ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪ್ರವೇಶ ಮಾಡಿರುವ ಬೆನ್ನಲ್ಲೇ ದಕ್ಷಿಣ ಒಳನಾಡಿನ ಬಹುಭಾಗಗಳಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಅದರಂತೆ ಬೆಂಗಳೂರು ಮಹಾನಗರದಲ್ಲಿ ಕೂಡ ಬುಧವಾರ ಗುಡುಗು ಸಹಿತ ಮಳೆ ಆರ್ಭಟಿಸಿತು.
ಒಂದೆರಡು ದಿನ ವಿರಾಮ ನೀಡಿದಂತೆ ಕಂಡುಬಂದ ಮಳೆ ಸಂಜೆ ಅಬ್ಬರಿಸಿತು. ಪರಿಣಾಮ ನಗರ ನಲುಗಿತು. ಆದರೆ, ಬೆಂಗಳೂರಿನಲ್ಲಿ ಸುರಿಯುತ್ತಿರುವುದು ಮುಂಗಾರು ಮಳೆ ಎಂದು ಇನ್ನೂ ಅಧಿಕೃತವಾಗಿ ಹವಾಮಾನ ಇಲಾಖೆ ಘೋಷಿಸಿಲ್ಲ. ಗುರುವಾರ ಬೆಳಿಗ್ಗೆ ಈ ಮುಂಗಾರು ಮಾರುತಗಳು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಇಂದೂ ಮಳೆ ಸಾಧ್ಯತೆ?: ಈ ಮಧ್ಯೆ ಸಂಜೆ ಸುರಿದ ಧಾರಾಕಾರ ಮಳೆಗೆ ಇಡೀ ನಗರ ತೊಯ್ದು ತೊಪ್ಪೆಯಾಯಿತು. ಮಳೆಗಿಂತ ಗುಡುಗು-ಮಿಂಚಿನ ಸದ್ದು ಹೆಚ್ಚಿತ್ತು. ಗುರುವಾರ ಕೂಡ ಚದುರಿದಂತೆ ಮಳೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಮೇ 1ರಿಂದ ಈವರೆಗೆ ನಗರದಲ್ಲಿ 277 ಮಿ.ಮೀ. ಮಳೆ ದಾಖಲಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ದಾಖಲೆ ಹಾಗೂ ನೂರು ವರ್ಷಗಳಲ್ಲಿ ಮೇನಲ್ಲಿ ಸುರಿದ ಎರಡನೇ ಅತಿ ಹೆಚ್ಚು ಮಳೆ ಇದಾಗಿದೆ. 1957ರ ಮೇನಲ್ಲಿ 287.1 ಮಿ.ಮೀ. ಮಳೆಯಾಗಿದ್ದು, ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.
ಕೆಂಗೇರಿಯಲ್ಲಿ ಅತಿ ಹೆಚ್ಚು ಮಳೆ: ಇನ್ನು ನಗರದಲ್ಲಿ ಬುಧವಾರ ಸಂಜೆ ಕೆಂಗೇರಿಯಲ್ಲಿ ಅತಿ ಹೆಚ್ಚು 62 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ರಾಜರಾಜೇಶ್ವರಿ ನಗರದಲ್ಲಿ 42.5 ಮಿ.ಮೀ., ಯಲಹಂಕ 41.5, ಚಿಕ್ಕಬಾಣಾವರ 41, ಮಾದಾವರ ಮತ್ತು ಹುಸ್ಕೂರು 34, ಚುಂಚನಕುಪ್ಪೆ 32, ಸೀಗೇಹಳ್ಳಿ 28, ಕೋರಮಂಗಲ 21.5, ಹೆಮ್ಮಿಗೇಪುರ 22, ಬೇಗೂರು 25.5, ಕೋಣನಕುಂಟೆ 24, ಬಿದರಹಳ್ಳಿ 21.5, ವರ್ತೂರು 28, ಕೆ.ಆರ್. ಪುರ 23.5, ಎಚ್ ಎಸ್‌ಆರ್ ಲೇಔಟ್ 19.5, ನಾಗರಬಾವಿ 14.5, ಲಾಲ್‌ಬಾಗ್ 8, ಬೊಮ್ಮನಹಳ್ಳಿ 16, ರಾಜಾನುಕುಂಟೆ 14.5, ಹೆಸರಘಟ್ಟ 14, ಕೊಡಿಗೇಹಳ್ಳಿ 6 ಮಿ.ಮೀ. ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ದೂರು ಆಲಿಸಿದ ಮೇಯರ್ ನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಖುದ್ದು ಹಾಜರಿದ್ದು ಮೇಯರ್ ಸಂಪತ್‌ರಾಜ್ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಜತೆಗೆ ಸಾರ್ವಜನಿಕರ ದೂರು ಆಲಿಸಿದರು. ನಗರದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಬಿಎಂಪಿ ಆಯುಕ್ತ ಮಹೇಶ್ವರ್‌ರಾವ್ ಅವರಿಂದ ಮಾಹಿತಿ ಪಡೆದುಕೊಂಡರು. ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಮಳೆ ಆಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆಯುಕ್ತರು ಸಿಎಂಗೆ ವಿವರಿಸಿದರು. ಯಾವುದೇ ರೀತಿಯ ಅನಾಹುತಗಳು ಸಂಭವಿಸಿದಂತೆ ಕೆಲಸ ಮಾಡುವಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು. ಮಳೆ ಪರಿಣಾಮ ನಗರದ ವಿದ್ಯಾರಣ್ಯಪುರ, ಚನ್ನಮ್ಮನ ಕೆರೆ, ಜ್ಯುಡಿಶಿಯಲ್ ಲೇಔಟ್ ಹಾಗೂ ಲೊಟ್ಟಗೊಲ್ಲಹಳ್ಳಿಯಲ್ಲಿಯಲ್ಲಿ ತಲಾ ಒಂದು ಮರ ಧರೆಗುರುಳಿವೆ.