ದೇವದುರ್ಗ: ನೆರೆ ಹಾವಳಿ, ಹವಾಮಾನ ವೈಪರೀತ್ಯದಿಂದ ಬೆಳೆಗಳ ನಷ್ಟಕ್ಕೆ ತತ್ತರಿಸಿದ ತಾಲೂಕಿನ ರೈತರಿಗೆ ಇದೀಗ ಮತ್ತೂಂದು ಹೊಸ ಸಮಸ್ಯೆ ಎದುರಾಗಿದೆ.
ಹೌದು, ಬಹುತೇಕ ಬೆಳೆಗಳಿಗೆ ಇದೀಗ ಮಂಗಗಳ ಕಾಟ ಶುರುವಾಗಿದೆ. ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ಬೊಮ್ಮನಹಳ್ಳಿ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆಯನ್ನು ಮಂಗಗಳು ಕಿತ್ತು ಹಾಕುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಬೆಳೆ ರಕ್ಷಿಸಲು ರೈತರು ಹಗಲು-ರಾತ್ರಿ ಎನ್ನದೇ ಕಾಯಬೇಕಿದೆ. ಮಂಗಗಳ ಕಾಟ ತಪ್ಪಿಸಲು ರೈತರು ಕಲ್ಲು ಎಸೆದರೆ ಬೆನ್ನತ್ತಿ ಕಾಡುವ ಭೀತಿ ತರಿಸಿವೆ. ಇಂತಹ ವಾತಾವರಣ ನಿರ್ಮಾಣವಾದ್ದರಿಂದ ರೈತರಲ್ಲಿ ಚಿಂತೆ ಶುರುವಾಗಿದೆ.
ಮಂಗಗಳ ಕಾಟದಿಂದ ಬೇಸತ್ತ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೌಖೀಕವಾಗಿ ಹೇಳಿದ್ದಾರೆ. ಮೊದಲೇ ನಷ್ಟದಲ್ಲಿರುವ ರೈತರಿಗೆ ಈ ಬಾರಿ ಶೇಂಗಾ ಬೆಳೆ ಕೈ ಹಿಡಿಯುವ ನಡುವೆಯೇ ಮಂಗಗಳ ಕಾಟ ಎದುರಾಗಿದೆ.
ಇದಕ್ಕೆ ನಿಂಬೆಹಣ್ಣು, ಅಲ್ಪಸ್ವಲ್ಪ ತರಕಾರಿ ಬೆಳೆದ ರೈತರು ಕೂಡ ಹೊರತಾಗಿಲ್ಲ. ಐದಾರು ಕೋತಿಗಳು ಏಕಾಏಕಿ ಜಮೀನಿಗೆ ನುಗ್ಗುವುದರಿಂದ ರೈತರನ್ನು ಫಜೀತಿಗೆ ತಂದಿಟ್ಟಿವೆ. ಬೆಳೆಗಳನ್ನು ಕಿತ್ತು ಹಾಕಿ ಮತ್ತೊಂದು ಹೊಲಕ್ಕೆ ನುಗ್ಗುವ ಹಿನ್ನೆಲೆ ಬೆದರಿಸಲು ಹೋದವರಿಗೆ ಬೆನ್ನತ್ತುವುದರಿಂದ ರೈತರೂ ಭಯ ಪಡುವಂತಾಗಿದೆ.
ಇಂತಹ ಕೋತಿಗಳ ಕಾಟ ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕು. ಈಗಾಗಲೇ ಸಾವಿರಾರೂ ವೆಚ್ಚ ಭರಿಸಿ ರೈತರು ಶೇಂಗಾ ಸೇರಿದಂತೆ ಇತರೆ ಬೆಳೆ ಬೆಳೆದಿದ್ದಾರೆ. ಕೋತಿಗಳ ಹಾವಳಿಗೆ ರೈತಾಪಿವರ್ಗ ಬೆಳೆನಷ್ಟ ಅನುಭವಿಸುವ ಮೊದಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೋತಿಗಳ ಕಾಟದಿಂದ ಬೆಳೆಗಳು ರಕ್ಷಣೆ ಮಾಡಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.