Advertisement

ಮಂಕಿ ಪಾಕ್ಸ್ ಪತ್ತೆ ಆರ್‌ಟಿಪಿಸಿಆರ್‌ ಕಿಟ್‌ ಬಿಡುಗಡೆ: ಡಾ.ಅಶ್ವತ್ಥನಾರಾಯಣ

03:56 PM Aug 05, 2022 | Team Udayavani |

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಸಿಟಿಯ ಹೆಲಿಕ್ಸ್‌ ಪಾರ್ಕ್‌ನಲ್ಲಿ ಇರುವ ಮಾನವ ತಳಿಶಾಸ್ತ್ರ ಕೇಂದ್ರವು (ಸಿಎಚ್‌ಜಿ) ಅಪರೂಪದ ರೋಗಗಳ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು, ಅದರ ನೂತನ ಕಟ್ಟಡ ನಿರ್ಮಾಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಸುಮಾರು ನಲವತ್ತು ಸಾವಿರ ಚದರ ಅಡಿ ವಿಸ್ತರಣೆಯ ಮೂರು ಮಹಡಿಯ ಕಟ್ಟಡ ನಿರ್ಮಿಸುತ್ತಿದ್ದು, ಇಲ್ಲಿ ಅಪರೂಪದ ಕಾಯಿಲೆ ಹೊಂದಿರುವ ವರ್ಷಕ್ಕೆ ಸುಮಾರು ಎರಡೂವರೆ ಸಾವಿರ ಕುಟುಂಬಗಳಿಗೆ ಸಮಗ್ರ ಅನುವಂಶಿಕ ಸಮಾಲೋಚನೆ ಸೌಲಭ್ಯ, ಎಕ್ಸೋಮ್‌ ಸೀಕ್ವೆನ್ಸಿಂಗ್‌ ಸೇರಿದಂತೆ ರೋಗನಿರ್ಣಯದ ಪರೀಕ್ಷಾ ಸೌಲಭ್ಯದ ಸಾಮರ್ಥ್ಯ ಹೆಚ್ಚಿಸಲು ಬಳಸಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಸವಪೂರ್ವ ರೋಗನಿರ್ಣಯಕ್ಕಾಗಿ ತರಬೇತಿ ಮತ್ತು ಸೇವಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಗರ್ಭಾವಸ್ಥೆಯಲ್ಲಿನ ಅನುವಂಶಿಕ ರೋಗಗಳನ್ನು ಆರಂಭದಲ್ಲೇ ಗುರುತಿಸುವಿಕೆಗೆ ಸಹಾಯ ಮಾಡುವುದು ಕೂಡ ಇದರ ಮುಖ್ಯ ಉದ್ದೇಶ. ಪ್ರಯೋಗಾಲಯದ ತಳಿಶಾಸ್ತ್ರದಲ್ಲಿ ತರಬೇತಿ ನೀಡುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು. ಒಟ್ಟಿನಲ್ಲಿ ಅಪರೂಪದ ರೋಗಗಳಿಗೆ ಕಡಿಮೆ ವೆಚ್ಚದ ಚಿಕಿತ್ಸೆಗಳನ್ನು ಅಭಿ‍ವೃದ್ಧಿಪಡಿಸುವಲ್ಲಿ ಸಂಶೋಧನೆ ಮತ್ತು ಹೊಸ ಔಷಧಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.

ಮಾನವನ ಆರೋಗ್ಯ ಮತ್ತು ಕಾಯಿಲೆಗೆ ಸಂಬಂಧಿಸಿದಂತೆ ತಳಿಶಾಸ್ತ್ರದಲ್ಲಿ ಶಿಕ್ಷಣ, ಅನುವಂಶಿಕ ಕಾಯಿಲೆಗಳ ತರಬೇತಿ ಮತ್ತು ಸಂಶೋಧನೆಗಾಗಿ ರಾಷ್ಟ್ರಮಟ್ಟದಲ್ಲಿ ಶೇಷ್ಟತೆಯ ಕೇಂದ್ರವೆಂದು ಇದನ್ನು ಗುರುತಿಸಿದ್ದು, ಇಪ್ಪತ್ತು ವರ್ಷಗಳಿಂದ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ಅಪರೂಪದ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಇದಕ್ಕೊಂದು ಕಟ್ಟಡದ ಅಗತ್ಯವನ್ನು ಮನಗಂಡು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ಹದಿನೈದು ವರ್ಷಗಳಲ್ಲಿ ಸುಮಾರು ಮೂವತ್ತೈದು ಸಾವಿರ ಕುಟುಂಬಗಳಿಗೆ ಅನುವಂಶಿಕ ರೋಗಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಸಲಹೆ ನೀಡುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಸಚಿವರು ಅಭಿಪ್ರಾಯಪಟ್ಟರು.

Advertisement

ಈ ಸಂದರ್ಭದಲ್ಲಿ ಮಾನವ ತಳಿಕೇಂದ್ರದ ಸಂಸ್ಥಾಪಕ ನಿರ್ದೇಶಕ ಪ್ರೊ.ಎಚ್‌.ಶರತ್‌ ಚಂದ್ರ, ನಿರ್ದೇಶಕರಾದ ಪ್ರೊ ಜಯರಾಮ ಎಸ್‌ ಕಡಂದಲೆ, ಸಹಾಯಕ ನಿರ್ದೇಶಕಿ ಡಾ.ಮೀನಾಕ್ಷಿ ಭಟ್‌ ಇದ್ದರು.

ಮಂಕಿಪಾಕ್ಸ್ ಡಿಟೆಕ್ಷನ್‌ ಕಿಟ್‌ ಬಿಡುಗಡೆ
ಮಂಕಿ ಪಾಕ್ಸ್ ಪತ್ತೆಹಚ್ಚಲು ಅಭಿವೃದ್ಧಿಪಡಿಸಿರುವ ಆರ್‌ಟಿಪಿಸಿಆರ್‌ ಕಿಟ್‌ ಸೇರಿದಂತೆ ಒಂಬತ್ತು ಉತ್ಪನ್ನಗಳನ್ನು ಅನ್ನು ಸಚಿವ ಡಾ.ಅಶ್ವತ್ಥನಾರಾಯಣ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ನಿಯೋಡೆಎಕ್ಸ್‌ ಬಯೋಟೆಕ್‌ ಲ್ಯಾಬ್ಸ್‌ನ ಡಾ.ಪ್ರಭಾಕರ ಕುಲಕರ್ಣಿ ಅಭಿವೃದ್ಧಿಪಡಿಸಿರುವ ಈ ಕಿಟ್‌ನಿಂದ ಸುಲಭವಾಗಿ ಮಂಕಿ ಫಾಕ್ಸ್‌ ವೈರಸ್‌ ಅನ್ನು ಪತ್ತೆಹಚ್ಚಬಹುದಾಗಿದೆ. ಇದೇ ರೀತಿ ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಪತ್ತೆಹಚ್ಚಲು ನೆರವಾಗುವ ಅನ್ಕೊ ಡಿಎಕ್ಸ್‌, ನ್ಯೂ ಹಾರ್ಟ್‌ ಮತ್ತು ಪ್ಯೂರ್‌ ವಾಟರ್‌ ಹೀಗೆ ಒಂಬತ್ತು ಉತ್ಪನ್ನಗಳನ್ನ ಬಿಡುಗಡೆ ಮಾಡಿದರು.

ಕರ್ನಾಟಕ ನಾವಿನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್‌)ಯಡಿಯ ಬೆಂಗಳೂರು ಜೈವಿಕ ನಾವಿನ್ಯತಾ ಸಂಸ್ಥೆಯಲ್ಲಿ (ಬಿಬಿಸಿ) ಕಾರ್ಯನಿರ್ವಹಿಸುತ್ತಿರುವ ನಮೋದ್ಯಮಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ.ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರಸಿಂಗ್‌ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next