Advertisement

ಇನ್ನೆರಡು ದಿನದಲ್ಲಿ ಕರಾವಳಿಗೆ ಮುಂಗಾರು

11:29 AM May 31, 2018 | Harsha Rao |

ಮಂಗಳೂರು: ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಕುಂಭದ್ರೋಣ ಮಳೆಯ ಆರ್ಭಟ ಕಡಿಮೆಯಾಗಿದ್ದು, ಹವಾಮಾನ ಇಲಾಖೆ ಪ್ರಕಾರ, ಮಂಗಳೂರಿನಲ್ಲಿ ಮಂಗಳವಾರ ದಿನ ಸುರಿದ ಮಳೆ ಪ್ರಮಾಣ 29 ಸೆಂ.ಮೀ. !
ಅಂದರೆ, ಇಲಾಖೆ  ಅಂಕಿ-ಅಂಶದ ಪ್ರಕಾರ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಬುಧವಾರ ಬೆಳಗ್ಗೆ 10 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ 29 ಸೆಂ.ಮೀ., ಬಂಟ್ವಾಳ ತಾಲೂಕಿನಲ್ಲಿ 13 ಸೆಂ.ಮೀ., ಪುತ್ತೂರು ತಾಲೂಕಿನಲ್ಲಿ 11 ಸೆಂ.ಮೀ., ಸುಳ್ಯ ತಾಲೂಕಿನಲ್ಲಿ 8 ಸೆಂ.ಮೀ., ಬೆಳ್ತಂಗಡಿ ತಾಲೂಕಿನಲ್ಲಿ 7 ಸೆಂ. ಮೀ.ನಷ್ಟು ಮಳೆಯಾಗಿದೆ. ಆ ಮೂಲಕ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನಕ್ಕೆ 66 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.

Advertisement

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 5 ಸೆಂ.ಮೀ., ಉಡುಪಿಯಲ್ಲಿ 17 ಸೆಂ.ಮೀ., ಕಾರ್ಕಳದಲ್ಲಿ 12 ಸೆಂ.ಮೀ. ಮಳೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಒಟ್ಟು 34 ಸೆಂ. ಮೀಟರ್‌ನಷ್ಟು ಮಳೆ ಬಂದಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿಗೆ ಮುಂಗಾರು
ಕೇರಳ ಕರಾವಳಿ ತೀರಕ್ಕೆ ಈಗಾಗಲೇ ಮುಂಗಾರು ಪ್ರವೇಶಿಸಿದ್ದು, ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದ ಕರಾವಳಿ ತೀರಕ್ಕೆ ಗುರುವಾರ ಅಥವಾ ಶುಕ್ರವಾರದ ವೇಳೆಗೆ ಮುಂಗಾರು ಪ್ರವೇಶಿಸುವ ಮೂಲಕ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲ ಶುರುವಾಗುವ ಮುನ್ಸೂಚನೆಯಿದೆ. ಈ ನಡುವೆ, ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮದಿಂದಲೂ ಮುಂದಿನ ಮೂರು ದಿನ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ನಾಳೆಯಿಂದ ಮೀನುಗಾರಿಕೆ ಬಂದ್‌
ರಾಜ್ಯದಲ್ಲಿ ಈ ಋತುವಿನ ಮೀನುಗಾರಿಕೆ ಪೂರ್ಣ ಗೊಂಡಿದ್ದು, ಜೂನ್‌ 1ರಿಂದ ಕರಾವಳಿಯಲ್ಲಿ ಎರಡು ತಿಂಗಳು ಯಾಂತ್ರೀಕೃತ ಬೋಟ್‌ಗಳ ಮೀನುಗಾರಿಗೆಯನ್ನು ನಿಷೇಧಿಸಲಾಗಿದೆ. ಹೀಗಾಗಿ, ಶುಕ್ರವಾರದಿಂದ  ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ. ಮುಂಗಾರು ಮಳೆ ಪ್ರಾರಂಭ ವಾಗುತ್ತಿದ್ದಂತೆ ಪಶ್ಚಿಮ ಕರಾವಳಿಯಲ್ಲಿ ಯಾಂತ್ರೀ ಕೃತ ಮೀನುಗಾರಿಕೆಗೆ ಜುಲೈ 31ರವರೆಗೆ ನಿಷೇಧ ವಿರುತ್ತದೆ. ಮೀನುಗಳು ಸಂತಾನೋತ್ಪತ್ತಿ ಮಾಡುವ
ಅವಧಿ ಮಳೆಗಾಲ. ಈ ವೇಳೆ ಯಾಂತ್ರಿಕ ದೋಣಿಗಳು ನೀರಿಗೆ ಇಳಿದರೆ ಅವುಗಳ ಸಂತಾನೋತ್ಪತ್ತಿಗೆ ತೊಂದರೆಯಾಗಿ ಪೆಟ್ಟು ಬೀಳಲಿದೆ. 

ಕೆಲವೆಡೆ ತುಸು ಮಳೆ
ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾದ ವರದಿಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆ ಕೆಲ ಹೊತ್ತು ತುಂತುರು ಮಳೆ ಬಂತಾದರೂ, ಆ ಬಳಿಕ ಮೋಡಮುಸುಕಿದ ವಾತಾವರಣವಿತ್ತು. ಸಿದ್ದಾಪುರ, ಶಿರ್ವ, ಸುಬ್ರಹ್ಮಣ್ಯ, ಕಾಪು ಸೇರಿ ದಂತೆ ಇನ್ನಿತರ ಪ್ರದೇಶಗಳಲ್ಲಿ ಬೆಳಗಿನ ಹೊತ್ತು ಸಾಧಾರಣ ಮಳೆಯಾದ ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next