ಅರಸೀಕೆರೆ: ತಾಲೂಕಿನಲ್ಲಿ ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಈಗ ಮೋಡ ಮುಸುಕಿದ ವಾತಾವರಣ ಕಂಡುಬರುತ್ತಿದೆ. ಮಳೆಯ ಕೊರತೆ ಕಾರಣದಿಂದ ದಿನೇ ದಿನೆ ಬಿತ್ತನೆ ಕಾರ್ಯ ವಿಳಂಬವಾಗುತ್ತಿದ್ದು, ಧನಕರುಗಳಿಗೆ ಮೇವು, ಮನೆ ಬಳಕೆಗೆ ಬೇಕಾದ ದವಸ ಧಾನ್ಯಕ್ಕೆ ಏನು ಮಾಡುವುದು ಎಂಬ ಚಿಂತೆ ಕಾಡತೊಡಗಿದೆ.
ಜಿಲ್ಲೆಯಲ್ಲಿ ಬಯಲುಸೀಮೆ ಪ್ರದೇಶವಾಗಿರುವ ಅರಸೀಕೆರೆಗೆ ಇತರೆ ತಾಲೂಕಿಗೆ ಹೋಲಿಸಿದ್ರೆ ಹದ ಮಳೆ ಸುರಿದಿದ್ದು, ರೈತರು ಭೂಮಿ ಹದ ಮಾಡುವುದರ ಜೊತೆಗೆ ಏಕ ಹಾಗೂ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದಾರೆ. ಕೇವಲ 15,727 ಹೆಕ್ಟೇರ್‌ನಲ್ಲಿ ಬಿತ್ತನೆ: ಕಳೆದ ತಿಂಗಳು ಸುರಿದ ಮಳೆಗೆ ರೈತರು ಮಳೆಯಾಶ್ರಿತ ಕೆಲವು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆಯ ಪ್ರಕಾರ 76,238 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿಯಲ್ಲಿ 15,727 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ನಡೆದಿದೆ.
ಬಿತ್ತನೆಗೆ ಹಿನ್ನಡೆ: ತಾಲೂಕಿನಲ್ಲಿ ಪೂರ್ವ ಮುಂಗಾರು ಹಂಗಾಮಿನಲ್ಲಿ 125 ಹೆಕ್ಟೇರ್‌ನಲ್ಲಿ ಭತ್ತ, ರಾಗಿ, ಜೋಳ ಹಾಗೂ ಕಿರುಧಾನ್ಯಗಳ ಬಿತ್ತನೆ ಗುರಿ ಇತ್ತು. ಆದರೆ, ಕಡಿಮೆ ಮಳೆಯಾದ ಪರಿಣಾಮ ರೈತರು ಬಿತ್ತನೆ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಮುಸುಕಿನ ಜೋಳ 8,500 ಹೆಕ್ಟೇರ್ ಗುರಿಯಿದ್ದು, 8000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
ಮುಸುಕಿನ ಜೋಳಕ್ಕೆ ಸೈನಿಕ ಹುಳುವಿನ ಕಾಟ: ಗಂಡಸಿ, ಜಾವಗಲ್ ಹಾಗೂ ಕಸಬಾ ಹೋಬಳಿ ಕೆಲವು ಭಾಗದಲ್ಲಿ ಅಲ್ಲಲ್ಲಿ ಸ್ವಲ್ಪ ಪ್ರಮಾಣ ದಲ್ಲಿ ಮುಸುಕಿನ ಜೋಳ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು, ಪ್ರತಿ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಈ ರೋಗಕ್ಕೆ ಕೀಟನಾಶಕ ಲಭ್ಯವಾಗುತ್ತಿದೆ. ರೈತರು ಸಹಾಯಧನದ ಸೌಲಭ್ಯವನ್ನು ಪಡೆದು ಕೀಟನಾ ಶಕ ಖರೀದಿಸಿ, ಸಂಪರ್ಕ ಕೇಂದ್ರದ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಸಿಂಪಡಿಸಿದ್ರೆ ಸೈನಿಕ ಹುಳುವನ್ನು ಹತೋಟಿಗೆ ತರಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಪಿ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಒಟ್ಟು 15,727 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದ್ದು, ಶೇ.20 ಮಾತ್ರ ಕೃಷಿ ಚಟುವಟಿಕೆಯಲ್ಲಿ ಪ್ರಗತಿ ಸಾಧಿಸಲಾಗಿದೆ.
ಮಳೆ ಬರುವ ಆಶಾ ಭಾವನೆ ಇದೆ. 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಿದ್ದೇವೆ. ರೈತರು ನಮ್ಮಲ್ಲಿ ರಿಯಾಯ್ತಿ ದರದಲ್ಲಿ ಸಿಗುವ ಮೂರು ತಳಿಗಳನ್ನು ಖರೀದಿಸಿ ಬಿತ್ತನೆ ಮಾಡಬಹುದು. ಇದು ಸಕಾಲವಾಗಿದೆ. ರಸಗೊಬ್ಬರ ಸಾಕಷ್ಟು ದಾಸ್ತಾನು
ಇದೆ. ರೈತರು ಖರೀದಿ ಮಾಡಬಹುದು.
– ಎ.ಪಿ.ಶಿವಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ.
– ರಾಮಚಂದ್ರ ಆರ್.