Advertisement

ಸಂಸತ್‌ನ ಮುಂಗಾರು ಅಧಿ­ವೇಶನ; ಸದನ ಸಮರಕ್ಕೆ ಕಾಂಗ್ರೆಸ್‌ ಸಜ್ಜು

12:24 AM Sep 09, 2020 | mahesh |

ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿ­ವೇಶನ ಸೆ. 14ರಿಂದ ಶುರುವಾಗಲಿದ್ದು, ಸದನದಲ್ಲಿ ಸರಕಾರವನ್ನು ವಿವಿಧ ವಿಚಾರ­ಗಳ ಮೂಲಕ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ರಣತಂತ್ರ ರೂಪಿಸಿದೆ. ಈ ಬಗ್ಗೆ ಮಂಗಳವಾರ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಇತರ ವಿಪಕ್ಷಗಳ ಜತೆಗೂಡಿ ಲೋಕಸಭೆಯಲ್ಲಿ ಉಪ ಸಭಾ­ಧ್ಯಕ್ಷರ ಸ್ಥಾನಕ್ಕೆ ಮತ್ತು ರಾಜ್ಯಸಭೆಯಲ್ಲಿನ ಉಪ ಸಭಾಪತಿ ಸ್ಥಾನಕ್ಕೆ ಜಂಟಿಯಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ.

Advertisement

ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿಯೇ ಉಪ ಸಭಾಪತಿ ಹುದ್ದೆಗೆ ಆಯ್ಕೆ ನಡೆಯಬೇಕಾಗಿತ್ತು. ಕೋವಿಡ್ ಹಿನ್ನೆಲೆ ಅಧಿವೇಶನ ಮುಂದೂಡಲಾಗಿತ್ತು. ಲೋಕಸಭೆ, ರಾಜ್ಯಸಭೆ ಉಪ ಸಭಾಧ್ಯಕ್ಷ, ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೆ. 11ರಂದು ಕೊನೆಯ ದಿನ. ಹಲವು ವಿಚಾರಗಳಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಈಗ ಸದನದಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸಲು ಅಣಿಯಾಗುತ್ತಿವೆ.

1999ರ ಡಿಸೆಂಬರ್‌ನಲ್ಲಿ ಅಟಲ್‌ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೇರಿದಾಗ ಕಾಂಗ್ರೆಸ್‌ನ ಪಿ.ಎಂ. ಸಯೀದ್‌ ಲೋಕಸಭೆಯ ಉಪಸಭಾಪತಿಯಾಗಿದ್ದರು. 2004ರ ಯುಪಿಎ ಸರಕಾರದ ಅವಧಿಯಲ್ಲಿ ಶಿರೋಮಣಿ ಅಕಾಲಿ ದಳದ ಚರಣ್‌ ಜಿತ್‌ ಸಿಂಗ್‌ ಅತ್ವಾಲ್‌ ಈ ಹುದ್ದೆಗೇರಿದ್ದರು. 2014ರಲ್ಲಿ ಮೋದಿ ನೇತೃತ್ವದ ಎನ್‌ಡಿಎ ಗೆದ್ದ ಸಂದರ್ಭದಲ್ಲಿ ಎಐಎಡಿಎಂಕೆಯ ಡಾ| ಎಂ. ತಂಬಿದೊರೈಗೆ ಉಪಸಭಾಪತಿ ಸ್ಥಾನ ನೀಡಲಾಗಿತ್ತು.

ವಿಧೇಯಕಗಳ ಅಂಗೀಕಾರಕ್ಕೆ ಮುದ್ರಿತ ಮತಪತ್ರ ಬಳಕೆ: ಸಂಸತ್‌ ಅಧಿವೇಶನದಲ್ಲಿ ಮಸೂದೆಗಳ ಅಂಗೀ­ಕಾರಕ್ಕೆ ನಡೆಯಲಿರುವ ಮತದಾನಕ್ಕೆ ಮತಪತ್ರಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಈ ಮೊದಲು ಇದ್ದಂತೆ ವಿದ್ಯುನ್ಮಾನ ಮತ ವ್ಯವಸ್ಥೆಯನ್ನು ಹಾಲಿ ಅಧಿವೇಶನದಲ್ಲಿ ಬಳಕೆ ಮಾಡದೇ ಇರುವ ನಿರ್ಧಾರಕ್ಕೆ ಬರಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ ಪ್ರತ್ಯೇಕ ಸಮಯದಲ್ಲಿ ಕಲಾಪ ನಡೆಸಲಿವೆ. ಲೋಕಸಭೆ, ರಾಜ್ಯಸಭೆಯ ಕೊಠಡಿಗಳಲ್ಲಿ ಮತ್ತು ಗ್ಯಾಲರಿಗಳಲ್ಲಿ ಕುಳಿತವರಿಗೆ ಮತದಾನದ ಅಗತ್ಯ ವಿದ್ದಲ್ಲಿ ಮುದ್ರಿತ ಮತಪತ್ರ ನೀಡಲಾಗುತ್ತದೆ. ಅದರಲ್ಲಿ ನಿಗದಿತ ಮಸೂದೆಯ ಪರ ಮತ್ತು ವಿರೋಧ ಎಂಬ ಎರಡು ಆಯ್ಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸ­ಲಾಗಿರುತ್ತದೆ. ವಿದ್ಯುನ್ಮಾನ ಮತ ವ್ಯವಸ್ಥೆಯಲ್ಲಿ 5 ನಿಮಿಷಗಳಲ್ಲೇ ಮತದಾನದ ಫ‌ಲಿತಾಂಶ ಸಿಗುತ್ತಿತ್ತು. ಆದರೆ ಮತಪತ್ರ ಬಳಸಿದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 30 ನಿಮಿಷಗಳು ಬೇಕಾಗುತ್ತವೆ. ಹಾಲಿ ಅಧಿವೇಶನದಲ್ಲಿ ಕೇಂದ್ರ ಸರಕಾರ 11 ಅಧ್ಯಾದೇಶಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next