Advertisement

ಮುಂಗಾರು ಪೂರ್ವ ಮಳೆಯಬ್ಬರ: ಸಿಡಿಲು ಗಾಳಿ ಮಳೆಗೆ ಹಾನಿ

06:00 AM May 27, 2018 | |

ಮಂಗಳೂರು: ಮಂಗಳೂರು ನಗರ, ಕೋಟೆಕಾರ್‌, ಬೀರಿ, ಸುರತ್ಕಲ್‌, ಪಡುಬಿದ್ರೆ, ಮಡಂತ್ಯಾರು, ಕಾರ್ಕಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಮೂಲ್ಕಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಗುಡುಗು, ಸಿಡಿಲು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಶನಿವಾರ ಬಹುತೇಕ ಕಡೆ ಕಡಲು ಶಾಂತವಾಗಿತ್ತು.

Advertisement

ಸುಳ್ಯದ ಮಡಪ್ಪಾಡಿಯಲ್ಲಿ ವಿದ್ಯುತ್‌ ಕಂಬ, ಮರ ಉರುಳಿ ಹಾನಿ ಉಂಟಾಗಿದೆ. ಭಾರೀ ಗಾಳಿಯ ಪರಿಣಾಮ ಕಾರ್ಕಳದ ಅಜೆಕಾರು, ಅಂಡಾರು ಸುತ್ತಮುತ್ತಲಿನ ಮನೆ ಗಳಿಗೆ ಮರ ಬಿದ್ದು, ಹಾನಿಯಾಗಿದೆ. ಮಂಗಳೂರು ನಗರ ದಕ್ಷಿಣದ ಚಿಲಿಂಬಿ ಗುಡ್ಡೆ ಪರಿಸರದಲ್ಲಿ ಎರಡು ಮನೆಗಳು ಭಾಗಶಃ ಧ್ವಂಸಗೊಂಡಿವೆ. ಗಾಳಿಗೆ ಉಪ್ಪಿನಂಗಡಿ ಆಸುಪಾಸು ಹಲವು ಮರ ಮತ್ತು ವಿದ್ಯುತ್‌ ಕಂಬಗಳು ಉರುಳಿ ಮನೆಗಳಿಗೆ ಹಾನಿ ಆಗಿದೆ.  

ಶನಿವಾರ ಬೆಳಗ್ಗಿನಿಂದಲೇ ಜಿಲ್ಲೆ ಯಾದ್ಯಂತ ಮೋಡ ಮುಸುಕಿತ್ತು. ಮಂಗಳೂರು ನಗರ, ಕುಂದಾಪುರ, ವೇಣೂರು, ನಾರಾವಿ, ಮಡಂತ್ಯಾರು, ಮಚ್ಚಿನ, ಬಂಟ್ವಾಳ, ವಿಟ್ಲ, ಸುಳ್ಯ, ಶಿರ್ವ, ಕಿನ್ನಿಗೋಳಿ, ಪೂಂಜಾಲಕಟ್ಟೆ, ಕಾರ್ಕಳ, ತೆಕ್ಕಟ್ಟೆ, ಹಳೆಯಂಗಡಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. 

ಉಪ್ಪಿನಂಗಡಿ: ಹಾನಿ ಶುಕ್ರವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆ ಮತ್ತು ಸಿಡಿಲಿಗೆ ಉಪ್ಪಿನಂಗಡಿ ಪರಿಸರದ ಹಲವೆಡೆ ಮರಗಳು ಉರುಳಿ, ವಿದ್ಯುತ್‌ ಕಂಬ ಮತ್ತು ಮನೆಗಳಿಗೆ ಹಾನಿಯುಂಟಾಗಿದೆ.

ಮನೆ ಮೇಲೆ ಉರುಳಿದ ಮರ
ಸುಳ್ಯ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಗುಡುಗು ಸಹಿತ ಗಾಳಿ ಮಳೆ ಆಗಿದ್ದು, ಮಡಪ್ಪಾಡಿ ಗ್ರಾಮದ ಕೇಪುಳ ಕಜೆ ನಿವಾಸಿ ಪದ್ಮಾವತಿ ಅವರ ಮನೆ ಮೇಲೆ ಮರ ಉರುಳಿ ಹಾನಿ ಆಗಿದೆ. 

Advertisement

ಉಡುಪಿ ಜಿಲ್ಲೆ: ಅಲ್ಲಲ್ಲಿ ನಷ್ಟ
ಕಾರ್ಕಳ ತಾಲೂಕಿನ ವಿವಿಧೆಡೆ ಶುಕ್ರವಾರ ತಡರಾತ್ರಿ – ಶನಿವಾರ ಮುಂಜಾನೆ ಸುರಿದಭಾರೀ ಗಾಳಿ ಮಳೆ ಹಾಗೂ ಸಿಡಿಲಿಗೆ ಕೃಷಿ, ಮನೆಗಳಿಗೆ ಹಾನಿಯುಂಟಾಗಿದ್ದು, ಸುಮಾರು ಮೂರೂವರೆ ಲಕ್ಷ ರೂ. ನಷ್ಟ ಸಂಭವಿಸಿದೆ. ಉಡುಪಿ, ತೆಕ್ಕಟ್ಟೆ, ಶಿರ್ವಗಳಲ್ಲಿಯೂ ಉತ್ತಮ ಮಳೆಯಾಗಿದೆ. 

ಇನ್ನೂ 3 ದಿನ ಮಳೆ
ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯ ಪ್ರಕಾರ ಮೇ 27ರಿಂದ 29ರ ವರೆಗೆ ದ. ಕ. ಮತ್ತು ಉಡುಪಿಯ ಅನೇಕ ಕಡೆ ಗುಡುಗು, ಸಿಡಿಲು, ಗಾಳಿಯಿಂದ ಕೂಡಿದ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next