ದೇವನಹಳ್ಳಿ: ಕೆರೆಗಳು ನೀರಿನಿಂದ ತುಂಬಿ ತುಳುಕಿದರೆ ರೈತರಿಗೆ ಸಂಜೀವಿನಿ ಆಗುತ್ತದೆ. ಈ ಭಾಗದ ರೈತರಿಗೆ ಮಳೆ ವರದಾನವಾಗಿದ್ದು, ಮುಂದಿನ ದಿನಗಳಲ್ಲಿ ಸಮೃದ್ಧ ಬೆಳೆ ಇಡಲು ಸಹಕಾರಿ ಆಗುತ್ತದೆ ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಐತಿಹಾಸಿಕ ಕೋಟೆ ಪಕ್ಕದಲ್ಲಿರುವ ಸಿಹಿನೀರಿನ ಕರೆಯ ಅಂಗಳದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ತಾಲೂಕಾದ್ಯಂತ ಬಡವರ ಪರವಾಗಿ, ದೇವಾಲಯದ ಜೀರ್ಣೋದ್ಧಾರ ಸೇರಿದಂತೆ ಹಲವಾರು ಜನಪರ ಸಮಾಜ ಸೇವೆ ಮಾಡಿಕೊಂಡು ಬಂದ ನನಗೆ ಈ ಕ್ಷೇತ್ರದಲ್ಲಿ ಶಾಸಕನಾಗಿ ಜನಸೇವೆಯನ್ನು ಮಾಡಲು ಜನರು ಆಶೀರ್ವಾದ ನೀಡಿದ್ದಾರೆ. ಅದರ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಇದೆ. 25 ವರ್ಷದ ನಂತರ ಕರೆ ಕೋಡಿ ಹರಿದಿರುವುದು ವಿಶೇಷವಾಗಿದೆ ಎಂದರು.
ನೀರಿನ ಹಾಹಾಕಾರ ಇಲ್ಲ: ಬೇಸಿಗೆಯ ಕಷ್ಟ ಕಾಲಗಳು ದೂರವಾಗಿದೆ. ಭಗೀರಥನಲ್ಲಿ ಪ್ರಾರ್ಥನೆ ಯನ್ನು ಸಹ ಮಾಡಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಯಾವು ದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ. ಬೇಸಿಗೆ ಸಂದರ್ಭಗಳಲ್ಲಿ ಹೆಚ್ಚು ನೀರಿನ ಸಮಸ್ಯೆ ಕಾಡುತ್ತಿದ್ದವು. ಮಳೆ ಚೆನ್ನಾಗಿ ಬಂದಿರುವುದರಿಂದ ಈ ಸಮಸ್ಯೆ ಪರಿಹಾರವಾಗಿದೆ. 2018ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆಗ ಬಯಲು ಸೀಮೆಯಲ್ಲಿ ನೀರಿಗಾಗಿ ಹೆಚ್ಚು ಸಮಸ್ಯೆ ಇತ್ತು. ಇದೀಗ ತಾಲೂಕಾದ್ಯಂತ ಯಾವ ಗ್ರಾಮದಲ್ಲೂ ಸಹ ನೀರಿನ ಹಾಹಾಕಾರ ಎದುರಾಗಿಲ್ಲ ಎಂದರು.
ಕೆರೆಗಳು ಭರ್ತಿ: ಮಳೆಯಾಗುತ್ತಿರುವುದರಿಂದ ತಾಲೂಕಿನ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿವೆ. ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಬಯಲು ಸೀಮೆಯ ಪ್ರದೇಶವಾದ ದೇವನಹಳ್ಳಿ ಕೆರೆಗಳಿಗೆ ಇತ್ತೀಚೆಗೆ ಬಿದ್ದ ಮಳೆಯಿಂದ ಹೆಚ್ಚು ನೀರು ಸಂಗ್ರಹಗೊಂಡು ಕೋಡಿ ಹರಿದಿರುವುದು ರೈತರ ಪಾಲಿಗೆ ವರದಾನವಾಗಿದೆ. ಸಾರ್ವಜನಿಕರ ಬೇಡಿಕೆ ಈಡೇರಿದೆ. ಇಲ್ಲಿನ ಕೆರೆಗಳು ಭರ್ತಿಯಾಗಿ ಬೇರೆ ಕೆರೆಗಳಿಗೆ ನೀರು ಹರಿಯುತ್ತಿರುವುದು ಸಂತಸ ತಂದಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ,ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜಗನ್ನಾಥ್, ಪುರಸಭಾ ಉಪಾಧ್ಯಕ್ಷೆ ಗೀತಾ, ಸ್ಥಾಯಿಸಮಿತಿ ಅಧ್ಯಕ್ಷ ಎಸ್.ಸಿ.ಚಂದ್ರಪ್ಪ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಮುನಿರಾಜು, ಪುರಸಭಾ ಮಾಜಿ ಸದಸ್ಯ ಕುಮಾರ್, ಸದಸ್ಯೆ ಲೀಲಾವತಿ, ಮುನಿಕೃಷ್ಣ, ವೇಣುಗೋಪಾಲ್, ನಾಮಿನಿ ಸದಸ್ಯೆ ಪುನೀತಾ, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಮುಖಂಡ ಲಕ್ಷ್ಮೀ ನಾರಾಯಣ್, ಶ್ರೀಧರ್‌ಮೂರ್ತಿ, ಚಂದ್ರಶೇಖರ್, ಮರಿಯಪ್ಪ ಹಾಗೂ ಇತರರು ಇದ್ದರು.