ಬೆಂಗಳೂರು: ಮಲೆನಾಡಿನಲ್ಲಿ ಮಾರಣಾಂತಿಕ ಮಂಗನ ಕಾಯಿಲೆ ತೀವ್ರವಾಗಿ ವಿಸ್ತರಿಸುತ್ತಿರುವ ಬೆನ್ನಲ್ಲೇ ಕಾಯಿಲೆಗೆ ನೀಡಲಾಗುವ ಲಸಿಕೆಯ ಸಾಮರ್ಥ್ಯ ಪರೀಕ್ಷೆಗೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.
1957ರಲ್ಲಿ ಮೊದಲ ಬಾರಿಗೆ ಕ್ಯಾಸನೂರು ಕಾಡಿನಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆಗೆ 1991-92ರಲ್ಲಿ ಲಸಿಕೆ ಕಂಡು ಹಿಡಿಯಲಾಯಿತು. ಹೆಬ್ಟಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಈ ಲಸಿಕೆಯನ್ನು ತಯಾರಿಸುತ್ತಿರುವ ದೇಶದ ಏಕೈಕ ಸಂಸ್ಥೆಯಾಗಿದೆ. ಸಾಮಾನ್ಯವಾಗಿ ಕಾಯಿಲೆಯಿಂದ ಮಂಗ ಅಥವಾ ಮನುಷ್ಯ ಸಾವನ್ನಪ್ಪಿದರೆ ಅಥವಾ ಉಣ್ಣೆಗಳಲ್ಲಿ ಈ ಕಾಯಿಲೆಗೆ ಕಾರಣವಾದ ವೈರಸ್‌ಗಳು ಕಂಡು ಬಂದ ಜಾಗದಿಂದ ಐದು ಕಿ.ಮೀ.ಸುತ್ತ ವಾಸಿಸುವ ಪ್ರತಿಯೊಬ್ಬರಿಗೂ ತಿಂಗಳ ಅಂತರದಲ್ಲಿ ಮೂರು ಲಸಿಕೆಗಳನ್ನು ಹಾಕಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಪ್ರಕರಣಗಳು ಹೆಚ್ಚಾಗಿದ್ದರಿಂದ ಆತಂಕಗೊಂಡ ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದರು. ಉಳಿದ ವರ್ಷಗಳಲ್ಲಿ ಸ್ವತಃ ಮನೆ ಬಾಗಿಲಿಗೆ ಹೋದರೂ, ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುವುದಿಲ್ಲ ಎಂಬುದು ಆರೋಗ್ಯ ಇಲಾಖೆ ಆರೋಪ.
ಹೊಸ ಲಸಿಕೆ; ಹೊರಗುತ್ತಿಗೆಗೆ ಚಿಂತನೆ: ಈ ಹಿನ್ನೆಲೆಯಲ್ಲಿ ಒಮ್ಮೆ ಲಸಿಕೆ ಹಾಕಿದರೆ ಕನಿಷ್ಠ ಐದು ವರ್ಷ ರಕ್ಷಣೆ ನೀಡುವ ಸಾಮರ್ಥ್ಯ ಇರುವಂತಹ ಹೊಸ ಲಸಿಕೆ ಅಭಿವೃದ್ಧಿಪಡಿಸಬೇಕು ಎನ್ನುವುದು ನಮ್ಮ ಉದ್ದೇಶ. ಹೊಸ ಲಸಿಕೆ ಕಂಡು ಹಿಡಿಯುವುದರ ಜತೆಗೆ ಲಸಿಕೆಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸಾಧ್ಯವಾದರೆ ಖಾಸಗಿ ಕಂಪನಿಗಳಿಗೆ ಪೂರೈಕೆ ಜವಾಬ್ದಾರಿ ವಹಿಸಬೇಕು. ಈ ಮಧ್ಯೆ, ಪ್ರಸ್ತುತ ಇರುವ ಲಸಿಕೆಯ ಸಾಮರ್ಥ್ಯ ಕಡಿಮೆ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಸಜ್ಜನ್ ಶೆಟ್ಟಿ ಸ್ಪಷ್ಟಪಡಿಸಿದರು.
ಶಿವಮೊಗ್ಗದ ಸೊರಬ ತಾಲೂಕಿಗೆ ಸೀಮಿತವಾಗಿದ್ದ ಮಂಗನ ಕಾಯಿಲೆ ಪ್ರಕರಣಗಳು ಪ್ರತಿ ವರ್ಷ 20ರಿಂದ 30 ದಾಖಲಾಗುತ್ತಿದ್ದವು. ಈ ಬಾರಿ 15 ಜನ ಸಾವನ್ನಪ್ಪಿದ್ದು, ಸುಮಾರು 50ಕ್ಕೂ ಅಧಿಕ ಪ್ರಕರಣಗಳು ಪತ್ತೆ ಆಗಿವೆ. ಅಲ್ಲದೆ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಚಿಕ್ಕಮಗಳೂರು, ಹಾಸನಕ್ಕೂ ವಿಸ್ತರಿಸಿದೆ. ರಾಜ್ಯದಲ್ಲೇ ಬರುವ ವರ್ಷಕ್ಕೆ 5.17 ಲಕ್ಷ ಲಸಿಕೆಗಳಿಗಾಗಿ ಆರೋಗ್ಯ ಇಲಾಖೆಯು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಮಧ್ಯೆ, ಮಹಾರಾಷ್ಟ್ರ, ಕೇರಳ, ಗೋವಾದಲ್ಲೂ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಅಲ್ಲಿಂದಲೂ ಲಸಿಕೆಗೆ ಬೇಡಿಕೆ ಬರಲಿದೆ. ಆದ್ದರಿಂದ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಯೂನಿಟ್ ಜತೆಗೆ ಹೊಸ ಲಸಿಕೆ ಅಭಿವೃದ್ಧಿಪಡಿಸಿ, ಅದರ ಪೂರೈಕೆಯನ್ನು ಖಾಸಗಿ ಔಷಧ ಕಂಪನಿಗಳಿಗೆ ವಹಿಸುವಂತೆ ಕೋರಲಾಗಿದೆ ಎಂದು ಮಾಹಿತಿ ನೀಡಿದರು.
Advertisement
‘ಸುಮಾರು 2-3 ದಶಕಗಳ ಹಿಂದೆ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್)ಗೆ ಲಸಿಕೆ ಕಂಡು ಹಿಡಿಯಲಾಗಿದೆ. ಆದರೆ, ಈಗಲೂ ಆ ಲಸಿಕೆ ಅಷ್ಟೇ ಪರಿಣಾಮಕಾರಿಯಾಗಿದೆಯೇ ಅಥವಾ ಸಾಮರ್ಥ್ಯ ಕಡಿಮೆ ಆಗಿದೆಯೇ ಎಂಬುದರ ಪರೀಕ್ಷೆ ನಡೆಸಬೇಕು. ಜತೆಗೆ ಹೊಸ ಲಸಿಕೆ ಕಂಡು ಹಿಡಿಯಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಈಚೆಗೆ ರಾಜ್ಯ ಆರೋಗ್ಯ ಇಲಾಖೆ ಪತ್ರ ಬರೆದಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು ಮೂರು ಮಂದಿ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿತ್ತು. ಆ ತಂಡವು ಸುಮಾರು 10-12 ದಿನಗಳ ಕಾಲ ಅಧ್ಯಯನ ನಡೆಸಿದ್ದು, ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
Related Articles
ಸಾಮರ್ಥ್ಯ ಕುಗ್ಗಲು ಸಾಧ್ಯವಿಲ್ಲ:
ಈಗಿರುವ ಲಸಿಕೆಯ ಸಾಮರ್ಥ್ಯ ಕಡಿಮೆಯಾಗಲು ಸಾಧ್ಯವಿಲ್ಲ. ಬೇಕಿದ್ದರೆ ಇದೇ ಲಸಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಇದೆ. ಇನ್ನು ಕಾಯಿಲೆ ವಿಸ್ತರಣೆ ಹಾಗೂ ಅದರ ತಡೆಗೆ ಲಸಿಕೆಯ ಬೇಡಿಕೆ ಹೆಚ್ಚುತ್ತಿರುವುದರಿಂದ ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಹೆಸರು ಹೇಳಲಿಚ್ಛಿಸದ ವಿಜ್ಞಾನಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದರು.
● ವಿಜಯಕುಮಾರ್ ಚಂದರಗಿ
Advertisement