Advertisement

ಮುಂಗಾರು ಮಂದಹಾಸ: ಜಲಾಶಯಗಳಿಗೆ ಜೀವ ಕಳೆ

03:43 PM Jul 29, 2023 | Team Udayavani |

ಬೆಳಗಾವಿ: ಕಳೆದ ಹತ್ತು ದಿನಗಳಿಂದ ಬೆಳಗಾವಿ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ಹರಿಯುವ ನದಿಗಳು ಮತ್ತು ಜಲಾಶಯಗಳ ಚಿತ್ರಣವನ್ನೇ ಬದಲಾಯಿಸಿದೆ. ಎರಡು ವಾರಗಳ ಹಿಂದಷ್ಟೇ ತಮ್ಮ ಒಡಲು ಖಾಲಿಮಾಡಿಕೊಂಡು ಬರಗಾಲದ ಮತ್ತು ಕುಡಿಯುವ ನೀರಿನ ಆತಂಕ ಮೂಡಿಸಿದ್ದ ನದಿ ಹಾಗೂ ಜಲಾಶಯಗಳು ಈಗ ನಿಟ್ಟುಸಿರು ಬಿಡುವಂತೆ ಮಾಡಿವೆ. ಬರದ ಆತಂಕ ತಕ್ಕಮಟ್ಟಿಗೆ ದೂರವಾಗಿದೆ.

Advertisement

ಗಡಿ ಜಿಲ್ಲೆ ಬೆಳಗಾವಿಯಲ್ಲಿರುವ ಹಿಡಕಲ್‌ ಮತ್ತು ಮಲಪ್ರಭಾ ಜಲಾಶಯಗಳು ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಈ ನಾಲ್ಕು ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿಗೆ ಆಸರೆಯಾಗಿವೆ. ಆದರೆ ಈ ವರ್ಷ ಮುಂಗಾರು ಮಳೆ ವಿಳಂಬ ಎರಡೂ ಜಲಾಶಯಗಳ ಸ್ಥಿತಿ ಶೋಚನೀಯವಾಗುವಂತೆ ಮಾಡಿತ್ತು. ಜಲಾಶಯಗಳ ನೀರಿನ ಮಟ್ಟ ಪಾತಾಳ ಕಂಡಿದ್ದರಿಂದ ಸಹಜವಾಗಿಯೇ ನಾಲ್ಕೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಜೊತೆಗೆ ಭೀಕರ ಬರದ ಆತಂಕ ತಂದಿತ್ತು.

ಆದರೆ ಜುಲೈ ಎರಡನೇ ವಾರದಿಂದ ಸುರಿದ ಮಳೆ ಗಾಢವಾಗಿ ಕವಿದಿದ್ದ ಕಾರ್ಮೋಡವನ್ನು ಕರಗಿಸಿದೆ. ಪಾತಾಳ ಕಂಡಿರುವ ಜಲಾಶಯಗಳ ಮುಂದಿನ ಸ್ಥಿತಿ ಏನು ಎಂಬುದಕ್ಕೆ ಉತ್ತರ ಸಿಕ್ಕಿದೆ. ಒಂದು ವಾರದ ಹಿಂದೆ ಪ್ರತಿಶತ 25 ರಷ್ಟು ತುಂಬಿದ್ದ ಹಿಡಕಲ್‌ ಜಲಾಶಯ ಜುಲೈ 28 ರ ವೇಳೆಗೆ ಶೇ.60 ರಷ್ಟು ಭರ್ತಿಯಾಗಿದ್ದರೆ ಜುಲೈ 21 ರ ವೇಳೆಗೆ ಶೇಕಡಾ ಕೇವಲ 23 ರಷ್ಟು ತುಂಬಿದ್ದ ಮಲಪ್ರಭಾ ಜಲಾಶಯ ಜುಲೈ 27 ರ ವೇಳೆಗೆ ಪ್ರತಿಶತ 46 ರಷ್ಟು ತುಂಬಿಕೊಂಡಿತ್ತು.

ಹಿಡಕಲ್‌ ಜಲಾಶಯ
ನಾಲ್ಕು ದಶಕಗಳ ಹಿಂದೆ ನಿರ್ಮಾಣ ಮಾಡಿದ ಹಿಡಕಲ್‌ ಜಲಾಶಯ ಒಟ್ಟು 51 ಟಿ ಎಂ ಸಿ ಸಾಮರ್ಥ್ಯ ಹೊಂದಿದೆ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಜನ ಮತ್ತು ಜಾನುವಾರುಗಳು ಹಾಗೂ ನೀರಾವರಿಗೆ ಮುಖ್ಯ ಆಸರೆಯಾಗಿದೆ.

ಈ ಜಲಾಶಯದಿಂದ ಎರಡೂ ಜಿಲ್ಲೆಗಳ 2.73 ಲಕ್ಷ ಹೆಕ್ಟೇರ್‌ ಗೆ ನೀರು ಕೊಡಲಾಗುತ್ತಿದೆ. ಇದಲ್ಲದೆ ಕುಡಿಯುವುದಕ್ಕಾಗಿ ಸುಮಾರು ಐದು ಟಿ ಎಂ ಸಿ ನೀರನ್ನು ನಿಗದಿ ಮಾಡಲಾಗಿದೆ. ಆದರೆ ಜೂನ್‌ ತಿಂಗಳಲ್ಲಿ ಅತ್ಯಂತ ಶೋಚನೀಯ ಸ್ಥಿತಿಗೆ ಬಂದಿದ್ದ ಜಲಾಶಯದಲ್ಲಿ ಆಗ ಕೇವಲ 4.16 ಟಿ ಎಂ ಸಿ ನೀರಿನ ಸಂಗ್ರಹವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ 8.4 ಟಿ ಎಂ ಸಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಈಗ ಜುಲೈದಲ್ಲಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ ಅರ್ಧದಷ್ಟು ನೀರು (31 ಟಿಎಂಸಿ) ಬಂದಿರುವದರಿಂದ ಮೊದಲಿನ ಆತಂಕ ಇಲ್ಲ ಎಂಬುದು ನೀರಾವರಿ ನಿಗಮದ ಅಧಿಕಾರಿಗಳ ಹೇಳಿಕೆ.

Advertisement

ರಕ್ಕಸಕೊಪ್ಪ ಜಲಾಶಯ
ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರಕ್ಕಸಕೊಪ್ಪ ಜಲಾಶಯದ ನೀರನ್ನು ಕುಡಿಯುವುದಕ್ಕಾಗಿ ಮೀಸಲಿಡಲಾಗಿದ್ದು ಬೆಳಗಾವಿ ನಗರದ ಜನರಿಗೆ ಇದು ಪ್ರಮುಖ ಆಸರೆಯಾಗಿದೆ. ಒಟ್ಟು 2476 ಅಡಿ ಸಾಮರ್ಥ್ಯದ ಈ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. ಜೂನ್‌ದಲ್ಲಿ ಮುಂಗಾರು ಮಳೆಯ ವಿಳಂಬದಿಂದ ಜಲಾಶಯ ಬಹುತೇಕ
ಖಾಲಿಯಾಗಿದ್ದರಿಂದ ಸಾಕಷ್ಟು ಆತಂಕ ಉಂಟಾಗಿತ್ತು. ಇದರಿಂದ ನಗರದ ಬಡಾವಣೆಗಳಿಗೆ 10 ದಿನಗಳಿಗೊಮ್ಮೆ ನೀರು ಪೂರೈಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಜುಲೈ ಎರಡನೇ ವಾರದಿಂದ ಆರಂಭವಾದ ಮಳೆ ಎಲ್ಲ ಆತಂಕವನ್ನು ದೂರ ಮಾಡಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಿರುವದರಿಂದ ಈಗ ಹೆಚ್ಚುವರಿ ನೀರನ್ನು ಮಾರ್ಕಂಡೇಯ ನದಿಗೆ
ಬಿಡಲಾಗುತ್ತಿದೆ.

ಮಲಪ್ರಭಾ ಜಲಾಶಯ
ಇನ್ನು ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ನವಿಲುತೀರ್ಥದ ಬಳಿ ನಾಲ್ಕು ದಶಕಗಳ ಹಿಂದೆ ನಿರ್ಮಾಣ ಮಾಡಿರುವ ಮಲಪ್ರಭಾ ಜಲಾಶಯ ಸಹ ಜೂನ್‌ದಲ್ಲಿ ಬಹುತೇಕ ಖಾಲಿಯಾಗಿತ್ತು. ಈ ಜಲಾಶಯ ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿಗೆ ಆಸರೆಯಾಗಿದೆ. ಒಟ್ಟು 37.73 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಜುಲೈ ಮೊದಲ ವಾರದವರೆಗೆ 7.3 ಟಿಎಂಸಿ ಮಾತ್ರ ನೀರಿತ್ತು. ಕುಡಿಯುವದಕ್ಕಾಗಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಮುಂಗಾರು ಮಳೆ ವಿಳಂಬ ಸಹಜವಾಗಿಯೇ ಚಿಂತೆ ಮೂಡಿಸಿತ್ತು. ಈಗ ಜುಲೈದಲ್ಲಿ ವಾಡಿಕೆಗಿಂತ ಹೆಚ್ಚು ಬಿದ್ದ ಮಳೆ ಜಲಾಶಯದ ಚಿತ್ರಣ ಬದಲಾಯಿಸಿದೆ. ಜುಲೈ 21 ರ ವೇಳೆಗೆ 8.684 ಟಿಎಂಸಿ ನೀರಿದ್ದ ಜಲಾಶಯದಲ್ಲಿ ಜುಲೈ 27 ರ ವೇಳೆಗೆ 17.220
ಟಿಎಂಸಿ ನೀರು ಸಂಗ್ರಹವಾಗಿತ್ತು. ಸತತ ಮಳೆ ಇನ್ನೂ ಆಶಾಭಾವನೆ ಮೂಡಿಸಿದೆ. ಆಗಸ್ಟ್‌ದಲ್ಲಿ ಉತ್ತಮ ಮಳೆಯಾದರೆ ಜಲಾಶಯ ಭರ್ತಿಯಾಗಬಲ್ಲದು ಎಂಬುದು ಅಧಿಕಾರಿಗಳ ವಿಶ್ವಾಸ.

ಮಾರ್ಕಂಡೇಯ ಜಲಾಶಯ
ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಬಳಿ ಮಾರ್ಕಂಡೇಯ ನದಿಗೆ 2006 ರಲ್ಲಿ ನಿರ್ಮಾಣ ಮಾಡಲಾಗಿರುವ ಮಾರ್ಕಂಡೇಯ ಜಲಾಶಯ ಸಹ ಇದುವರೆಗೆ ಪ್ರತಿಶತ 62 ರಷ್ಟು ತುಂಬಿದ್ದು ನೆಮ್ಮದಿ ಉಂಟುಮಾಡಿದೆ. ಒಂದು ವಾರದ ಹಿಂದೆ ಈ ಜಲಾಶಯದಲ್ಲಿ ಶೇ.30 ರಷ್ಟು ನೀರು ಸಂಗ್ರಹವಾಗಿತ್ತು. ಒಟ್ಟು 3.696 ಟಿಎಂಸಿ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಈಗ 2.315 ಟಿ ಎಂ ಸಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು 3.696 ಟಿಎಂಸಿ ನೀರಿನಲ್ಲಿ ಬೆಳಗಾವಿ, ಹುಕ್ಕೇರಿ, ಗೋಕಾಕ
ಹಾಗೂ ಸವದತ್ತಿ ತಾಲೂಕಿನ 19105 ಹೆಕ್ಟೇರ್‌ ಪ್ರದೇಶಕ್ಕೆ 3.28 ಟಿ ಎಂ ಸಿ ನೀರು ಹಾಗೂ ಹುಕ್ಕೇರಿ ಮತ್ತು ಗೋಕಾಕ ತಾಲೂಕಿನ
ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 0.03 ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ.

ಜುಲೈ ದಲ್ಲಿ ಬಂದ ಉತ್ತಮ ಮಳೆಯಿಂದ ಜಲಾಶಯಕ್ಕೆ ನಿರೀಕ್ಷಿಸಿದಂತೆ ನೀರು ಬರುತ್ತಿದೆ. ಈಗಾಗಲೇ 31 ಟಿ ಎಂ ಸಿ ಅಂದರೆ
ಪ್ರತಿಶತ 60 ರಷ್ಟು ನೀರು ಸಂಗ್ರಹವಾಗಿದೆ. ಕುಡಿಯುವದಕ್ಕೆ ಯಾವುದೇ ಸಮಸ್ಯೆ ಇಲ್ಲ. ಇದಲ್ಲದೆ ಈಗ ಇರುವ ನೀರಿನಲ್ಲಿ ಕೃಷಿ
ಜಮೀನಿಗೆ ಒಂದು ಹಂಗಾಮಿಗೆ ನೀರು ಪೂರೈಸಬಹುದು. ಜಲಾಶಯ ಭರ್ತಿಯಾದರೆ ಎರಡೂ ಹಂಗಾಮಿಗೆ ನೀರು ಕೊಡುತ್ತೇವೆ.
ಆಗಸ್ಟ್‌ದಲ್ಲಿ ಇದೇ ರೀತಿ ಮಳೆಯಾದರೆ ಜಲಾಶಯ ಭರ್ತಿಯಾಗಲಿದೆ.
ನಾಗರಾಜ ಬಿ ಎ
ಅಧೀಕ್ಷಕ ಇಂಜನಿಯರ್‌, ಹಿಡಕಲ್‌

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next