ತಿರುವನಂತಪುರಂ: ಯುರೋಪ್ ಸೇರಿದಂತೆ ಜಗತ್ತಿನ ಹಲವೆಡೆ ಸುದ್ದಿಯಾಗುತ್ತಿರುವ ಮಂಕಿಪಾಕ್ಸ್ ಸೋಂಕು ಇದೀಗ ಭಾರತದಲ್ಲಿಯೂ ಪತ್ತೆಯಾಗಿದೆ ಎಂದು ಗುರುವಾರ (ಜುಲೈ 14) ವರದಿ ತಿಳಿಸಿದೆ. ಇತ್ತೀಚೆಗಷ್ಟೇ ವಿದೇಶದಿಂದ ಕೇರಳಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕಿನ ಲಕ್ಷಣ ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಾಗಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಹರಿದ ನೆತ್ತರು: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ
ಸೋಂಕು ಕಂಡು ಬಂದ ವ್ಯಕ್ತಿಯ ಸ್ಯಾಂಪಲ್ಸ್ ಅನ್ನು ಸಂಗ್ರಹಿಸಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸೋಂಕಿನ ಸ್ಯಾಂಪಲ್ಸ್ ಪರೀಕ್ಷೆಯ ನಂತರವೇ ಮುಂದಿನ ಚಿಕಿತ್ಸೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಚಾರ್ಜ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಮಂಕಿಪಾಕ್ಸ್ ರೋಗ, ಲಕ್ಷಣ ಕಂಡು ಬಂದ ವ್ಯಕ್ತಿಯ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿಯನ್ನು ಸಚಿವೆ ವೀಣಾ ಬಹಿರಂಗಪಡಿಸಿಲ್ಲ. ವಿದೇಶದಲ್ಲಿದ್ದಾಗ ಈ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ಹರಡಿರುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಹೇಗೆ ಹರಡುತ್ತದೆ?: ಸೋಂಕಿತ ಪ್ರಾಣಿಯು ಕಚ್ಚುವುದರಿಂದ ಅಥವಾ ಅವುಗಳ ರಕ್ತ, ದೇಹದ ದ್ರವ ಅಥವಾ ತುಪ್ಪಳವನ್ನು ಮುಟ್ಟುವುದರಿಂದಲೂ ಇದು ಹರಡುತ್ತದೆ. ಇಲಿ, ಅಳಿಲುಗಳಂಥ ಪ್ರಾಣಿಗಳಿಂದ ಮಾತ್ರವಲ್ಲದೇ, ಸೋಂಕಿತ ಪ್ರಾಣಿಯ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದಲೂ ಇದು ಹಬ್ಬುತ್ತದೆ. ಇದು ಜನರಿಂದ ಜನರಿಗೆ ಸುಲಭವಾಗಿ ಹರಡುವುದಿಲ್ಲ. ಆದರೆ, ಸೋಂಕಿತ ವ್ಯಕ್ತಿ ಸೀನುವಾಗ, ಕೆಮ್ಮುವಾಗ ಹೊರಬೀಳುವ ದ್ರವದ ಸ್ಪರ್ಶದಿಂದ, ಆತ ಬಳಸಿರುವ ಬಟ್ಟೆ, ಟವೆಲ್, ಬೆಡ್‌ಶೀಟ್‌ಗಳನ್ನು ಬಳಸುವುದರಿಂದ ಮತ್ತೂಬ್ಬ ವ್ಯಕ್ತಿಗೆ ಹಬ್ಬುವ ಸಾಧ್ಯತೆಯಿರುತ್ತದೆ.
ರೋಗಲಕ್ಷಣಗಳು: ಮಂಕಿಪಾಕ್ಸ್ ಬಂದರೆ ರೋಗಲಕ್ಷಣ ಕಾಣಿಸಿಕೊಳ್ಳಲು 5ರಿಂದ 21 ದಿನಗಳ ಬೇಕು. ಜ್ವರ, ತಲೆನೋವು, ಸ್ನಾಯುನೋವು, ಬೆನ್ನು ನೋವು, ಗ್ರಂಥಿಗಳು ಊದಿಕೊಳ್ಳುವುದು, ನಡುಕ ಮತ್ತು ಬಳಲಿಕೆ ಕಾಣಿಸಿಕೊಂಡ ಬಳಿಕ, ಚರ್ಮದಲ್ಲಿ ಸಿಡುಬಿನಂಥ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಏನಿದು ಮಂಕಿಪಾಕ್ಸ್? :
ಆಫ್ರಿಕಾದ ಸೋಂಕಿತ ವನ್ಯಜೀವಿಗಳಿಂದ ಹರಡುತ್ತಿರುವ ಅಲ್ಪಪ್ರಮಾಣದ ಸೋಂಕು ರೋಗವಿದು. ಇದು ಮೊದಲು ಪತ್ತೆಯಾಗಿದ್ದು 1958ರಲ್ಲಿ. ಸಂಶೋಧನೆಗೆಂದು ತರಲಾಗಿದ್ದ ಕೋತಿಗಳಲ್ಲಿ ಇದು ಕಾಣಿಸಿಕೊಂಡಿತ್ತು. ಮನುಷ್ಯನಿಗೆ ಮೊದಲ ಬಾರಿ ಹರಡಿದ್ದು 1970ರಲ್ಲಿ. ಈ ಸೋಂಕು ತಗುಲಿದ ವ್ಯಕ್ತಿಯ ಮುಖದಲ್ಲಿ ಸಿಡುಬಿನಂಥ ಗುಳ್ಳೆಗಳು ಕಾಣಿಸಿಕೊಂಡು, ನಂತರ ಅದು ದೇಹವಿಡೀ ಹಬ್ಬುತ್ತದೆ.