ಕಿನ್ನಿಗೋಳಿ: ಕಿನ್ನಿಗೋಳಿ ಭಾಗ ದಲ್ಲಿ ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ನಾಟಿ ಕಾರ್ಯ ಆರಂಭವಾಗಿಲ್ಲ, ಮುಂಗಾರು ಮಳೆ ಇನ್ನೂ ಬರದ ಹಿನ್ನೆಲೆ ರೈತರಿಗೆ ಆತಂಕ ಉಂಟಾಗಿದೆ. ಮುಂಗಾರು ಆರಂಭವಾಗುತ್ತಿದ್ದಂತೆ ಮಳೆಗಾಲದ ಭತ್ತದ ಬೇಸಾಯಕ್ಕೆ ಮುನ್ನುಡಿಯಂತೆ ನೇಜಿ ಹಾಕಿ ನಾಟಿ ಆರಂಭವಾಗಬೇಕಿತ್ತು .
ಆದರೇ ಈ ವರ್ಷ ಮುಂಗಾರು ಮಳೆ ಇನ್ನೂ ಬಾರ ದೇಹಿನ್ನಡೆ ಆಗಿದೆ.ಕಿನ್ನಿಗೋಳಿ ಸಮೀಪದ ಪಂಜಬೈಲ ಗುತ್ತು ಸುಮಾರು 10 ಎಕ್ರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ ನಾಟಿ ಕಾರ್ಯಕ್ಕೆ ತಯಾರು ಮಾಡಲಾಗಿದೆ. ಭದ್ರ ತಳಿಯ ನಾಟಿ ಮಾಡಲಾಗಿದ್ದು 110 ದಿನದಲ್ಲಿ ಕಟಾವಿಗೆ ಬರುತ್ತಿದೆ. ಆದರೇ ಮಳೆ ಇಲ್ಲದೆ ನಾಟಿ ಮಾಡ ಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಗದ್ದೆಗಳು ನೀರು ಇಲ್ಲದೆ ಬತ್ತಿವೆ. ನಾಟಿಗೆ ತಯಾರು ಮಾಡಲಾಗಿದ್ದ ನೇಜಿ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ಇನ್ನು ಒಂದು ವಾರ ಮಳೆ ಬರದಿದ್ದರೆ ಪಂಜದಲ್ಲಿ ನಂದಿನಿ ನದಿಗೆ ಅಣೆಕಟ್ಟೆಗೆ ಹಾಕಲಾಗಿದ್ದ ಹಲಗೆ ತೆಗೆಯುವುದರಿಂದ ನದಿಯಲ್ಲಿ ಉಪ್ಪು ನೀರಿನ ಬಾಧೆ ಕಾಣಿಸಿಕೊಳ್ಳಲಿದ್ದು ಕುಡಿಯುವ ನೀರಿಗೂ ಕೃಷಿಗೂ ಹಾನಿ ಉಂಟಾಗಲಿದೆ.
ಪಂಜ ಉಲ್ಯ ಪ್ರದೇಶದಲ್ಲಿ ನಂದಿನಿ ನದಿಗೆ ಕಳೆದ ಕೆಲವು ವರ್ಷಗಳ ಹಿಂದೆ ತಡೆಗೋಡೆ ಮಾಡಲಾಗಿತ್ತು. ಆದರೆ ತಡೆಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟು ಹಾನಿಗೊಂಡು ಮಳೆಗಾಲದಲ್ಲಿ ನೆರೆ ಬಂದ ಸಂದರ್ಭದಲ್ಲಿ ಕೆಲವು ಭಾಗಗಳು ಕೊಚ್ಚಿ ಹೋಗಿದ್ದು ಇನ್ನು ಮುಂದಕ್ಕೆ ಎಲ್ಲ ಮಳೆಗಾಲದಲ್ಲಿ ನೆರೆ ಸಮಸ್ಯೆ ಉಂಟಾಗಲಿದೆ ಎಂದು ಅಲ್ಲಿನ ಕೃಷಿಕ ಪಂಜ ಬೈಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ತಡೆಗೋಡೆ ಇಲ್ಲದೆ ಗದ್ದೆಗಳು ಮುಳುಗಡೆ ಭೀತಿ
ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲಗುತ್ತು, ಉಲ್ಯ ಪ್ರದೇಶಗಳು ನೆರೆ ಹಾಗೂ ನದಿ ಬದಿಯ ಭತ್ತದ ಕೃಷಿಯ ಭೂಮಿಯಾಗಿದ್ದು, ಮಳೆಗಾಲದಲ್ಲಿ ಈ ಪ್ರದೇಶಗಳು ಮುಳುಗಡೆ ಆಗುತ್ತಿವೆ. ನಾಟಿ ಮಾಡಿದ ಗದ್ದೆಗಳು ಮುಳುಗಡೆಯಾದರೆ ನಷ್ಟ ಉಂಟಾಗುತ್ತಿದೆ ಎಂಬುದು ಅಲ್ಲಿನ ಕೃಷಿಕರಾದ ಚಂದ್ರಹಾಸ ಶೆಟ್ಟಿ ಪಂಜ ಅವರ ಅಭಿಪ್ರಾಯವಾಗಿದೆ.
Related Articles
- ರಘನಾಥ ಕಾಮತ್ ಕೆಂಚನಕೆರೆ