Advertisement

ಕರಾವಳಿಯಲ್ಲಿ ಮುಂಗಾರು ಚುರುಕು: ಇನ್ನೂ ಮೂರು ದಿನ ಮಳೆ

01:55 AM Jul 10, 2019 | Team Udayavani |

ಮಂಗಳೂರು/ಉಡುಪಿ: ಕೆಲವು ದಿನಗಳಿಂದ ದುರ್ಬಲ ವಾಗಿದ್ದ ಮುಂಗಾರು ಇದೀಗ ಚುರುಕು ಗೊಂಡಿದೆ. ಕರಾವಳಿಯ ನಾನಾ ಕಡೆಗಳಲ್ಲಿ ಮಂಗಳವಾರ ಬೆಳಗ್ಗಿನಿಂದ ಉತ್ತಮ ಮಳೆಯಾಗಿದೆ.

Advertisement

ಮಂಗಳೂರು – ಉಡುಪಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಜೋರಾದ ಗಾಳಿ-ಮಳೆ ಸುರಿಯಿತು. ಪುತ್ತೂರು, ಉಪ್ಪಿನಂಗಡಿ, ಮಾಣಿ, ನೇರಳಕಟ್ಟೆ, ಸುರತ್ಕಲ್, ಉಳ್ಳಾಲ, ಮುಡಿಪು, ತೆಕ್ಕಟ್ಟೆ, ಕಾಪು, ಮೂಲ್ಕಿ, ಪುಂಜಾಲಕಟ್ಟೆ, ಕಿನ್ನಿಗೋಳಿ, ವೇಣೂರು, ನಾರಾವಿ, ಕಟಪಾಡಿ, ಶಿರ್ವ, ತೆಕ್ಕಟ್ಟೆ, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯ, ಕಡಬ, ಬೆಳ್ತಂಗಡಿ, ಗುರುವಾ ಯನಕೆರೆ, ಧರ್ಮಸ್ಥಳ, ಉಡುಪಿ, ಮಣಿಪಾಲ, ಸಿದ್ಧಾಪುರ, ಹೆಬ್ರಿ, ಕೊಲ್ಲೂರು, ಕೋಟೇಶ್ವರ, ಕೋಟ, ಉಪ್ಪುಂದ, ಮರವಂತೆ, ಬ್ರಹ್ಮಾವರ ಮತ್ತಿತರ ಕಡೆ ಮಳೆಯಾಗಿದೆ.

ಕರಾವಳಿ ಭಾಗಕ್ಕೆ ಜೂ. 14ರಂದು ಮುಂಗಾರು ಪ್ರವೇಶಿಸಿದರೂ ಕ್ಷೀಣಿಸಿತ್ತು. ಹಾಗಾಗಿ ಪ್ರಸಕ್ತ ಸಾಲಿನಲ್ಲಿ ಶೇ. 27ರಷ್ಟು ಮಳೆ ಕೊರತೆ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಬೀಚ್‌ಗಳಲ್ಲಿ ಮುನ್ನೆಚ್ಚರಿಕೆ

ಪಣಂಬೂರು ಬೀಚ್ ಅಭಿವೃದ್ಧಿ ನಿಗಮದ ಸಿಇಒ ಯತೀಶ್‌ ಬೈಕಂಪಾಡಿ ಹಾಗೂ ಮಲ್ಪೆ ಬೀಚ್ ನಿರ್ವಹಣಾಧಿಕಾರಿ ಸುದೇಶ್‌ ಶೆಟ್ಟಿ ಅವರು, ‘ಮಂಗಳೂರು ಪಣಂಬೂರು, ತಣ್ಣೀರು ಬಾವಿ ಹಾಗೂ ಮಲ್ಪೆ ಬೀಚ್‌ನಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. 2 ತಿಂಗಳಿನಿಂದ ಪ್ರವಾಸಿ ಗರನ್ನು ಸಮುದ್ರದ ಬಳಿ ಬಿಡುತ್ತಿಲ್ಲ’ ಎಂದರು.

ಮೂರು ದಿನ ಉತ್ತಮ ಮಳೆ ಸಾಧ್ಯತೆ

Advertisement

ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾದ ಪರಿಣಾಮ, ಕರಾವಳಿ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಗುಂಬೆ: ರಸ್ತೆಗೆ ಮರ

ಸೋಮವಾರ ರಾತ್ರಿ ಆಗುಂಬೆ ಘಾಟಿಯ 4ನೇ ಸುತ್ತಿನಲ್ಲಿ ಬೃಹತ್‌ ಮರ ವೊಂದು ರಸ್ತೆಗೆ ಉರುಳಿ ರಸ್ತೆ ಸಂಚಾರ 2 ಗಂಟೆ ಬಾಧಿತವಾಯಿತು. ಕಳೆದ ಜುಲೈ ಯಲ್ಲಿ ಕುಸಿದ ಘಾಟಿಯ 7ನೇ ಸುತ್ತಿನಲ್ಲಿ ದುರಸ್ತಿ ಮಾಡದ ಕಾರಣ ಈ ಬಾರಿಯೂ ಭಾರೀ ಮಳೆ ಸುರಿದರೆ ವಾಹನ ಸಂಚಾರ ಬಾಧಿತವಾಗುವ ಭೀತಿ ಎದುರಾಗಿದೆ.
ಬೆಳ್ತಂಗಡಿ: ಮುಖ್ಯರಸ್ತೆ ಜಲಾವೃತ

ಬೆಳ್ತಂಗಡಿ: ನಿರಂತರ ಮಳೆ ಯಿಂದಾಗಿ ತಾಲೂಕಿನ ನದಿಗಳು ತುಂಬಲಾರಂಭಿಸಿವೆ. ಚರಂಡಿಗಳ ಹೂಳೆತ್ತದ ಪರಿಣಾಮ ಮುಖ್ಯ ರಸ್ತೆಗಳು ಅಲ್ಲಲ್ಲಿ ಜಲಾವೃತವಾಗಿವೆ. ಉಜಿರೆಮುಖ್ಯ ರಸ್ತೆಯ ಭಾರತ್‌ ಐರನ್‌ ವರ್ಕ್‌ ಸಮೀಪ , ಬೆಳಾಲು ಕ್ರಾಸ್‌ ಬಳಿ ಚರಂಡಿ ಸಮಸ್ಯೆಯಿಂದ ನೀರು ರಸ್ತೆ ಯಲ್ಲೇ ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ತೆಕ್ಕಟ್ಟೆ: ಛಾವಣಿ ಹಾರಿತು

ತೆಕ್ಕಟ್ಟೆ: ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಕುಂಭಾಸಿ ಗ್ರಾ.ಪಂ. ವ್ಯಾಪ್ತಿಯ ಕೊರವಡಿ ಮಲಸಾವರಿ ದೇವಸ್ಥಾನದ ಬಳಿ ಪುಟ್ಟು ಮೊಗೇರ್ತಿ ಅವರ ಮನೆ ಮತ್ತು ದನದ ಕೊಟ್ಟಿಗೆಯ ಮೇಲ್ಛಾ ವಣಿ ಹಾರಿ ಹೋಗಿದೆ. ಮನೆಯಲ್ಲಿ ಮಲಗಿದ್ದ ರಶ್ಮಿತಾ (6), ರಕ್ಷಿತ್‌ (1) ರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಕುಂಭಾಶಿ ಗ್ರಾ.ಪಂ. ಸದಸ್ಯ ರಾಘವೇಂದ್ರ ಮೊಗವೀರ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
ಹೆಬ್ರಿ: ವಿದ್ಯುತ್‌ ಕಂಬಗಳಿಗೆ ಹಾನಿ

ಹೆಬ್ರಿ: ಪರಿಸರದಲ್ಲಿ ಉತ್ತಮ ಮಳೆಯಾಗಿದ್ದು ಜೋರಾಗಿ ಬೀಸಿದ ಗಾಳಿಯಿಂದ ಬೃಹತ್‌ ಮರಗಳು ಧರೆಗುರುಳಿ 15ಕ್ಕೂ ಮಿಕ್ಕಿ ವಿದ್ಯುತ್‌ ಕಂಬಗಳು ಹಾನಿಗೀಡಾಗಿವೆ. ಸೀತಾನದಿ ಉಕ್ಕಿ ಹರಿಯುತ್ತಿದೆ.
Advertisement

Udayavani is now on Telegram. Click here to join our channel and stay updated with the latest news.

Next