Advertisement

ಮುಂಗಾರು ವಿಳಂಬ: ನೀರಿನ ಹೋರಾಟ ಬಿರುಸು

11:46 AM Jun 25, 2019 | Suhan S |

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆ ಮೇಲೆ ಮುಂಗಾರು ಮುನಿಸಿಕೊಂಡಿದೆ. ನೀರಿಗಾಗಿ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ. ರೈತರ ಮೊರೆಗೆ ಸ್ಪಂದಿಸದ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರಸ್ತುತ ಸನ್ನಿವೇಶದಲ್ಲಿ ನೀರು ಬಿಡುಗಡೆ ಸಾಧ್ಯವೇ ಇಲ್ಲ ಎಂದು ದೃಢವಾಗಿ ಹೇಳಿದೆ. ಜಮೀನಿನಲ್ಲಿ ಒಣಗುತ್ತಿರುವ ಬೆಳೆಯನ್ನು ಕಂಡು ರೈತರ ಹೊಟ್ಟೆಗೆ ಬೆಂಕಿ ಬಿದ್ದಿದೆ. ಸಾಲ ಮಾಡಿ ಬೆಳೆದಿರುವ ಬೆಳೆಯನ್ನು ಉಳಿಸಿಕೊಳ್ಳಲಾಗದೆ, ಸಾಲವನ್ನೂ ತೀರಿಸುವ ದಾರಿ ಕಾಣದೆ ರೈತ ನೇಣಿಗೆ ಕೊರಳೊಡ್ಡುತ್ತಿದ್ದಾನೆ.

Advertisement

ಇದು ಸಿಹಿ ಜಿಲ್ಲೆಯ ಜನರ ಕಹಿ ಜೀವನದ ಕರುಣಾಜನಕ ಕಥೆ. ಇಲ್ಲಿನ ಜನರಿಗೆ ಕೃಷಿ ಬಿಟ್ಟರೆ ಬೇರೆ ಗೊತ್ತಿಲ್ಲ. ಪ್ರತಿ ವರ್ಷವೂ ಸಾಂಪ್ರದಾಯಿಕ ಕೃಷಿಗೆ ಜೋತು ಬೀಳುವ ರೈತರು ಸಂಕಷ್ಟದಿಂದ ನರಳುವುದು ಸಾಮಾನ್ಯ ಚಿತ್ರಣವಾಗಿದೆ. ಕಬ್ಬು ಬೆಳೆದು ಕಾರ್ಖಾನೆಗೆ ಪೂರೈಸಿ ಹಣಕ್ಕಾಗಿ ಹೋರಾಟ ನಡೆಸುವುದು. ಮಳೆ ಕೊರತೆ ಎದುರಾದಾಗಲೆಲ್ಲಾ ನೀರಿಗಾಗಿ ಪ್ರತಿಭಟನೆಯ ಹಾದಿ ಹಿಡಿಯುವುದು ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬಂದಿದೆ.

ಪರ್ಯಾಯ ವ್ಯವಸ್ಥೆಗಳಿಲ್ಲ: ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರ ಆಕ್ರೋಶ ಎದುರಿಸಲಾಗದೆ ಜಿಲ್ಲೆಯ ಜನಪ್ರತಿನಿಧಿಗಳು ತಲೆಮರೆಸಿಕೊಂಡು ಓಡಾಡುತ್ತಿ ದ್ದಾರೆ. ಪ್ರತಿ ವರ್ಷ ಎದುರಾಗುತ್ತಿರುವ ನೀರಿನ ಕೊರತೆ ನಿವಾರಣೆಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಬಳಿ ಪರ್ಯಾಯ ವ್ಯವಸ್ಥೆಗಳೂ ಇಲ್ಲ. ದೂರದೃಷ್ಟಿಯೂ ಇಲ್ಲ. ನೀರಿಗೆ ಅಭಾವ ಸೃಷ್ಟಿಯಾದಾಗಲೆಲ್ಲಾ ಕೇಂದ್ರ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ವರುಣನ ಮೇಲೆ ಹೊರೆ ಹಾಕಿ ಜವಾಬ್ದಾರಿಯಿಂದ ಜಾರಿಕೊಳ್ಳುವುದು ಮಾಮೂಲಾಗಿದೆ.

ಜಲಸಂಪತ್ತನ್ನು ಗಟ್ಟಿಗೊಳಿಸಬೇಕು: ಪ್ರತಿ ವರ್ಷ ಜಿಲ್ಲೆಯೊಳಗೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ನೀರಿನ ಸಂಕಷ್ಟವನ್ನು ದೂರ ಮಾಡುವ ದೂರದೃಷ್ಟಿಯೊಂದಿಗೆ ಕೆರೆಗಳನ್ನು ಪುನಶ್ಚೇತನಗೊಳಿಸಿ ಜಲಸಂಪತ್ತನ್ನು ಗಟ್ಟಿಗೊಳಿಸುವ ಪ್ರಯತ್ನ ಯಾರಿಂದಲೂ ನಡೆಯುತ್ತಿಲ್ಲ. ಅತಿ ಹೆಚ್ಚು ಮಳೆ ಬಿದ್ದ ಸಂದರ್ಭದಲ್ಲೂ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಕನಿಷ್ಠ ವ್ಯವಸ್ಥೆಗಳನ್ನು ಮಾಡುವಲ್ಲೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರಿಲ್ಲ. ಇದರಿಂದ ಬೇಸಿಗೆಯಲ್ಲಿ ಕೆರೆಗಳು ಬರಿದಾಗುವುದು, ನೀರಿಗೆ ರೈತರು ಪರದಾಡುವುದು, ಸಾಲಬಾಧೆಯಿಂದ ರೈತರು ನೇಣಿಗೆ ಕೊರಳೊಡ್ಡುವುದು ನಿರಂತರವಾಗಿ ನಡೆದಿದೆ.

ಶೇ.16ರಷ್ಟು ಮಳೆ ಕೊರತೆ: ಈ ವರ್ಷ ಜನವರಿಯಿಂದ ಜೂ.23ರವರೆಗೆ ಜಿಲ್ಲೆಯೊಳಗೆ 230.2 ಮಿ.ಮೀ. ವಾಡಿಕೆ ಮಳೆಗೆ 193.6 ಮಿ.ಮೀ. ಮಳೆಯಾಗಿದೆ. ಶೇ.16ರಷ್ಟು ಮಳೆ ಕೊರತೆ ಎದುರಾಗಿದೆ. ನಾಗಮಂಗಲ ಹೊರತುಪಡಿಸಿ ಉಳಿದ ತಾಲೂಕುಗಳಲ್ಲೂ ಮಳೆ ಕೊರತೆ ಇರುವುದು ಕೃಷಿ ಇಲಾಖೆಯ ಅಂಕಿ-ಅಂಶಗಳಿಂದ ಗೊತ್ತಾಗಿದೆ.

Advertisement

ಕೆ.ಆರ್‌.ಪೇಟೆ ತಾಲೂಕಿನಲ್ಲಿ 237.5 ಮಿ.ಮೀ. ವಾಡಿಕೆ ಮಳೆಗೆ 184.1 ಮಿ.ಮೀ. ಮಳೆಯಾಗಿದ್ದು ಶೇ.22ರಷ್ಟು ಕೊರತೆ, ಮದ್ದೂರು ತಾಲೂಕಿನಲ್ಲಿ 233.6 ಮಿ.ಮೀ. ವಾಡಿಕೆ ಮಳೆಗೆ 173.4 ಮಿ.ಮೀ.ಮಳೆಯಾಗಿದ್ದು, ಶೇ.26ರಷ್ಟು ಕೊರತೆ, ಮಳವಳ್ಳಿ ತಾಲೂಕಿನಲ್ಲಿ 242 ಮಿ.ಮೀ.ಗೆ 205.8 ಮಿ.ಮೀ. ಮಳೆಯಾಗಿದ್ದು ಶೇ.15ರಷ್ಟು ಕೊರತೆ, ಮಂಡ್ಯ ತಾಲೂಕಿನಲ್ಲಿ 254.7 ಮಿ.ಮೀ.ಗೆ 186.9 ಮಿ.ಮೀ. ಮಳೆಯಾಗಿ ಶೇ.27ರಷ್ಟು ಮಳೆ ಕೊರತೆಯಾಗಿದೆ.

ನಾಗಮಂಗಲ ತಾಲೂಕಿನಲ್ಲಿ 190.9 ಮಿ.ಮೀ.ವಾಡಿಕೆ ಮಳೆಗೆ 213.2 ಮಿ.ಮೀ. ಮಳೆಯಾಗಿ ಶೇ.12ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಆದರೆ, ಈ ಮಳೆ ತಾಲೂಕಿನ ಎಲ್ಲಾ ಕಡೆ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಪಾಂಡವಪುರ ತಾಲೂಕಿನಲ್ಲಿ 221.1 ಮಿ.ಮೀ. ವಾಡಿಕೆ ಮಳೆಗೆ 195.2 ಮಿ.ಮೀ. ಮಳೆಯಾಗಿದ್ದು ಶೇ.12ರಷ್ಟು ಕೊರತೆ ಉಂಟಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ 231.6 ಮಿ.ಮೀ. ವಾಡಿಕೆ ಮಳೆಗೆ 196.6 ಮಿ.ಮೀ. ಮಳೆಯಾಗಿ ಶೇ.15ರಷ್ಟು ಮಳೆ ಕೊರತೆಯಾಗಿದೆ.

ಕಬ್ಬಿನ ರಕ್ಷಣೆಗಾಗಿ ನೀರಿಗೆ ಬೇಡಿಕೆ: ಹನ್ನೆರಡು ತಿಂಗಳು ಪೂರೈಸಿರುವ ಕಬ್ಬಿಗೆ ಈಗ ನೀರಿನ ಅಗತ್ಯ ಹೆಚ್ಚಿದೆ. ಪ್ರಸ್ತುತ ನೀರು ಸಿಗದೇ ಹೋದಲ್ಲಿ ಕಬ್ಬಿನ ಇಳುವರಿ ಕುಂಠಿತಗೊಂಡು ಉರುವಲಾಗುವ ಭಯ ರೈತರನ್ನು ಕಾಡುತ್ತಿದೆ. ಬಿಸಿಲಿನ ತಾಪದ ಜೊತೆಗೆ ಗಾಳಿಯ ವೇಗದಿಂದಾಗಿ ಭೂಮಿಯೊಳಗಿನ ತೇವಾಂಶ ಶೀಘ್ರಗತಿಯಲ್ಲಿ ಕಡಿಮೆಯಾಗುತ್ತಿದ್ದು, ಇದು ಕಬ್ಬಿನ ಬೆಳೆ ಒಣಗಲು ಪ್ರಮುಖ ಕಾರಣವಾಗಿದೆ. ಅದಕ್ಕಾಗಿ ಒಂದೇ ಒಂದು ಕಟ್ಟು ನೀರು ನೀಡಿ ರೈತರನ್ನು ಉಳಿಸುವಂತೆ ಹೋರಾಟಕ್ಕಿಳಿದಿದ್ದಾರೆ.

 

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next