್ಯಾಂಟೀನ್‌ಗಳಲ್ಲಿನ ಸ್ವತ್ಛತೆಯ ಕುರಿತು “ಉದಯವಾಣಿ’ ರಿಯಾಲಿಟಿ ಚೆಕ್‌  ಮಾಡಿದಾಗ ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯಗಳು ಹೀಗಿವೆ. 

Advertisement

ಹೊರಗಡೆ 50 ರೂ. ನೀಡಿ, ಊಟ ಮಾಡಿದರೂ ರುಚಿ ಅಥವಾ ಪ್ರಮಾಣದ ವಿಚಾರದಲ್ಲಿ ಊಟ ಮಾಡಿದ ತೃಪ್ತಿ ಸಿಗುವುದಿಲ್ಲ. ಆದರೆ, ಇಂದಿರಾ ಕ್ಯಾಂಟೀನ್‌ನಲ್ಲಿ ನೀಡಲಾಗುತ್ತಿರುವ ಆಹಾರ ರುಚಿಕರವಾಗಿದ್ದು, 10 ರೂ.ಗಳಿಗೆ ಉತ್ತಮವಾದ ಊಟ ನೀಡಲಾಗುತ್ತಿದೆ. 
-ಪ್ರಕಾಶ್‌, ವಿಮೆ ಏಜೆಂಟ್‌

ಸರ್ಕಾರದಿಂದ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿನ ಆಹಾರ ರುಚಿಕರವಾಗಿದ್ದು, ಕ್ಯಾಂಟೀನ್‌ಗಳಲ್ಲಿ ಸ್ವತ್ಛತೆಯನ್ನು ಕಾಪಾಡಿಕೊಳ್ಳಲಾಗಿದೆ. ಆದರೆ, ಆಹಾರದ ಪ್ರಮಾಣ ಹೆಚ್ಚಿಸಬೇಕೆಂಬ ಮಾತು ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿ ಶುಚಿ-ರುಚಿ ಆಹಾರ ನೀಡಬೇಕು. 
-ಭ್ರಮರೇಶ್‌, ಔಷಧಿಗಳ ವಿತರಕ

ಕ್ಯಾಂಟೀನ್‌ಗಳಲ್ಲಿ ನೀಡಲಾಗುತ್ತಿರುವ ಆಹಾರದ ರುಚಿ ಚೆನ್ನಾಗಿದೆ. ಆದರೆ, ಮೊಸರನ್ನದಲ್ಲಿ ಮೊಸರು ಕಾಣದಾಗಿರುತ್ತದೆ. ಇದರೊಂದಿಗೆ ಆಹಾರ ಪ್ರಮಾಣವೂ ಕಡಿಮೆಯಿದ್ದು, ಪ್ರಮಾಣ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. 
-ಚೇತನ್‌, ಕ್ಯಾಬ್‌ ಚಾಲಕ

ಜಯನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ವಿತರಣೆ ಆರಂಭಿಸಿದ 30-40 ನಿಮಿಷದಲ್ಲಿ ಖಾಲಿಯಾಗುತ್ತದೆ. ಸಿಬ್ಬಂದಿ 300 ಜನರಿಗೆ ಆಹಾರ ನೀಡುವುದಾಗಿ ತಿಳಿಸುತ್ತಿದ್ದಾರೆ. ಆದರೆ, ನಿಜವಾಗಿಯೂ 300 ಜನರಿಗೆ ಆಹಾರ ನೀಡುತ್ತಿದ್ದಾರೆಯೇ ಎಂಬ ಸಂದೇಹವಿದೆ. 
-ತಿರುಪತಿ, ಆಟೋ ಚಾಲಕ

ಇಂದಿರಾ ಕ್ಯಾಂಟೀನ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರೆ ಬರುತ್ತಾರೆ. ಆದರೆ, ಸಾಕಷ್ಟು ಜನರು ಊಟ ಸಿಗದೆ ಹಿಂತಿರುಗುತ್ತಾರೆ. ಕ್ಯಾಂಟೀನ್‌ಗಳಿಗೆ ಆರ್ಥಿಕವಾಗಿ ಸಬಲರಾಗಿರುವರು ಸಹ ಹೆಚ್ಚು ಬರುತ್ತಿದ್ದು, ಬಡವರಿಗೆ ಮಾಡಿದ ಯೋಜನೆ ಬಳಸುವ ವಿದ್ಯಾವಂತರಾದವರು ಯೋಚಿಸಬೇಕು. 
-ರಾಜು, ಕ್ಯಾಬ್‌ ಚಾಲಕ

ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಿಸುತ್ತಿರುವ ಆಹಾರದ ರುಚಿ ಪರವಾಗಿಲ್ಲ. ಆದರೆ, ಅಪ್ಪಾಜಿ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಆಹಾರದಷ್ಟು ರುಚಿಯೂ ಇಲ್ಲ. ಅಲ್ಲಿ ನೀಡುವ ಆಹಾರದ ಪ್ರಮಾಣದಷ್ಟು ಸಹ ಇಲ್ಲ ನೀಡುತ್ತಿಲ್ಲ. 
-ಜ್ಯೋತಿ, ಗೃಹಿಣಿ

ಬೆಂಗಳೂರು ಪೇಟೆಯಲ್ಲಿ 10 ರೂ.ಗಳಿಗೆ ಏನು ಬರುತ್ತದೆ. ಕೆಲವರಿಗೆ ಉಪ್ಪು ಜಾಸ್ತಿ ಇರಬಾರದು, ಕೆಲವರಿಗೆ ಖಾರ ಜಾಸ್ತಿಯಿರಬಾರದು. ಕೆಲವರು ಆಹಾರ ಚೆನ್ನಾಗಿದ್ದರೂ ಟೀಕಿಸುತ್ತಾರೆ, ಚೆನ್ನಾಗಿಲ್ಲ ಎಂದರೂ ಟೀಕಿಸುತ್ತಾರೆ. ಅಂತಹವರಿಗೆ ವಿಶೇಷವಾಗಿ ಮಾಡಿಕೊಡಲು ಸಾಧ್ಯವೇ
-ಶರ್ಮಿನ್‌ ಪಾರ್ವತಿ, ಅಡುಗೆ ಕೆಲಸದವರು 

ನಮ್ಮ ಕಾಲೇಜು ಬಳಿಯಿರುವ ಹೋಟೆಲ್‌ನಲ್ಲಿ ಇಷ್ಟೇ ಆಹಾರ ನೀಡಲು 30-40 ರೂ. ಪಡೆಯುತ್ತಾರೆ. ಆದರೆ, ಇಂದಿರಾ ಕ್ಯಾಂಟೀನ್‌ನಲ್ಲಿ 10 ರೂ.ಗೆ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದು, ರುಚಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. 
-ಕೌಶಿಕ್‌, ಕಾಲೇಜು ವಿದ್ಯಾರ್ಥಿ

ಇಂದಿರಾ ಕ್ಯಾಂಟೀನ್‌ ಆರಂಭವಾದಾಗಿನಿಂದ ಹಲವಾರು ಬಾರಿ ಇಲ್ಲಿ ಊಟ ಮಾಡಿದ್ದೇನೆ. ಗುಣಮಟ್ಟ ಹಾಗೂ ರುಚಿಕರವಾಗಿ ಊಟ ವಿತರಿಸಲಾಗುತ್ತಿದ್ದು, ಊಟ ವಿತರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ. 
-ತೇಜಸ್‌, ಕಾಲೇಜು ವಿದ್ಯಾರ್ಥಿ

ಸ್ನೇಹಿತರೊಂದಿಗೆ ಇಸ್ಕಾನ್‌ಗೆ ಬಂದಿದ್ದೇವು. ಹಲವಾರು ಬಾರಿ ಮಾಧ್ಯಮಗಳಲ್ಲಿ ಇಂದಿರಾ ಕ್ಯಾಂಟೀನ್‌ ನೋಡಿದ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗೆ ಭೇಟಿ ನೀಡಿ ಊಟ ಮಾಡಿದ್ದೇವೆ. ಈ ಯೋಜನೆಯಿಂದ ಬಡವರಿಗೆ ಹೆಚ್ಚು ಅನುಕೂಲವಾಗಲಿದೆ. 
-ಅಶೋಕ್‌, ಕಾಲೇಜು ವಿದ್ಯಾರ್ಥಿ

ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ಕಡಿಮೆ ದರದಲ್ಲಿ ನೀಡಲು ಸಾಧ್ಯವಾಗುವಂತಹ ಗುಣಮಟ್ಟದ ಹಾಗೂ ರುಚಿಕರವಾದ ಊಟ ನೀಡುತ್ತಿದ್ದಾರೆ. ಆಹಾರದ ರುಚಿ ಹೇಗಿ ಎಂದು ನೋಡಲು ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದು ಉತ್ತಮವಾಗಿದೆ. 
-ಶ್ಯಾಮಲಾ, ಮಹಾಲಕ್ಷ್ಮೀಪುರ ನಿವಾಸಿ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next