Advertisement

ಅಂಡಮಾನ್‌ ದಕ್ಷಿಣ ಭಾಗಕ್ಕೆ ಅಪ್ಪಳಿಸಿದ ಮುಂಗಾರು

06:05 AM May 26, 2018 | Team Udayavani |

ಬೆಂಗಳೂರು/ಮಂಗಳೂರು: ನಿರೀಕ್ಷೆಯಂತೆ ಮುಂಗಾರು ಅಂಡಮಾನ್‌ನ ದಕ್ಷಿಣ ಭಾಗಕ್ಕೆ ಅಪ್ಪಳಿಸಿದ್ದು, ಇನ್ನೆರಡು
ದಿನಗಳಲ್ಲಿ ಕೇರಳದ ಕರಾವಳಿ ತೀರಕ್ಕೆ ಆಗಮಿಸುವ ಮುನ್ಸೂಚನೆಯಿದೆ.

Advertisement

ಹೀಗಾಗಿ, ಕರಾವಳಿ ಭಾಗದಲ್ಲಿ ಜೂನ್‌ ಮೊದಲ ವಾರ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಹವಾಮಾನ
ಇಲಾಖೆ ತಿಳಿಸಿದೆ. ಈ ಮಧ್ಯೆ, ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 7 ಸೆಂ.ಮೀ.ಮಳೆ ಸುರಿಯಿತು.

ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 41.6ಡಿ.ಸೆ. ತಾಪಮಾನ ದಾಖಲಾಯಿತು. ಅರಬ್ಬಿ ಸಮುದ್ರದಲ್ಲಿ ಈಗಾಗಲೇ “ಮೆಕು°’ ಹೆಸರಿನ ಅತಿ ಪ್ರಬಲ ಚಂಡಮಾರುತ ಸೃಷ್ಟಿಯಾಗಿದ್ದು, ಅದು ಒಮನ್‌ ಕಡೆಗೆ ಚಲಿಸುತ್ತಿದೆ. ಈ ಚಂಡಮಾರುತದಿಂದಾಗಿ, ಮುಂಗಾರು ಮಳೆ ದೇಶದ ಕರಾವಳಿ ತೀರವನ್ನು ಪ್ರವೇಶಿಸುವುದಕ್ಕೆ ಯಾವುದೇ ಅಡ್ಡಿಯುಂಟಾಗುವುದಿಲ್ಲ. ಆದರೆ, ಈ ಚಂಡಮಾರುತದ ಪ್ರಭಾವದಿಂದ ಗೋವಾ, ಮುಂಬೈ ಮತ್ತು ರಾಜ್ಯದ ಕರಾವಳಿಯಲ್ಲಿ ಅಲೆಗಳ ಅಬ್ಬರ ಸ್ವಲಮಟ್ಟಿಗೆ ಜೋರಾಗುವ ಸಾಧ್ಯತೆಯಿದೆ.

ಕೆಲವು ಕಡೆಗಳಲ್ಲಿ ದಟ್ಟ ಮೋಡ ಕವಿದು ಭಾರೀ ಮಳೆಯಾಗುವ ಸಂಭವ ಕೂಡ ಇದೆ. ಮುಂದಿನ ಮೂರ್‍ನಾಲ್ಕು ದಿನಗಳ ಕಾಲ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ಬಿರುಗಾಳಿ ಜತೆಗೆ ಗುಡುಗು-ಸಿಡಿಲು ಸಹಿತ ಸಾಧಾರಣದಿಂದ ಕೂಡಿದ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಗಾಳಿಯ ವೇಗ ಕೂಡ ಹೆಚ್ಚಾಗಲಿದ್ದು, ಮೀನುಗಾರರು ಮೇ 26ರವರೆಗೆ
ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಬೆಂಗಳೂರಲ್ಲಿ ಭಾರೀ ಮಳೆ: ಈ ಮಧ್ಯೆ, ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನದ ನಂತರ ಭಾರೀ
ಮಳೆಯಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

Advertisement

ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಯಡ್ರಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಭಾರೀ ಬಿರುಗಾಳಿ ಮಳೆಯಿಂದಾಗಿ ನೆಲಕ್ಕೆ ಹರಿದು ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ, ಗೌಡ್ರು ಯಲ್ಲಪ್ಪ(26) ಎಂಬುವರು ಮೃತಪಟ್ಟಿದ್ದಾರೆ.ಕರಾವಳಿಯ ಹಲವೆಡೆ ಮಳೆಯಾಗಿದ್ದು, ಕುಮಾರಧಾರಾ ಹೊಳೆಗೆ ನಿರ್ಮಿಸಿದ್ದ ಪಾಲೋಳಿ ಸೇತುವೆಯ ಮೇಲೆ ನೆರೆಯ ನೀರು ಹರಿಯಲಾರಂಭಿಸಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾಡ್ಲಹಳ್ಳಿ ಗಾಮದಲ್ಲಿ ಸಿಡಿಲು ಬಡಿದು,ವಿದ್ಯುತ್‌ ತಂತಿ ತುಂಡಾಗಿ ಬಿದ್ದು, ರಮೇಶ ಎಂಬುವರ ಮನೆಯಲ್ಲಿದ್ದ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ.

ಮೈಸೂರಿನಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಚಾಮುಂಡಿಬೆಟ್ಟದ ಪ್ರವೇಶ ದ್ವಾರದ ಬಳಿ ಮರದ ಬೃಹತ್‌ 
ಕೊಂಬೆಯೊಂದು ಮುರಿದು ರಸ್ತೆಗೆ ಬಿತ್ತು.ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಇದೇ  ವೇಳೆ,
ಚಾಮರಾಜನಗರ, ಮಂಡ್ಯ, ಕೋಲಾರ,ನೆಲಮಂಗಲ ಸೇರಿ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next