ತಿರುವನಂತಪುರ: ಮುಂಗಾರು ಪ್ರವೇಶದ ಬೆನ್ನಲ್ಲೇ ಕೇರಳದ ಹಲವು ಭಾಗಗಳಲ್ಲಿ ರವಿವಾರಧಾರಾಕಾರ ಮಳೆಯಾಗಿದೆ. ಇದರ ನಡುವೆಯೇ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ಮುಂದಿನ 2 ದಿನಗಳಲ್ಲಿ
ಲಕ್ಷದ್ವೀಪ ಮತ್ತು ಕೇರಳದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಂದು ವಾರ ಕಾಲ ವಿಳಂಬವಾಗಿ ಮುಂಗಾರು ಪ್ರವೇಶವಾಗಿದ್ದರೂ, ಕೇರಳದ ಎಲ್ಲ ಜಿಲ್ಲಾಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ಕೇರಳ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣ ಪ್ರಾಧಿಕಾರದ ಶೇಖರ್ ಕುರಿಯಾಕೋಸ್ ತಿಳಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಕೂಡ ವಿಪತ್ತು ನಿರ್ವಹಣ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಳೆ ಕೊರತೆ ಶೇ. 45ಕ್ಕೇರಿಕೆ: ಈ ತಿಂಗಳ ಮೊದಲ 9 ದಿನಗಳಲ್ಲಿ ಮಳೆಯಾಗದೇ ಇದ್ದ ಕಾರಣದಿಂದಲಾಗಿ ದೇಶದಲ್ಲಿ ಮಳೆ ಕೊರತೆ ಪ್ರಮಾಣ ಶೇ.45ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ರವಿವಾರಮಾಹಿತಿ ನೀಡಿದೆ. ದೇಶಾದ್ಯಂತ 17.7 ಮಿಲಿ ಮೀ.ಗಳಷ್ಟು ಮಳೆಯಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ 32.4 ಮಿ.ಮೀ. ಮಳೆಯಾಗಬೇಕಾಗಿತ್ತು. ಹೀಗಾಗಿ ಮಳೆ ಕೊರತೆ ಪ್ರಮಾಣ ಶೇ. 45ಕ್ಕೆ ಏರಿಕೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತದಿಂದಾಗಿ ಮುಂಗಾರು ಮಳೆ ಹೆಚ್ಚಿನ ಸ್ಥಳಗಳಿಗೆ ವಿಸ್ತಾರವಾಗುವುದನ್ನು ತಡೆಯಲಿದೆ ಎಂದೂ ಇಲಾಖೆ ತಿಳಿಸಿದೆ.