Advertisement
ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಮುಂದುವರಿದಿರುವುದರಿಂದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆಗಳಲ್ಲಿ ನದಿಗಳ ಆರ್ಭಟ ಹೆಚ್ಚಾಗಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಹಲವಾರು ಹಳ್ಳಿಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವೆಡೆ ಪ್ರಮುಖ ಸೇತುವೆಗಳು ನೀರಿನಲ್ಲಿ ಮುಳುಗಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯೊಂದಿಗೆ ಜೋರಾಗಿ ಗಾಳಿ ಬೀಸುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾದ ಪರಿಣಾಮ ತುಂಗಾ ಭದ್ರಾ, ಹೇಮಾವತಿ ನದಿಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಭದ್ರಾ ನದಿಯಲ್ಲಿ ನಾಲ್ಕು ಬಾರಿ ಮುಳುಗಿದ್ದ ಹೆಬ್ಟಾಳೆ ಸೇತುವೆ ತೆರೆದುಕೊಂಡಿದೆ. ಐತಿಹಾಸಿಕ ಮದಗದ ಕೆರೆ ಮತ್ತು ಅಯ್ಯನಕೆರೆ ಕೋಡಿ ಬಿದ್ದಿವೆ. ಭದ್ರಾನದಿ ಉಕ್ಕಿ ಹರಿದಿದ್ದು ಬಾಳೆಹೊನ್ನೂರು, ಕೊಟ್ಟಿಗೆಹಾರ, ಕಳಸ ಸಂಪರ್ಕಿಸುವ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ. ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ 3 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಟ್ಟ ಪರಿಣಾಮ ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆ ಮುಳುಗಡೆಯಾಗಿ ಸಂಚಾರ ನಿರ್ಬಂಧಿಸಲಾಗಿದೆ. ತುಂಗೆ ತಟದಲ್ಲಿ ಪ್ರವಾಹ ಭೀತಿ
ಶಿವಮೊಗ್ಗ: ತುಂಗಾ ಜಲಾಶಯದಿಂದ 84 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದ್ದು ಶಿವಮೊಗ್ಗ ನಗರದ ಹಳೆ ಮಂಡ್ಲಿ ಬಳಿ ತುಂಗಾ ನದಿ ನೀರು ತೀರ್ಥಹಳ್ಳಿ ರಸ್ತೆವರೆಗೆ ಬಂದಿದೆ. ನಗರ ನೀರು ಪೂರೈಕೆ ಕೇಂದ್ರಕ್ಕೂ ನೆರೆ ಭೀತಿ ತಟ್ಟಿದ್ದು ಹೆಚ್ಚಿನ ನೀರು ಹೊರಬಿಟ್ಟರೆ ಒಳಗೆ ನುಗ್ಗುವ ಸಾಧ್ಯತೆ ಇದೆ.
Related Articles
ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಿಸುತ್ತಿರುವ ಕೃಷ್ಣಾ ನದಿ ತೀರದ ಮುದ್ದೇಬಿಹಾಳ, ನಿಡಗುಂದಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ಜಿಲ್ಲಾ ಧಿಕಾರಿ ಭೂಬಾಲನ್ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ತೆರಳಿ ಪ್ರವಾಹದ ಪರಿಸ್ಥಿತಿ ಖುದ್ದು ಪರಿಶೀಲಿಸಿದರು.
Advertisement
4 ಗ್ರಾಮಗಳು ಜಲಾವೃತಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿಗೆ ಹೊಂದಿಕೊಂಡಿರುವ 4 ಗ್ರಾಮಗಳು ಜಲಾವೃತಗೊಂಡಿವೆ. ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಜಯಪುರ ಜಿಲ್ಲೆಯಲ್ಲೂ ಜೀವನದಿ ಕೃಷ್ಣಾ ಹಾಗೂ ಉಪ ನದಿ ಭೀಮೆಯ ಮಡಿಲಲ್ಲಿ ಪ್ರವಾಹ ಭೀತಿ ಎದುರಾಗಿದೆ. ಆಲಮಟ್ಟಿ, ಬಸವಸಾಗರ, ತುಂಗಭದ್ರಾ ಸೇರಿದಂತೆ ಬಹುತೇಕ ಎಲ್ಲ ಜಲಾಶಯಗಳಿಗೂ ನೀರಿನ ಒಳಹರಿವು ಹೆಚ್ಚುತ್ತಿದೆ. ರೈತ ಕೃಷ್ಣೆ ಪಾಲು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಮೇವು ತರಲು ಹೊಲಕ್ಕೆ ಹೋಗಿದ್ದ ರೈತ ಸಿದ್ದಪ್ಪ ಅಡೊಳ್ಳಿ (60) ಅವರು ಕೃಷ್ಣಾ ನದಿ ದಡದಲ್ಲಿ ನಾಪತ್ತೆಯಾಗಿದ್ದಾರೆ. ನದಿ ಪಕ್ಕದಲ್ಲಿ ಅವರ ಸೈಕಲ್ ಮತ್ತು ಮೇವು ಪತ್ತೆಯಾಗಿದೆ. ಹೀಗಾಗಿ ಅವರು ನದಿಯ ನೀರಿನ ರಭಸದಲ್ಲಿ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ. 41 ಸೇತುವೆಗಳು ಜಲಾವೃತ
ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳ ಪ್ರವಾಹದಿಂದ 41 ಸೇತುವೆಗಳು ನೀರಿನಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಘಟಪ್ರಭಾ ನದಿಯ ಪ್ರವಾಹದಿಂದ ಗೋಕಾಕ ಹೊರವಲಯದ ಲೊಳಸೂರ ಸೇತುವೆ ನೀರಿನಲ್ಲಿ ಮುಳುಗಿ ಜತ್-ಜಾಂಬೋಟಿ ಆಂತಾರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.