Advertisement
ನೀರು ಸಂಗ್ರಹಣೆಯತ್ತ ಗಮನಹರಿಸೋಣಜಿಲ್ಲೆಯಾದ್ಯಂತ ಹಲವಾರು ಮದಕಗಳು, ಪಳ್ಳ, ಕೆರೆಗಳಿದ್ದರೂ ನಿರ್ವಹಣೆಯ ಕೊರತೆಯಿಂದ ಸಮಯಕ್ಕೂ ಮುನ್ನವೇ ನೀರು ಬತ್ತಿ ಬರಡಾಗುತ್ತವೆ. ಅವುಗಳನ್ನು ಸ್ವತ್ಛಗೊಳಸಿ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡುವ ಕಾರ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ತೋರುವ ಔದಾಸೀನ್ಯ ಇಂದು ನೀರಿನ ಸಮಸ್ಯೆ ಹೆಚ್ಚಾಗಲು ಕಾರಣ ಎಂದರೆ ತಪ್ಪಾಗದು. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಇಂತಹ ನೀರು ಸಂಗ್ರಹವಾಗುವ ಆ ಮೂಲಕ ಅಂತರ್ಜಲ ಮಟ್ಟ ಬೇಗನೆ ಕುಸಿಯದಂತೆ ಸಂರಕ್ಷಿಸುವ ಪ್ರಾಕೃತಿಕ ಮೂಲಗಳನ್ನು ಪುನಶ್ಚೇತನ ಗೊಳಿಸುವತ್ತ ಸಕಾಲದಲ್ಲಿ ಗಮನಹರಿಸಿದರೆ ಮುಂದೆ ಎದುರಾಗುವ ನೀರಿನ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ.
ಪುತ್ತಿಗೆ ಪಂಚಾಯತ್, ಎಣ್ಮಕಜೆ ಪಂಚಾಯತ್ ಸೇರಿದಂತೆ ಜಿಲ್ಲೆಯ ಹೆಚ್ಚಿನ ಪಂಚಾಯತ್‌ಗಳಲ್ಲೂ ಮದಕಗಳು ನೀರಿಲ್ಲದೆ ಸೊರಗುತ್ತಿವೆ. ಎಣ್ಮಕಜೆ ಪಂಚಾಯತ್‌ನ ಬೆದ್ರಂಪಳ್ಳದಲ್ಲಿರುವ ಪಳ್ಳವು ಶಿಥಿಲಗೊಂಡಿದ್ದು ಸೂಕ್ತ ರೀತಿಯಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆಯೂ ಕಾಣುವುದಿಲ್ಲ. ಈ ಪಳ್ಳ ಕೇವಲ ಒಂದು ನೆನಪಾಗಿ ಉಳಿಯುವ ಮೊದಲು ಅಧಿಕೃತರು ಇತ್ತ ಗಮನಹರಿಸಬೇಕಾಗಿದೆ. ಮೊದಲು ಪಳ್ಳ, ಮದಕಗಳಲ್ಲಿ ನೀರು ತುಂಬಿದ್ದಾಗ ಪರಿಸರದ ಬಾವಿಗಳಲ್ಲಿ ನೀರಿನ ಮಟ್ಟ ಬೇಗನೆ ಕುಸಿಯುತ್ತಿರಲಿಲ್ಲ. ಆದರೆ ಇಂದು ಸಂಗ್ರಹವಾಗುವ ನೀರು ಕಡಿಮೆಯಾದಂತೆ ಅಂತರ್ಜಲದ ಮಟ್ಟ ಕುಸಿದು ಬಾವಿಗಳು, ಕೊಳವೆ ಬಾವಿಗಳೂ ಬೇಗನೆ ಬತ್ತಿ ಹೋಗುತ್ತಿವೆ.
Related Articles
ಕಾಸರಗೋಡು ನಗರ ಮತ್ತು ಸುತ್ತುಮುತ್ತಲ ಜನತೆಗೆ ನೀರು ಸರಬರಾಜು ಮಾಡಲು ಜಲ ಪ್ರಾಧಿಕಾರ ಆಶ್ರಯಿಸಿರುವ ಏಕೈಕ ಜಲಮೂಲವೆಂದರೆ ಬಾವಿಕ್ಕೆರೆ. ಸಾಧಾರಣವಾಗಿ ಮೇ ಮಾಸದಲ್ಲಿ ಬರುವ ಉಪ್ಪುನೀರು ಈ ವರ್ಷ ಎಪ್ರಿಲ್ ತಿಂಗಳಿನಲ್ಲಿಯೇ ಬರಲಾರಂಭಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ನೀರು ಸರಬರಾಜು ನಿಲುಗಡೆಗೊಳಿಸಿತು.
Advertisement
ನೀರಿಗಾಗಿ ಕಾದಿರುವ ಜನತೆ ಸುಮಾರು ಎರಡು ತಿಂಗಳಿಂದೀಚೆಗೆ ಪೈಪ್ ನೀರಿಗಾಗಿ ಕಾದಿರುವ ಜನತೆಯನ್ನು ಮುಂಗಾರು ಮಳೆಯೂ ನಿರಾಸೆಗೊಳಿಸಿದ್ದು ಬಾವಿಕ್ಕೆರೆಯಲ್ಲಿ ತಕ್ಕಷ್ಟು ನೀರು ಸಂಗ್ರಹವಾಗಿಲ್ಲದ ಕಾರಣ ನೀರು ಸರಬರಾಜು ಇನ್ನೂ ಪ್ರಾರಂಭವಾಗಿಲ್ಲ.
ನಿಜವಾಯಿತೇ ಸ್ಕೈಮೆಟ್ ಭವಿಷ್ಯ?
ದೇಶದಲ್ಲಿ ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತಲೂ ಕಡಿಮೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಈಗಾಗಲೇ ಮೇ ಭವಿಷ್ಯ ನುಡಿದಿದೆ. ಜೂನ್ ತಿಂಗಳು ಕಳೆದು ಜುಲೈ ಹತ್ತಿರವಾಗುತ್ತಿದ್ದರೂ ಬಾನಿನಲ್ಲಿ ಕರಿಮೋಡ ಗಳಿಲ್ಲ. ಮಿಂಚು, ಗುಡುಗು, ಸಿಡಿಲಿನ ಸುಳಿವಿಲ್ಲ. ಸಾಮಾನ್ಯವಾಗಿ ಎಪ್ರಿಲ್ ಮಧ್ಯಭಾಗದಲ್ಲಿ ಮತ್ತು ಮೇ ಕೊನೆಯ ವಾರದಲ್ಲಿ ಸುರಿಯುವ ಮಳೆಯೂ ಈ ವರ್ಷ ಸುರಿಯಲಿಲ್ಲ. ಆದುದರಿಂದ ನೀರಿನ ಸಮಸ್ಯೆ ಇಷ್ಟೊಂದು ಜಟಿಲವಾಗಿ ಕಾಡಲಾರಂಭಿಸಿದೆ. ಮಳೆ ಕೊರತೆ ಆತಂಕ
ಮುಖ್ಯವಾಗಿ ಮುಂಗಾರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುವ ನಮ್ಮ ರಾಜ್ಯವು ಮುಂಗಾರು ವಿಳಂಬದಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ಗದ್ದೆ ಬೇಸಾಯ ಪ್ರಾರಂಭಿಸಿರುವ ರೈತರಲ್ಲಿ ಮಳೆಯ ಕೊರತೆ ಆತಂಕ ಮೂಡಿಸಿದೆ. ಇದರಿಂದಾಗಿ ಭತ್ತದ ಇಳುವರಿ ಗಮನೀಯವಾಗಿ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಮುಂಗಾರು ಮಳೆಯಲ್ಲಿ ಉಂಟಾಗುವ ವ್ಯತ್ಯಯ ಕೃಷಿಕರಿಗೆ ಕೃಷಿ ಮೇಲಿನ ಆಸಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.
-ಕರುಣಾಕರನ್ ಕೆ.,
ಸಹಾಯಕ ಕೃಷಿ ಅಧಿಕಾರಿ,
ಸ್ಟೇಟ್ ಸೀಡ್ ಫಾರ್ಮ್, ಕಾಸರಗೋಡು – ಅಖೀಲೇಶ್ ನಗುಮುಗಂ