Advertisement

Monkey Disease; ರಾಜ್ಯದಲ್ಲಿ ಹೆಚ್ಚುತ್ತಿರುವ ಕೆಎಫ್ ಡಿ: ನಿರ್ಲಕ್ಷ್ಯ ಸಲ್ಲ

11:43 PM Feb 20, 2024 | Shreeram Nayak |

ರಾಜ್ಯದಲ್ಲಿ “ಮಂಗನ ಕಾಯಿಲೆ’ ಎಂದು ಸಾಮಾನ್ಯವಾಗಿ ಕರೆಯಲಾಗುವ ಕೆಎಫ್ ಡಿ ಸೋಂಕಿಗೆ ಗುರಿಯಾದವರ ಸಂಖ್ಯೆ ನೂರು ದಾಟಿರುವುದು ಆತಂಕಕಾರಿ ಬೆಳವಣಿಗೆ. ಕಳೆದ ಕೆಲವು ವರ್ಷಗಳಲ್ಲಿ ಕಾಣಿಸಿಕೊಳ್ಳದಿದ್ದ ಕೆಎಫ್ ಡಿ ಈ ವರ್ಷ ಮತ್ತೆ ಮಲೆನಾಡಿನಲ್ಲಿ ಪತ್ತೆಯಾಗಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

ರಾಜ್ಯದಲ್ಲಿ ಕೆಎಫ್ ಡಿ ಪೀಡಿತ ಎಂದು ಗುರುತಿಸಲಾದ 12 ಜಿಲ್ಲೆಗಳಿವೆಯಾದರೂ, ಈಗ ಬರೆ ಮೂರು ಜಿಲ್ಲೆಗಳಿಗಷ್ಟೇ ಇದು ವ್ಯಾಪಕವಾಗಿರುವುದು ಒಂದಿಷ್ಟು ಸಮಾಧಾನದ ಸಂಗತಿ. ಪ್ರಸಕ್ತ ವರ್ಷ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೋಂಕು ತೀವ್ರಗತಿಯಲ್ಲಿ ಹಬ್ಬುತ್ತಿದ್ದು, ಈ ತನಕ 4,080 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಸೋಮವಾರದ ತನಕ 103 ಜನರಿಗೆ ಸೋಂಕು ದೃಢವಾಗಿದೆ.

ದುರಂತವೆಂದರೆ, ಈ ಕಾಯಿಲೆ ಈ ಭಾಗದಲ್ಲಿ ಪತ್ತೆಯಾಗಿ ಅರುವತ್ತು ವರ್ಷಗಳು ಕಳೆದರೂ ಇನ್ನೂ ಅದಕ್ಕೆ ಸೂಕ್ತ ಲಸಿಕೆ ಮತ್ತು ಚಿಕಿತ್ಸೆಗೆ ಸರಕಾರಗಳು ವ್ಯವಸ್ಥೆ ಮಾಡದೇ ಇರುವುದು. ಕೋವಿಡ್‌ನ‌ಂಥ ಮಹಾಮಾರಿಗೆ ಕೆಲವೇ ತಿಂಗಳಲ್ಲಿ ಲಸಿಕೆ ಕಂಡುಹಿಡಿದ ನಮ್ಮ ದೇಶದಲ್ಲಿ ಕೆಎಫ್ಡಿಯಂಥ ಸಮಸ್ಯೆಗೆ ಇನ್ನೂ ಲಸಿಕೆಯನ್ನು ಮರು ಆವಿಷ್ಕಾರ ಮಾಡ ಲಾಗದೇ ಇರುವುದು ನಾಚಿಕೆಗೇಡು. ಇನ್ನೂ ಅಪಮಾನಕಾರಿ ಸಂಗತಿ ಎಂದರೆ, ಈ ಬಗ್ಗೆ ಸಂಶೋಧನೆ ನಡೆಸಲು ಈ ಭಾಗದಲ್ಲಿ ಒಂದೇ ಒಂದು ಕೇಂದ್ರವನ್ನು ಸ್ಥಾಸಲು ಸರಕಾರಗಳು ವಿಫ‌ಲವಾಗಿರುವುದು. ಜನ ಸಾಮಾ ನ್ಯರ ಬದುಕಿನ ಬಗ್ಗೆ ಆಡಳಿತಾರೂಢರಿಗೆ ಇರುವ ಕಳಕಳಿಯನ್ನು ಇದು ಸೂಚಿಸುತ್ತದೆ.
ಹಿಂದೆ ಕೇಂದ್ರ ಸರಕಾರ “ಒನ್‌ ಹೆಲ್ತ್‌’ ಯೋಜನೆಯಡಿ ಕೆಎಫ್ಡಿ ಕುರಿತು ಸಂಶೋಧನೆ ಕೈಗೊಳ್ಳಲಿದೆ ಎಂಬ ವರದಿಗಳು ಬಂದಿದ್ದವು. ಆದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಇದು ಕಾರ್ಯಸಾಧುವಾಗಲೇ ಇಲ್ಲ. ಈಗ ಶಿರಸಿ ಹಾಗೂ ಸಾಗರದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸರಕಾರ ಮುಂದಾಗಿರುವುದು ಶ್ಲಾಘನೀಯ.

ಈ ಸಲ ಕೆಎಫ್ ಡಿ ತೀವ್ರವಾಗಿ ಹರಡುತ್ತಿರುವುದು ಈ ಭಾಗದಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿದೆ. ಅಡಿಕೆ ಕುಯಿಲಿನ ಸಂದರ್ಭದಲ್ಲಿ ಈ ವೈರಸ್‌ ಹಬ್ಬುತ್ತಿದೆ ಎನ್ನುವುದು ಈಚೆಗೆ ಬಾಲಕಿಯೊಬ್ಬಳು ಸಾವನ್ನಪ್ಪಿರುವುದರಿಂದ ಖಚಿತವಾಗಿದೆ. ಕೊಪ್ಪದಲ್ಲಿ ತೋಟಕ್ಕೆ ಕೆಲಸಕ್ಕೆಂದು ಬಂದಿದ್ದ ಉತ್ತರ ಭಾರತದ ಕಾರ್ಮಿಕರಲ್ಲೂ ಸೋಂಕು ಕಾಣಿಸಿಕೊಂಡಿದೆ. ಇದನ್ನೆಲ್ಲ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಜನಸಾಮಾನ್ಯರಿಗೆ ಕೆಎಫ್ಡಿ ಸೋಂಕು ಹೇಗೆ ಬರುತ್ತದೆ ಎನ್ನುವ ಸಾಮಾನ್ಯ ಮಾಹಿತಿಯೂ ಇಲ್ಲದೆ ಇರುವುದನ್ನು ನೋಡಿದರೆ ನಮ್ಮ ಆರೋಗ್ಯ ಇಲಾಖೆ ಈ ಕುರಿತು ಯಾವ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದೆ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತದೆ. ಲಸಿಕೆ ಹಾಗೂ ಚಿಕಿತ್ಸೆಯ ಜತೆಗೆ ಈ ಸೋಂಕಿನ ಕುರಿತು ಜನಸಾಮಾನ್ಯರಲ್ಲಿ ಸರಿಯಾದ ಜಾಗೃತಿ ಮೂಡಿಸುವ ಕೆಲಸ ಆದ್ಯತೆಯಲ್ಲಿ ನಡೆಯಬೇಕಿದೆ. ಶಾಲಾ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಭಾಗದಲ್ಲಿ ಅನಾರೋಗ್ಯದ ಗುಣಲಕ್ಷಣ ಕಾಣಿಸಿಕೊಂಡ ಕೂಡಲೇ ತಡ ಮಾಡದೆ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯತತ್ಪರವಾಗಬೇಕು ಹಾಗೂ ಇದಕ್ಕೆ ಜನರ ಸಹಕಾರವೂ ಬೇಕು.

Advertisement

Udayavani is now on Telegram. Click here to join our channel and stay updated with the latest news.

Next