ಬೀಳಗಿ: ಮುಂಗಾರು ಮಳೆ ವಾಡಿಕೆಗಿಂತ ತುಸು ಹೆಚ್ಚಾಗಿಯೇ ಸುರಿದಿದೆ. ವರುಣದೇವನ ಕೃಪೆಯಿಂದ ರೈತನ ಮೊಗದಲ್ಲಿ ಭವಿಷತ್ತಿನ ಆಶಾಭಾವನೆ ಎದ್ದು ಕಾಣುತ್ತಿದೆ. ತಾಲೂಕಿನಾದ್ಯಂತ ಬಿತ್ತನೆ ಚುರಾಕಾಗಿ ಸಾಗಿದೆ.
ಕೃಷಿಭೂಮಿ 48 ಸಾವಿರ ಹೆಕ್ಟೇರ್: ಕೃಷಿ ಇಲಾಖೆಯ ದಾಖಲೆಯ ಪ್ರಕಾರ ತಾಲೂಕಿನಲ್ಲಿ ಒಟ್ಟು 48200 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಇದರಲ್ಲಿ ಈಗಾಗಲೇ 13 ಸಾವಿರ ಹೆಕ್ಟೇರ್‌ದಷ್ಟು ಕಬ್ಬುಬೆಳೆ ಮತ್ತು 1 ಸಾವಿರ ಹೆಕ್ಟೇರ್‌ದಷ್ಟು ಈರುಳ್ಳಿ ಬೆಳೆಯಲಾಗುತ್ತಿದೆ. ಮುಂಗಾರು ಮಳೆಯ ಉತ್ತಮ ಫಲಿತಾಂಶದಿಂದ ಸುಮಾರು 1500 ಹೆಕ್ಟೇರ್ ಭೂಮಿಯ ಒಡಲಲ್ಲಿ ಈಗಾಗಲೇ ವಿವಿಧ ಬೀಜಗಳ ಬಿತ್ತನೆ ಮಾಡಲಾಗಿದೆ. ಇನ್ನು 8 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಬೇಕು. ಒಟ್ಟು 23 ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆಯ ಗುರಿ ಹೊಂದಲಾಗಿದೆ.
ಬಿತ್ತನೆ ಕ್ಷೇತ್ರ: ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 500 ಹೆಕ್ಟೇರ್‌ದಲ್ಲಿ ಸಜ್ಜಿ, ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಮತ್ತು 100 ಹೆಕ್ಟೇರ್ ಭೂಮಿಯಲ್ಲಿ ಸೂರ್ಯಕಾಂತಿ ಬಿತ್ತನೆಯನ್ನು ಈಗಾಗಲೇ ಮಾಡಲಾಗಿದೆ. ಇನ್ನು ಬಿತ್ತನೆ ಕೆಲಸ ಭರದಿಂದ ಸಾಗಿದೆ.
ಬೀಜ ದಾಸ್ತಾನು: ಮುಂಗಾರು ಮಳೆಯ ಶುಭಾರಂಭದಿಂದ ತಾಲೂಕಿನ ರೈತರು ಬಿತ್ತನೆಯಲ್ಲಿ ತಲ್ಲೀಣರಾಗಿದ್ದಾರೆ. ರೈತರ ಬಿತ್ತನೆಗೆ ಯಾವುದೇ ಕೊರತೆಯಾಗದಂತೆ ಕೃಷಿ ಇಲಾಖೆ ಬೀಜಗಳ ದಾಸ್ತಾನು ಮಾಡಿಕೊಂಡಿದೆ. ಹೆಸರು 2 ಕ್ವಿಂಟಲ್, ತೊಗರಿ 1 ಕ್ವಿಂಟಲ್, ಉದ್ದು 2 ಕ್ವಿಂಟಲ್, ಸೂಯಾಬಿನ್ 8 ಕ್ವಿಂಟಲ್, ಮೆಕ್ಕೆಜೋಳ 60 ಕ್ವಿಂಟಲ್ ಹಾಗೂ ಸಜ್ಜಿ 4 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ. ಅಲ್ಲದೆ, 6 ಕ್ವಿಂಟಲ್ ಹೆಸರು, 13 ಕ್ವಿಂಟಲ್ ತೊಗರಿ, 1 ಕ್ವಿಂಟಲ್ ಉದ್ದು, 1 ಕ್ವಿಂಟಲ್ ಸೊಯಾಬಿನ್, 64 ಕ್ವಿಂಟಾಲ್ ಮೆಕ್ಕೆಜೋಳ ಹಾಗೂ 8 ಕ್ವಿಂಟಾಲ್ ಸೂರ್ಯಕಾಂತಿ ಬೀಜವನ್ನು ಈಗಾಗಲೆ ಮಾರಾಟ ಮಾಡಲಾಗಿದೆ. ಸುಮಾರು ಒಂದು ಸಾವಿರ ರೈತರು ಬೀಜವನ್ನು ಪಡೆದುಕೊಂಡಿದ್ದಾರೆ ಹಾಗೂ ರೈತರಿಗೆ ಅಗತ್ಯವಿರುವ ಜಿಂಕ್ 60 ಕ್ವಿಂಟಾಲ್, ಮೈಕ್ರೋಟೋನ್ ಲಿಕ್ವಿಡ್ 600 ಲೀಟರ್ ಮತ್ತು ಅಗತ್ಯ ಕೀಟನಾಶಕ ದಾಸ್ತಾನು ಇರುತ್ತದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಕಾರಿ ಎಸ್.ಎಸ್.ತಟ್ಟಿಮನಿ ತಿಳಿಸಿದ್ದಾರೆ.
•ರವೀಂದ್ರ ಕಣವಿ