ಬೆಳ್ಮಣ್: ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ಒಂದೆಡೆ ಜನ ನೀರಿಗಾಗಿ ಪರದಾಟ ನಡೆಸುತ್ತಿದ್ದರೆ ಕೃಷಿ ಚಟುವಟಿಕೆಗಳು ಇನ್ನೂ ಪ್ರಾರಂಭವಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇವರೊಂದಿಗೆ ಹೊಲಗಳಲ್ಲಿ ಉಳುಮೆಗಾಗಿ ಶಿವಮೊಗ್ಗ, ದಾವಣಗೆರೆ ಕಡೆಗಳಿಂದ ಎಪ್ರಿಲ್ ಕೊನೇ ವಾರದಲ್ಲಿ ಕರಾವಳಿಗೆ ಬಂದು ಬೀಡು ಬಿಟ್ಟರುವ ನೂರಾರು ಟ್ರ್ಯಾಕ್ಟರ್ ಮಾಲಕರು ಕೂಡ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.
ಮುಂಡ್ಕೂರಿನಲ್ಲಿ 25 ಟ್ರ್ಯಾಕ್ಟರ್‌ಗಳು
ದಾವಣಗೆರೆಯಿಂದ ಬಂದಿರುವ 7 ಟ್ರ್ಯಾಕ್ಟರ್‌ಗಳ ಸಹಿತ ಸುಮಾರು 20-25 ಟ್ರ್ಯಾಕ್ಟರ್‌ಗಳು ಮಳೆಯಿಲ್ಲದ್ದರಿಂದ ಕೆಲಸವಿಲ್ಲದೆ ನಿಂತಿವೆ. ಇಲ್ಲಿನ ದುರ್ಗಾಪರಮೇಶ್ವರೀ ದೇಗುಲದ ಅನ್ನಪ್ರಸಾದ ಇವರ ಪಾಲಿಗೆ ಪಂಚಾಮೃತವಾಗಿದೆ.
ಇಲ್ಲಿಗೆ ಬಂದ ಹೆಚ್ಚಿನವರು ಟ್ರ್ಯಾಕ್ಟರ್‌ಗಳ ಚಾಲಕ- ಮಾಲಕರಾಗಿದ್ದಾರೆ. ಕೆಲವೊಂದು ಟ್ರ್ಯಾಕ್ಟರ್‌ಗಳಿಗೆ 9ರಿಂದ 10 ಲಕ್ಷ ರೂ. ತೊಡಗಿಸಿದ್ದು ಇನ್ನು ಕೆಲವು 7ರಿಂದ 8 ಲಕ್ಷ ರೂ. ಬೆಲೆ ಬಾಳುವ ಟ್ರ್ಯಾಕ್ಟರ್‌ಗಳಾಗಿವೆ. ಪ್ರತೀ ವರ್ಷ ಒಬ್ಬೊಬ್ಬರು ನೂರು ಎಕರೆ ಗದ್ದೆಗಳನ್ನು ಉತ್ತು ಕೊಡುತ್ತಿದ್ದು ಪ್ರತೀ ಗಂಟೆಗೆ 900 ರೂ. ವರೆಗೆ ಬಾಡಿಗೆ ಪಡೆಯುತ್ತಾರೆ. ಮಳೆ ವಿಳಂಬದಿಂದಾಗಿ ಬಂದ ಖರ್ಚೂ ಸೇರಿದಂತೆ ಖರ್ಚು ಅಧಿಕವಾಗಿ ಸಂಕಷ್ಟದಲ್ಲಿದ್ದಾರೆ.
ಮಳೆಯಿಲ್ಲದೆ ಕಂಗಾಲು
ಮಳೆಯಿಲ್ಲದೆ ನಾವೂ ಕಂಗಾಲಾಗಿದ್ದೇವೆ. ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದೇವೆ. ಆದಷ್ಟು ಬೇಗ ಮಳೆ ಬರಲಿ ಎಂಬುದೇ ನಮ್ಮ ಪ್ರಾರ್ಥನೆ.
– ಪಂಚಪ್ಪ ದಾವಣಗೆರೆ, ಟ್ರ್ಯಾಕ್ಟರ್ ಮಾಲಕ