ಹಾಸನ: ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವಿಸುವ ಅನಾಹುತ ಮತ್ತು ಅಪಾಯಗಳ ನಿಯಂತ್ರಣ ಹಾಗೂ ನಿರ್ವಹಣೆಗೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಳೆಗಾಲದ ವಿಪತ್ತುಗಳ ನಿರ್ವಹಣೆ ಸಂಬಂಧ ಸೋಮವಾರ ವಿಡಿಯೋ ಸಂವಾದ ನಡೆಸಿದ ಅವರು, ಈ ಹಿಂದಿನ ಅನುಭವಗಳ ಆಧಾರದ ಮೇಲೆ ವ್ಯವಸ್ಥಿತ ತಯಾರಿ ಕೈಗೊಳ್ಳಲು ನಿರ್ದೇಶನ ನೀಡಿದರು.
ಭೂಕುಸಿತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಮೊದಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸಮಸ್ಯಾತ್ಮಕ ಎಂದು ಗುರುತಿಸಿರುವ ಗ್ರಾಮಗಳಲ್ಲಿ ಪ್ರವಾಹ ಅಥವಾ ಇತರ ಅನಾಹುತ ಸಂಭವಿಸಿದಾಗ ಪರಿಸ್ಥಿತಿಗೆ ಅನುಗುಣವಾಗಿ ತಾತ್ಕಾಲಿಕ ನಿರಾಶ್ರಿತರ ಕೇಂದ್ರಗಳನ್ನು ತೆರೆದು ಜನರಿಗೆ ಸರಿಯಾದ ಊಟೋಪಚಾರ ಒದಗಿಸಬೇಕು ಎಂದರು.
ರಾಜ್ಯದ ಯೋಜನಾ ಆಯುಕ್ತೆ ವಂದಿತಾ ಶರ್ಮಾ ಮಾತನಾಡಿ, ಕಳೆದ ಬಾರಿ ಸಂಭಸಿದಂತಹ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಂಟಿ ಕೃಷಿ ನಿರ್ದೇಶಕ ರವಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ಹಾಗೂ ವಿವಿಧ ಇಲಾಖಾ ಅಧಿ ಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ದುಸ್ಥಿತಿಯ ಶಾಲೆ, ಆಸ್ಪತ್ರೆ, ಕಟ್ಟಡ ಗುರುತಿಸಿ :
ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಜಿಪಂ ಅಧಿಕಾರಿ ಗಳು ಒಟ್ಟಾಗಿ ಕೆಲಸ ಮಾಡುವುದರಿಂದ ಮುಂಗಾರಿನಲ್ಲಾಗುವ ಅನಾವೃಷ್ಟಿ, ಹಾನಿಗಳನ್ನು ವ್ಯವಸ್ಥಿತವಾಗಿ ಕಡಿಮೆ ಮಾಡಬಹುದಾಗಿದೆ. ನದಿಗಳ ಪಾತ್ರದ ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ಹೆಚ್ಚಿನ ಗಮನಹರಿಸಬೇಕು. ಮಳೆ ಪ್ರಾರಂಭಕ್ಕೆ ಮುನ್ನವೇ ಅಪಾಯದ ಸ್ಥಿತಿಯಲ್ಲಿರುವ ಶಾಲೆ, ಆಸ್ಪತ್ರೆ ಹಾಗೂ ಇತರ ಕಟ್ಟಡ ಗಳನ್ನು ಗ್ರಾಮವಾರು ಗುರುತಿಸಿ ಹಾನಿ ನಿಯಂತ್ರಿಸ ಬೇಕು. ಅಪಾಯಕ್ಕೆ ಸಿಲುಕುವವರನ್ನು ಸ್ಥಳಾಂತರ ಮಾಡಬೇಕು. ಮಳೆಯಿಂದ ಉಂಟಾಗುವ ಮನೆಹಾನಿ, ಸಾಮಗ್ರಿ ಹಾನಿಗೆ ತಕ್ಷಣವೇ ತುರ್ತು ಪರಿಹಾರ ಒದಗಿಸ ಬೇಕು ಎಂದು ಕಂದಾಯ ಸಚಿವರು ಸೂಚಿಸಿದರು