Advertisement
ಸಕಾಲದಲ್ಲಿ ಮಳೆ ಸುರಿದಿದ್ದರೆ ಈವೇಳೆಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಂಡು , ಮೇಲುಗೊಬ್ಬರ ನೀಡಲು, ಕಳೆ ತೆಗೆಯುವುದು ಮೊದಲಾದ ಕೆಲಸಗಳನ್ನು ರೈತರು ಮಾಡಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಬಹು ತೇಕ ರೈತರು ಇನ್ನೂ ಮೊದಲ ಬಾರಿ ಉಳುಮೆಯನ್ನೇ ಮಾಡಿಲ್ಲ. ಬಿತ್ತನೆಗೆ ಭೂಮಿಯನ್ನು ಹದಗೊಳಿಸಿಲ್ಲ, ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಕಾಣುತ್ತಿದೆ.
Related Articles
Advertisement
ಅಲ್ಪಾವಧಿ ತಳಿಗಳಿಗೆ ಶಿಫಾರಸ್ಸು: ಜಿಲ್ಲೆಯಲ್ಲಿ ಮುಂಗಾರು ಎರಡು ತಿಂಗಳಾದರೂ ಸಮರ್ಪಕವಾಗಿ ಸುರಿಯದ ಹಿನ್ನೆಲೆಯಲ್ಲಿ ತಡವಾಗಿ ಬಿತ್ತನೆ ಕಾರ್ಯ ನಡೆಯಬಹುದು ಎಂದು ಅಂದಾಜಿಸಿರುವ ಕೃಷಿ ಇಲಾಖೆ ಅಧಿಕಾರಿಗಳು ರಾಗಿ ಬಿತ್ತನೆಗೆ ಅಲ್ಪಾವಧಿ ತಳಿಗಳನ್ನು ಶಿಫಾರಸ್ಸು ಮಾಡಿದ್ದಾರೆ. ಐದು ತಿಂಗಳುಗಳ ಅವಧಿಯ ಎಂಆರ್ ತಳಿಯ ರಾಗಿಗಳು ಸೂಕ್ತವಲ್ಲದಿದ್ದು, ಜಿಲ್ಲೆಯಲ್ಲಿ ಬಿತ್ತನೆ ಮಾಡಲು 95 ರಿಂದ 110 ದಿನಗಳ ಒಳಗೆ ಕಟಾವಗೆ ಬರುವ ರಾಗಿ ತಳಿಗಳಾದ ಎಂ.ಎಲ್.65, ಇಸಿ-28,ಜಿಪಿಯು-28, ಕೆಎಂಆರ್-301 ತಳಿಯ ರಾಗಿಗಳನ್ನು ಬಿತ್ತನೆ ಮಾಡುವಂತೆ ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.
ತಾಲೂಕಿನಲ್ಲಿ ಬಿತ್ತನೆಗೆ ಕೇವಲ 20 ದಿನ ಬಾಕಿ: ರಾಮನಗರ ಜಿಲ್ಲೆಯಲ್ಲಿ ಮಾಗಡಿ ತಾಲೂಕನ್ನು ಹೊರತು ಪಡಿಸಿದರೆ ಉಳಿದ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಜು.15ರಿಂದ ಆ.15 ಒಳಗೆ ಬಿತ್ತನೆ ಕಾರ್ಯಗಳು ನಡೆಯುತ್ತವೆ. ಜಿಲ್ಲೆಯ ಪ್ರಮುಖ ಮಳೆ ಆಶ್ರಿತ ಬೆಳೆಯಾಗಿರುವ ರಾಗಿಗೆ ಹೆಚ್ಚಿನ ಪ್ರಮಾಣದಲ್ಲ ಮುಂಗಾರು ಅವಧಿಯಲ್ಲಿ ಬಿತ್ತನೆಯಾಗುತ್ತದೆ. ಜೂನ್ ತಿಂಗಳಲ್ಲಿ ಸುರಿಯುವ ಮಳೆಗೆ ಭೂಮಿಯಲ್ಲಿ ಚೊಚ್ಚಲ ಉಳುಮೆ ಮಾಡಿ ಹದಗೊಳಿಸಿ ಈ ಅವಧಿಯಲ್ಲಿ ಬಿತ್ತನೆ ಕಾರ್ಯ ನಡೆಸುವುದು ವಾಡಿಕೆ. ಆದರೆ, ಜಿಲ್ಲೆಯಲ್ಲಿ ಇನ್ನೂ ಬಿತ್ತನೆ ಕಾರ್ಯ ಆರಂಭಗೊಂಡಿಲ್ಲ. ಆ.15ರೊಳಗೆ ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿದ್ದು, ಇನ್ನು 20 ದಿನಗಳ ಒಳಗೆ ಬಿತ್ತನೆಗೆ ಭೂಮಿಯನ್ನು ಹದಗೊಳಿಸಿ ಪೂರ್ಣಗೊಳಿಸುವ ಜರೂರತ್ತು ರೈತರಿಗೆ ಎದುರಾಗಿದೆ ಒಂದು ವೇಳೆ ಬಿತ್ತನೆ ಕಾರ್ಯ ಇಷ್ಟರೊಳಗೆ ನಡೆಯದಿದ್ದರೆ ಮುಂದೆ ಬಿತ್ತನೆ ಮಾಡುವುದು ಕಷ್ಟ ಸಾಧ್ಯ.
ಎರಡನೇ ವರ್ಷವೂ ಬಿತ್ತನೆಗೆ ಅಡ್ಡಿ : ಕಳೆದ ವರ್ಷ 50 ವರ್ಷಗಳ ಅವಧಿಯಲ್ಲೇ ದಾಖಲೆ ಎನ್ನಿಸುವಷ್ಟು ಮಳೆ ಜಿಲ್ಲೆಯಲ್ಲಿ ಸುರಿದಿತ್ತಾದರೂ, ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಆಗಿದೆ. ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಕೆಲವೆಡೆ ಬಿತ್ತನೆ ನಡೆದಿದ್ದರು ಹೆಚ್ಚು ಮಳೆಯಿಂದಾಗಿ ಪೈರುಗಳು ಕೊಳೆತು ರೈತರು ಸಂಕಷ್ಟಕ್ಕೆ ಸಿಲುಕಿದರು. ಆದರೆ, ಈವರ್ಷ ಮಳೆಯೇ ಬಾರದ ಹಿನ್ನೆಲೆಯಲ್ಲಿ ಬಿತ್ತನೆಗೆ ಮತ್ತೆ ಅಡ್ಡಿಯಾಗಿದೆ. ಆಗಸ್ಟ್ ಎರಡನೇ ವಾರದೊಳಗೆ ಮಳೆ ಸುರಿಯದೇ ಹೋದಲ್ಲಿ ಈ ವರ್ಷವೂ ಬಿತ್ತನೆ ನಡೆಯದೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಕಳೆದ 20ದಿನಗಳಿಂದ ಮೋಡಕವಿದ ವಾತಾವರಣವಿದ್ದರೂ ಭೂಮಿಗೆ ಹದವಾದ ಮಳೆ ಸುರಿದಿಲ್ಲ. ಬಿತ್ತನೆ ಕಾರ್ಯ ಜಿಲ್ಲೆಯಾದ್ಯಂತ ಕುಂಟಿತಗೊಂಡಿದ್ದು, ಕೃಷಿ ಇಲಾಖೆ ಬಿತ್ತನೆಗೆ ಅಗತ್ಯ ವಿರುವ ಬಿತ್ತನೆ ಬೀಜಗಳನ್ನು ದಾಸ್ತಾನು ಇರಿಸಿದೆ. ಆದರೆ, ಬಿತ್ತನೆ ಬೀಜ ಖರೀದಿ ಮಾಡಿಕೊಳ್ಳಲು ರೈತರು ಇನ್ನೂ ಮುಂದಾಗುತ್ತಿಲ್ಲ. ● ಬೊಮ್ಮೇಶ್, ಕೃಷಿ ತಾಂತ್ರಿಕ ಅಧಿಕಾರಿ, ಚನ್ನಪಟ್ಟಣ
– ಸು.ನಾ.ನಂದಕುಮಾರ್