ಬೆಂಗಳೂರು: ಶುಕ್ರವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಕೆಲವೆಡೆ ಮತ್ತು ಒಳನಾಡಿನ ಒಂದೆರಡು ಕಡೆ ಮಳೆಯಾಯಿತು. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 4 ಸೆಂ.ಮೀ. ಮಳೆ ಸುರಿಯಿತು.
ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು (ಸೆಂ.ಮೀ.ಗಳಲ್ಲಿ): ಮಂಗಳೂರು, ಬರಗೂರು, ಇಳಕಲ್, ಸೈದಾಪುರ ತಲಾ 2, ಧರ್ಮಸ್ಥಳ, ಹೊನ್ನಾವರ, ಬಸವನ ಬಾಗೇವಾಡಿ, ತಾವರಗೆರಾ, ಗಂಗಾವತಿ, ಶಿರಾ, ಚಿಕ್ಕನಹಳ್ಳಿ, ಭಾಗಮಂಡಲ, ಪರಶುರಾಮಪುರ, ರಾಯಲ್ಪಡು, ಹಗರಿ ತಲಾ 1.
ಉತ್ತರ ಒಳನಾಡಿನ ಒಂದೆರಡು ಕಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕೊಂಚ ಕಡಿಮೆಯಾಗಿತ್ತು. ಕರಾವಳಿ ಮತ್ತು ದಕ್ಷಿಣ ಒಳನಾಡಿನಾದ್ಯಂತ ಹಾಗೂ ಉತ್ತರ ಒಳನಾಡಿಬ ಬಹುತೇಕ ಎಲ್ಲೆಡೆ ಗರಿಷ್ಠ ತಾಪಮಾನದಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬರಲಿಲ್ಲ.
ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 41.3 ಡಿ.ಸೆ. ತಾಪಮಾನ ದಾಖಲಾಯಿತು. ಭಾನುವಾರ ಬೆಳಗ್ಗೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವೆಡೆ ಮಿಂಚು-ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿಯ ಒಂದೆರಡು ಕಡೆ ಭಾರೀ ಮಳೆ ಸುರಿಯುವ ಸಂಭವವಿದೆ. ರಾಜ್ಯದ ಒಂದೆರಡು ಕಡೆ ತಾಸಿಗೆ 40-50 ಕಿ.ಮೀ. ವೇಗದ ಗಾಳಿಯೊಂದಿಗೆ ಸಿಡಿಲು ಸಹಿತ ಮಳೆಯಾಗಲಿದೆ. ಇದೇ ಅವಧಿಯಲ್ಲಿ ರಾಜ್ಯದ ಕೆಲವೆಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3 ಡಿ.ಸೆ. ಗಳಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.
Related Articles
ಸಿಡಿಲು ಬಡಿದು ಇಬ್ಬರ ಸಾವು
ಜಗಳೂರು: ಹೊಲದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಸಿಡಿಲು ಬಡಿದು ಮೃತಪಟ್ಟ ಘಟನೆ ತಾಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಜೆ 5:30ರ ಸುಮಾರಿಗೆ ನಡೆದಿದೆ. ತಾಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಕಾಟಲಿಂಗಪ್ಪ(42) ಹಾಗೂ ರಾಜು (32) ಸಿಡಿಲಿಗೆ ಬಲಿಯಾಗಿರುವ ದುರ್ದೈವಿಗಳು. ಅಣಬೂರು ಗ್ರಾಮದ ಬಳಿಯಿರುವ ತಮ್ಮ ಹೊಲಕ್ಕೆ ಸಂಬಂಧಿಕರೊಂದಿಗೆ ಹತ್ತಿ ಬೀಜ ಬಿತ್ತನೆ ಮಾಡಲು ತೆರಳಿದ್ದರು ಎನ್ನಲಾಗಿದ್ದು, ಸಂಜೆ 5:30ರ ಸುಮಾರಿಗೆ ಗಾಳಿ-ಮಳೆಯ ಹಿನ್ನೆಲೆಯಲ್ಲಿ ಇವರಿಬ್ಬರು ಮರದ ಕೆಳಗಡೆ ಆಶ್ರಯ ಪಡೆದ ವೇಳೆ ಅವಘಡ ಸಂಭವಿಸಿದೆ. ಇನ್ನು ಮೂವರು ಬೇರೆಡೆ ಆಶ್ರಯ ಪಡೆದಿದ್ದರಿಂದ ಬಚಾವ್ ಆಗಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ್ ಜಿ.ಸಂತೋಷಕುಮಾರ್ ಸಿಪಿಐ ಶ್ರೀನಿವಾಸ್ ಇದ್ದರು.