Advertisement

ಮುಂಗಾರು ಪೂರ್ವ ಮಳೆ; ಕೃಷಿ ಚಟುವಟಿಕೆ ಚುರುಕು

10:55 AM Jun 04, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಮುಂಗಾರು ಪೂರ್ವದಲ್ಲೇ ಅಲ್ಪಮಟ್ಟಿಗೆ ಮಳೆ ಆಗಿರುವುದರಿಂದ ಮುಂಗಾರು ಬಿತ್ತನೆ ಕಾರ್ಯಕ್ಕೆ ರೈತರು ತಮ್ಮ ಹೊಲಗಳಲ್ಲಿರುವ ಕಸಕಡ್ಡಿಗಳನ್ನು ತೆಗೆದು ಹಾಕುತ್ತಿದ್ದಾರೆ.

Advertisement

ತಾಲೂಕಿನಲ್ಲಿ ಮೇ ಕೊನೆ ವಾರದಲ್ಲಿ ಸಿಡಿಲು, ಮಿಂಚು, ಗುಡುಗು, ಬಿರುಗಾಳಿ ಸಮೇತ ಬಿದ್ದ ಅಲ್ಪಮಳೆಯಿಂದ ಭೂಮಿ ಸ್ವಲ್ಪಮಟ್ಟಿಗೆ ಹದವಾಗಿದೆ. ಆದ್ದರಿಂದ ರೈತರು ತಮ್ಮ ಹೊಲಗಳಲ್ಲಿ ಕಳೆದ ವರ್ಷ ಬಿತ್ತನೆ ಮಾಡಿದ ಬೆಳೆಗಳ ಕಟಾವು ಮಾಡಿದ ತೊಗರಿ ಕಟ್ಟಿಗೆ, ಜೋಳದ ದಂಟು ತೆಗೆದು ಹಾಕಿ ಹೊಲದಲ್ಲಿಯೇ ಸುಟ್ಟು ಹಾಕುತ್ತಿದ್ದಾರೆ. ಕುಂಚಾವರಂ, ಸುಲೇಪೇಟ, ಚಿಮ್ಮನಚೋಡ, ಐನಾಪುರ, ಕೋಡ್ಲಿ,ನಿಡಗುಂದಾ, ಚಿಂಚೋಳಿ, ಚಂದನಕೇರಾ, ಗಡಿಕೇಶ್ವಾರ, ರುದನೂರ, ರಾಯಕೋಡ, ಮಿರಿಯಾಣ, ಕನಕಪುರ, ಸಾಲೇಬೀರನಳ್ಳಿ ಇನ್ನಿತರ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ.

ಮುಂಗಾರು ಬಿತ್ತನೆಗಾಗಿ ರೈತರು ತಮ್ಮ ಮನೆಯಲ್ಲಿ ಸಂಗ್ರಹ ಮಾಡಿರುವ ಬಿತ್ತನೆ ಬೀಜಗಳನ್ನು ಶುಚಿಗೊಳಿಸಿದ್ದಾರೆ. ಅಲ್ಲದೇ ಖೂರಿಗೆ, ಬಿತ್ತನೆ ಬೀಜಕ್ಕಾಗಿ ಉಡಿ ಚೀಲ, ಡಿಎಪಿ, ಯೂರಿಯಾ ರಸಗೊಬ್ಬರ ಖರೀದಿಸಿ ಮಳೆರಾಯನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ತಾಲೂಕಿನಲ್ಲಿ ಕಳೆದ ವರ್ಷ ಮೇ 28ರಂದು ಮುಂಗಾರು ಪ್ರಾರಂಭವಾಗಿ ಜೂ. 8ರ ವರೆಗೆ ಸತತವಾಗಿ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಇನ್ನು ಉತ್ತಮ ಮಳೆ ಬೀಳದ ಕಾರಣ ಬಿತ್ತನೆ ಕಾರ್ಯ ಪ್ರಾರಂಭವಾಗಿಲ್ಲ. ಹೀಗಾಗಿ ತಮ್ಮ ಹೊಲಗಳಲ್ಲಿರುವ ಕಸ-ಕಡ್ಡಿಗಳನ್ನು ಸುಟ್ಟು ಹಾಕುತ್ತಿದ್ದಾರೆ. ಮಳೆ ನೀರು ಹೊಲದಲ್ಲಿ ನಿಲ್ಲದಂತೆ ಬದು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.

ತಾಲೂಕಿನಲ್ಲಿ ಜೂನ್‌ನಲ್ಲಿ ಮೃಗಶಿರಾ ಮುಗಿದ ನಂತರ ಮಳೆ ಬೀಳುವ ಸಾಧ್ಯತೆ ಇದೆ. ಕೇರಳದಲ್ಲಿ ಮುಂಗಾರು ಪ್ರವೇಶ ಆಗಿರುವುದರಿಂದ ನಮ್ಮ ರಾಜ್ಯದಲ್ಲಿ ಮಳೆ ಇನ್ನು ಪ್ರಾರಂಭ ಆಗಬೇಕಾದರೆ (ಮಿರಗ) ಕಾಯಬೇಕಾಗುತ್ತದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೊಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next