Advertisement

ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಸೇರಿ ದೇಶದ ಹಲವೆಡೆ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

12:53 PM Jul 16, 2022 | Team Udayavani |

ನವದೆಹಲಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕರ್ನಾಟಕ, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಒಡಿಶಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಸೇತುವೆಗಳು ಮುಳುಗಡೆಯಾಗಿದೆ. ಪ್ರವಾಹದಿಂದಾಗಿ ಸಾವು, ನೋವು ಸಂಭವಿಸಿದೆ.

Advertisement

ಕರ್ನಾಟಕ:

ಕರ್ನಾಟಕದಲ್ಲಿಯೂ ಸತತ ಮಳೆಯಾಗುತ್ತಿರುವ ಪರಿಣಾಮ ಬೆಳಗಾವಿಯಲ್ಲಿ ಶಾಲಾ, ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ. ಬೆಳಗಾವಿ ನಗರ, ಬೆಳಗಾವಿ ತಾಲೂಕು, ಕಾನಾಪುರ ತಾಲೂಕುಗಳಲ್ಲಿನ ಹಲವಾರು ಸೇತುವೆಗಳು ಭಾರೀ ಮಳೆಯಿಂದ ಮುಳುಗಿ ಹೋಗಿದ್ದು, ಸಂಚಾರ ವ್ಯವಸ್ಥೆಗೆ ಅಡ್ಡಿಯುಂಟಾಗಿದೆ.

ರಾಜ್ಯದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆದ ಹಾನಿಯ ಪರಿಹಾರಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು 500 ಕೋಟಿ ರೂಪಾಯಿ ಈಗಾಗಲೇ ಘೋಷಿಸಿದ್ದಾರೆ. ನಿರಂತರ ಮಳೆಯಿಂದಾಗಿ ಹಲವೆಡೆ ರಸ್ತೆಗಳು, ಸೇತುವೆಗಳು ವಿದ್ಯುತ್ ಕಂಬಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ ಎಂದು ವರದಿ ತಿಳಿಸಿದೆ.

ಅಸ್ಸಾಂ:

Advertisement

ಅಸ್ಸಾಂನಲ್ಲಿ ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಮಳೆ, ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ 194ಕ್ಕೆ ಏರಿಕೆಯಾಗಿದೆ. ಭಾರೀ ಮಳೆ, ಪ್ರವಾಹ ಪರಿಸ್ಥಿತಿಯಿಂದ ಕನಿಷ್ಠ 2 ಲಕ್ಷಕ್ಕೂ ಅಧಿಕ ಜನರು ಸಂಕಷ್ಟಕ್ಕೀಡಾಗಿದ್ದಾರೆ. 799 ಗ್ರಾಮಗಳು, ಎಂಟು ತಾಲೂಕು, ಆರು ಜಿಲ್ಲೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಸುಮಾರು 10,000 ಜನರನ್ನು  ನಿರಾಶ್ರಿತ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.

ಮಹಾರಾಷ್ಟ್ರ:

ಮಹಾರಾಷ್ಟ್ರದ ಥಾಣೆ ಜಿಲ್ಲಾಡಳಿತ ಭಾಟ್ಸಾ ನದಿ ಪಾತ್ರದ ಸಮೀಪ ವಾಸವಾಗಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡಿದೆ. ಭಾರೀ ಮಳೆಯಿಂದಾಗಿ ಅಣೆಕಟ್ಟಿನ ನೀರಿನ ಮಟ್ಟ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವ ಸಮಯದಲ್ಲೂ ಅಣೆಕಟ್ಟಿನ ಗೇಟ್ ಗಳನ್ನು ತೆರೆಯುವ ಸಾಧ್ಯತೆ ಇದ್ದು, ಇದರಿಂದಾಗಿ ನೆರೆಯ ಗ್ರಾಮಗಳು ಜಲಾವೃತಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕುಂಭಾಶಿ: ರಾ.ಹೆ. 66 ರಲ್ಲಿ ಡಿವೈಡರ್‌ ಏರಿ ನಿಂತ ಬಸ್; ರಸ್ತೆ ಹೊಂಡದಿಂದ ಅವಾಂತರ

ಆಂಧ್ರಪ್ರದೇಶ:

ಗೋದಾವರಿ ನದಿಯ ಪ್ರವಾಹ ಪರಿಸ್ಥಿತಿಯಿಂದ 628 ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಶನಿವಾರವೂ ಪ್ರವಾಹ ಪರಿಸ್ಥಿತಿ ಇನ್ನಷ್ಟು ಏರಿಕೆಯಾಗಲಿದೆ ಎಂದು ವಿಪತ್ತು ನಿರ್ವಹಣಾ ಮಂಡಳಿ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಂದ 62,337 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ ಮಧ್ಯಾಹ್ನ ಪ್ರವಾಹಕ್ಕೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಈ ಬಗ್ಗೆ ಅಧಿಕಾರಿಗಳು ಸೂಕ್ತ ರಕ್ಷಣಾ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ತೆಲಂಗಾಣ:

ಧಾರಾಕಾರ ಮಳೆಯಿಂದಾಗಿ ಭದ್ರಾಚಲಂನ ತಗ್ಗುಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ನಿವಾಸಿಗಳನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುಜರಾತ್:

ನಿರಂತರ ಮಳೆಯಿಂದಾಗಿ ಗುಜರಾತ್ ನಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ರಕ್ಷಣಾ ತಂಡ ಹರಸಾಹಸ ಪಡುತ್ತಿರುವುದಾಗಿ ವರದಿ ತಿಳಿಸಿದೆ. ಈಗಾಗಲೇ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next