Advertisement

99 ಕೋಟಿ ಮೌಲ್ಯದ ಮುಂಗಾರು ಬೆಳೆ ಹಾನಿ

04:24 PM Nov 18, 2018 | |

ಯಾದಗಿರಿ: ಜಿಲ್ಲೆಯ 6 ತಾಲೂಕುಗಳಲ್ಲಿ ಮುಂಗಾರು ಹಂಗಾಮಿನಲ್ಲಿ 1.37 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ಅನಾವೃಷ್ಟಿಯಿಂದ ಹಾನಿಯಾಗಿದ್ದು, ಒಟ್ಟು 99 ಕೋಟಿ ರೂ. ಅಂದಾಜಿಸಲಾಗಿದೆ. ಈ ಕುರಿತು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೇಂದ್ರದ ಬರ ಅಧ್ಯಯನ ತಂಡದ ಮುಖ್ಯಸ್ಥ ಕೇಂದ್ರ ಸರ್ಕಾರದ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತಾಬ್‌ ಗೌತಮ ಅವರ ನೇತೃತ್ವದ ಹೈದರಾಬಾದ್‌ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಬೆಳೆ ವಿಭಾಗದ ನಿರ್ದೇಶಕ ಬಿ.ಕೆ. ಶ್ರೀವಾಸ್ತವ ಹಾಗೂ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಹಿರಿಯ ಸಲಹೆಗಾರ ಎಸ್‌.ಸಿ. ಶರ್ಮಾ ಯಾದಗಿರಿ ತಾಲೂಕಿನ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

Advertisement

ಕಿಲ್ಲನಕೇರಾ ಗ್ರಾಮದ ರೈತ ಗುರುರಾಜ ಬನ್ನಪ್ಪ ಹೊಲದಲ್ಲಿ ಹತ್ತಿ ಬೆಳೆ ಹಾನಿಯಾಗಿರುವುದನ್ನು ಕೇಂದ್ರ ತಂಡದ ಅ ಧಿಕಾರಿಗಳು ಪರಿಶೀಲಿಸಿದರು. ಎಕರೆಗೆ ಕನಿಷ್ಠ 7 ಕ್ವಿಂಟಲ್‌ ಹತ್ತಿ ಬೆಳೆ ಬರಬೇಕು. ಆದರೆ, ಈ ಬಾರಿ ಮಳೆ ಕೊರತೆಯಿಂದ ಎಕರೆಗೆ ಒಂದು ಕ್ವಿಂಟಲ್‌ ಕೂಡ ಬೆಳೆ ಬರುವುದಿಲ್ಲ ಎಂದು
ರೈತ ಗುರುರಾಜ ತಿಳಿಸಿದರು. ನಂತರ ಪಕ್ಕದ ಹೊಲದ ರೈತ ರಾಜಶೇಖರ ಸಂಗಣ್ಣ ಅವರ ಹೊಲದಲ್ಲಿ ಹತ್ತಿ ಮತ್ತು ತೊಗರಿ ಬೆಳೆ ಪರಿಶೀಲನೆ ಮಾಡಲಾಯಿತು.

ಕಳೆದ ವರ್ಷ 8 ಕ್ವಿಂಟಲ್‌ ಹತ್ತಿ ಬೆಳೆದಿತ್ತು. ಆದರೆ, ಈ ಬಾರಿ ರಸಗೊಬ್ಬರ, ಕ್ರಿಮಿನಾಶಕ ಹಾಗೂ ಕಳೆ ತೆಗೆಸಲು ಮಾಡಿದ ಖರ್ಚು ಕೂಡ ಕೈಗೆ ಬರದಂತಾಗಿದೆ. ತೊಗರಿ ಬೆಳೆ ಪರಿಸ್ಥಿತಿ ಕೂಡ ಇದೇ ಆಗಿದೆ ಎಂದು ರೈತರು ಅಳಲು ತೋಡಿಕೊಂಡರು. ಕೂಡೂಲೂರಿನ ರೈತ ರಾಜರಾಮ ಲಕ್ಷ್ಮಣ ಹಿಂದಿನ ವರ್ಷ 4 ಕ್ವಿಂಟಲ್‌ ತೊಗರಿ ಬೆಳೆದಿತ್ತು.
 
ಈ ಬಾರಿ ಮಳೆ ಕೊರತೆಯಿಂದ ಎಕರೆಗೆ 1ರಿಂದ ಒಂದೂವರೆ ಕ್ವಿಂಟಲ್‌ ಇಳುವರಿ ಬರಬಹುದು ಎಂದು ತಿಳಿಸಿದರು. ನಂತರ ಶೆಟ್ಟಿಹಳ್ಳಿ ರೈತರಾದ ಲಕ್ಷ್ಮೀ ಭೀರಪ್ಪ ಮತ್ತು ಸೂಗಪ್ಪ ಬೀರಪ್ಪ ಅವರ ಹೊಲದಲ್ಲಿ ಹತ್ತಿ ಮತ್ತು ತೊಗರಿ ಬೆಳೆ ಪರಿಶೀಲನೆ ನಡೆಯಿತು.

ಇದಕ್ಕೂ ಮೊದಲು ಬಳಿಚಕ್ರ ಗ್ರಾಮದಲ್ಲಿ ಎನ್‌ ಆರ್‌ಡಿಡಬ್ಲೂÂಪಿ ಯೋಜನೆಯಡಿ 2016-17ನೇ ಸಾಲಿನಲ್ಲಿ 5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ 25 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ಪರಿಶೀಲಿಸಿದರು. ಈ ಯೋಜನೆಯಿಂದ ಮನೆ ಮತ್ತು ಬೀದಿ ನಳಗಳ ಮೂಲಕ 800 ಜನರು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮಾಹಿತಿ ನೀಡಿದರು. 

ಪ್ರವಾಸದ ಕೊನೆಯಲ್ಲಿ ಮಹಾತ್ಮ ಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2018-19ನೇ ಸಾಲಿನಲ್ಲಿ ಮಂಜೂರಾದ ಯಾದಗಿರಿ ತಾಲೂಕಿನ ದುಪ್ಪಲ್ಲಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದರು. ಕೆರೆ ಎರಡು ಪ್ಲಾಟ್‌ ಗಳಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ
ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರೊಂದಿಗೆ ಚರ್ಚಿಸಿದ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು, ಜಾಬ್‌ಕಾರ್ಡ್‌ ಮತ್ತು ಅವರ ಬ್ಯಾಂಕ್‌ ಖಾತೆಗೆ ಹಣ ಪಾವತಿಯಾದ ಬಗ್ಗೆ ಮಾಹಿತಿ ಪಡೆದರು.

Advertisement

ಈ ವೇಳೆ ಅಧಿಕಾರಿಗಳು ರೈತರು ಬರದಿಂದ ತತ್ತರಿಸಿ ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯುತ್ತಿದ್ದೇವೆ. ಅಧಿಕಾರಿಗಳು ತಮ್ಮ ಕಷ್ಟವನ್ನು ಕೇಳದೇ ವೀಕ್ಷಣೆ ಮಾಡಿ ತೆರಳಿರುವುದು ಸಮಸ್ಯೆಗೆ ಪರಿಹಾರ ಹೇಗೆ ದೊರೆಯುತ್ತದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಸಹಾಯಕ ಆಯುಕ್ತ ಡಾ| ಬಿ.ಎಸ್‌. ಮಂಜುನಾಥಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ವಸಂತರಾವ್‌ ವಿ. ಕುಲಕರ್ಣಿ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌., ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಜಿಲ್ಲಾ ಸಂಖ್ಯಾ ಸಂಗ್ರಹಣಾ ಧಿಕಾರಿ ಸುನೀಲ ಬಿಸ್ವಾಸ್‌, ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಇದ್ದರು.

ಜಮೀನಿನಲ್ಲಿ ಬೆಳೆದ ಬೆಳೆ ಕೈಗೆ ಬರದಿರುವುದರಿಂದ ಹೊಟ್ಟೆಪಾಡಿಗಾಗಿ ಕೂಲಿ ಮಾಡುತ್ತಿದ್ದೇವೆ. ನಮ್ಮ ಸಮಸ್ಯೆಯನ್ನು ಆಲಿಸಬೇಕಿದ್ದ ಅಧಿಕಾರಿಗಳು ಕೇವಲ ನೋಡಿ ಹೋಗಿಬಿಟ್ಟರು. ಉದ್ಯೋಗ ಖಾತ್ರಿ ಕೂಲಿಯನ್ನು 300 ರೂ.ಗೆ ಹೆಚ್ಚಿಸಬೇಕು. ಅಲ್ಲದೆ 200 ಮಾನವ ದಿನವನ್ನು ಸೃಷ್ಟಿಸಿ ಸಮರ್ಪಕ ಕೆಲಸ ನೀಡಬೇಕು ಹಾಗೂ ಪ್ರತಿ ಎಕರೆಗೆ 20 ಸಾವಿರ ರೂ. ಬರ ಪರಿಹಾರ ನೀಡಬೇಕು. 
 ಕಾಳಪ್ಪ ಬಡಿಗೇರ ದುಪ್ಪಲ್ಲಿ, ಕಾರ್ಮಿಕ

Advertisement

Udayavani is now on Telegram. Click here to join our channel and stay updated with the latest news.

Next