ಲಕ್ನೋ: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತದ ಹೊಗೆಯಾಡುತ್ತಿರುವುದು ಬಹಿರಂಗವಾದ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ , ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದು ‘ ಮಾನ್ಸೂನ್ ಆಫರ್: ನೂರು ಶಾಸಕರನ್ನು ಕರೆ ತನ್ನಿ ಸರಕಾರ ರಚಿಸಿ’ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಗುರುವಾರ ಎಕ್ಸ್ ಪೋಸ್ಟ್ ಮಾಡಿರುವ ಅಖಿಲೇಶ್ ‘ ಮಾನ್ಸೂನ್ ಆಫರ್: ಸೌ ಲಾವೋ, ಸರಕಾರ್ ಬನಾವೋ’ ಎಂದು ಬರೆದಿದ್ದಾರೆ.ಸಿಎಂ ಯೋಗಿ ಆದಿತ್ಯನಾಥ್ ಮತ್ತು ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ನಡುವಿನ ಭಿನ್ನಾಭಿಪ್ರಾಯ, ಬಿಜೆಪಿಯೊಳಗಿನ ವಿಪ್ಲವ ದೆಹಲಿಯ ವರಿಷ್ಠರ ಬಳಿ ತಲುಪಿದ್ದು ಭಾರೀ ಚರ್ಚೆಗಳು ನಡೆಯುತ್ತಿರುವುದು ಬಹಿರಂಗವಾಗಿದೆ.
ಪೋಸ್ಟ್ ಮಾಡಿದ ಬಳಿಕ ಅಖಿಲೇಶ್ ಅವರು ಆಜ್‌ತಕ್ ವಾಹಿನಿಗೆ ಸಂದರ್ಶನ ನೀಡಿದ್ದು, ‘ಮೌರ್ಯ ಅವರು ಅತ್ಯಂತ ದುರ್ಬಲ ವ್ಯಕ್ತಿ. ಅವರು ಮುಖ್ಯಮಂತ್ರಿಯಾಗಬೇಕು, 100 ಶಾಸಕರ ಬೆಂಬಲ ಪಡೆಯಬೇಕು ಎಂದು ಕನಸು ಕಂಡಿದ್ದರು. ತನಗೆ 100ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಅವರು ಒಮ್ಮೆ ಹೇಳಿಕೊಂಡಿದ್ದರು. ಮೌರ್ಯ ಅವರು ನೂರು ಶಾಸಕರೊಂದಿಗೆ ಬಂದರೆ ಮುಖ್ಯಮಂತ್ರಿಯಾಗಲು ಸಮಾಜವಾದಿ ಪಕ್ಷವು ಬೆಂಬಲಿಸುತ್ತದೆ’ ಎಂದಿದ್ದಾರೆ.
‘2022 ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ 111 ಸ್ಥಾನಗಳನ್ನು ಗೆದ್ದುಕೊಂಡಿತ್ತು ನಮಗೆ 100 ಅತೃಪ್ತ ಬಿಜೆಪಿ ಶಾಸಕರ ಬೆಂಬಲ ಸಿಕ್ಕರೆ, ನಾವು ಸುಲಭವಾಗಿ ಸರ್ಕಾರ ರಚಿಸುತ್ತೇವೆ’ ಎಂದು ಅಖಿಲೇಶ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹಲವು ಶಾಸಕರು ಸಂಸತ್ತಿಗೆ ಆಯ್ಕೆಯಾದ ಕಾರಣ ಹತ್ತು ಕ್ಷೇತ್ರಗಳಲ್ಲಿ ಉಪಚುನಾವಣೆಯೂ ಸದ್ಯದಲ್ಲೇ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸಿ ಭಾರೀ ಯಶಸ್ಸು ಸಾಧಿಸಿದ್ದ ಸಮಾಜವಾದಿ ಪಕ್ಷ ಹೊಸ ಹುರುಪಿನೊಂದಿಗೆ ಚುನಾವಣೆಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಸಮಾಜವಾದಿ ಪಕ್ಷ- ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಉಪ ಚುನಾವಣೆಯಲ್ಲೂ ಒಂದಾಗಿ ಸ್ಪರ್ಧಿಸುವುದು ಖಚಿತವಾಗಿದೆ ಎನ್ನಲಾಗಿದೆ.
ಒಂದೆಡೆ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಯೇ ಮಾಡದ ಮಟ್ಟದಲ್ಲಿ ಆಗಿರುವ ಆಗಿರುವ ಹಿನ್ನಡೆ, ಸೋಲಿನ ಗಾಯದ ಮೇಲೆ ಅಸಮಾಧಾನದ ಬರೆ ಬಿದ್ದಿರುವುದು ದೊಡ್ಡ ಮಟ್ಟದ ರಾಜಕೀಯ ಸವಾಲಾಗಿದ್ದು, ಯಾವುದೇ ಬದಲಾವಣೆ ಮಾಡಲು, ಹೊಸ ಪ್ರಯೋಗ ನಡೆಸಲು ಯೋಚನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಗೆಲ್ಲಿಸಿಕೊಂಡು ಸರಕಾರದ ಪ್ರಭಾವವನ್ನೂ ಉಳಿಸಿಕೊಳ್ಳಬೇಕಾದ ಘನ ಸವಾಲು ಮುಂದಿದೆ.