ನವದೆಹಲಿ: ಕಳೆದ ಕೆಲ ದಿನಗಳಿಂದೀಚೆಗೆ ಭಾರೀ ಮಳೆ, ಪ್ರವಾಹ, ಭೂಕುಸಿತವನ್ನು ಕಂಡ ಕೇರಳದಲ್ಲಿ ನೈರುತ್ಯ ಮುಂಗಾರು ದುರ್ಬಲವಾಗುತ್ತಿದ್ದು, ಮಳೆ ಇಳಿಮುಖವಾಗಿದೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾದ ಪ್ರದೇಶಗಳಲ್ಲಿ ಅವಶೇಷ ತೆರವುಗೊಳಿಸುವ ಕಾರ್ಯ ಮುಂದುವರಿದಿದ್ದು, ಶುಕ್ರವಾರ ಮೃತರ ಸಂಖ್ಯೆ 111ಕ್ಕೇರಿಕೆಯಾಗಿದೆ.
ಆದರೆ ಇನ್ನೂ 31 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 46,450 ಕುಟುಂಬಗಳ 1.47 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲೇ ಆಶ್ರಯ ಪಡೆಯುತ್ತಿದ್ದಾರೆ. 1,116 ಮನೆಗಳು ಸಂಪೂರ್ಣ ಧ್ವಂಸಗೊಂಡಿದ್ದು, 11,935 ಮನೆಗಳಿಗೆ ಭಾಗಶಃ ಹಾನಿಯಾಗಿವೆ ಎಂದೂ ಅವರು ಹೇಳಿದ್ದಾರೆ.
ಹಲವರ ಸ್ಥಳಾಂತರ: ಇನ್ನು ಆಂಧ್ರಪ್ರದೇಶದಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ, ಗುಂಟೂರು ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ 4,200ಕ್ಕೂ ಅಧಿಕ ಮಂದಿಯನ್ನು ಶುಕ್ರವಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೃಷ್ಣಾ ನದಿ ಪ್ರವಾಹದಿಂದಾಗಿ ಗುಂಟೂರಿನಲ್ಲಿ ವ್ಯಕ್ತಿಯೊಬ್ಬರು ಅಸುನೀಗಿದ್ದಾರೆ.
ರಾಜಸ್ಥಾನದಲ್ಲೂ ಭಾರೀ ಮಳೆ ಮುಂದುವರಿದಿದ್ದು, ಮಳೆ ಸಂಬಂಧಿ ಘಟನೆಗಳಿಗೆ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ.
35 ಮೊಸಳೆಗಳ ರಕ್ಷಣೆ: ಗುಜರಾತ್‌ನ ವಡೋದರಾದಲ್ಲಿ ಪ್ರವಾಹದಿಂದಾಗಿ ರಸ್ತೆಗೆ ಬಂದಿದ್ದ ಮೊಸಳೆಗಳ ಪೈಕಿ 35 ಅನ್ನು ರಕ್ಷಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.