Advertisement

ಮಾತಿನ ಚಿಕಿತ್ಸೆಯಿಂದ ಕಾಯಿಲೆ ವಾಸಿಯಾದೀತೆ?

06:50 PM Apr 27, 2020 | Suhan S |

ಹೊನ್ನಾವರ: ಸಕಾಲದಲ್ಲಿ ಸಾರ್ವಜನಿಕರು ಮತ್ತು ಸರ್ಕಾರ ಮುನ್ನೆಚ್ಚರಿಕೆ ವಹಿಸದ ಕಾರಣ ಮಂಗನ ಕಾಯಿಲೆ ಹೆಚ್ಚುತ್ತ ನಡೆದಿದೆ. ಆರಂಭದಲ್ಲಿ ಜನರೂ ಲಸಿಕೆ ಪಡೆಯಲು ನಿರ್ಲಕ್ಷ ವಹಿಸಿದ್ದು, ಇದೀಗ ಲಸಿಕೆ ಪಡೆದರೂ ಪ್ರಯೋಜನ ಇಲ್ಲದಂತಾಗಿದೆ. ಜೊತೆಗೆ ರೋಗ ನಿಯಂತ್ರಣಕ್ಕೆ, ಅಗತ್ಯ ಚಿಕಿತ್ಸೆಗೆ ವೈದ್ಯಕೀಯ ಸೌಲಭ್ಯಗಳು ಬೇಕಾದಷ್ಟು ಇಲ್ಲವಾಗಿದ್ದು, ಆಳುವವರ ಮಾತಿನ ಚಿಕಿತ್ಸೆಯಿಂದ ಕಾಯಿಲೆ ವಾಸಿಯಾದೀತೆ ಎಂಬ ಪ್ರಶ್ನೆ ಎದುರಾಗಿದೆ.

Advertisement

ಉತ್ತರಕ್ನನಡ ಮತ್ತು ಸಾಗರ, ಶಿವಮೊಗ್ಗಾ ಗಡಿಭಾಗದ ಜನ ಮಂಗನಿಂದ ಬಚ್ಚಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಈಗ ಮಂಗನಿಂದ ಮನುಷ್ಯನನ್ನು ಬಚ್ಚಿಡುವುದು ಸಾಧ್ಯವಿಲ್ಲ. ಮನುಷ್ಯನಿಂದ ಮಂಗನನ್ನು ದೂರ ಓಡಿಸುವುದು ಆಡಳಿತದ ಕೈಯಲ್ಲಿದೆ. ಊರಿನಿಂದ ಕಾಡಿನ ತನಕವೂ ಜನವಸತಿ ಇದ್ದಲ್ಲೆಲ್ಲಾ ಮಂಗಗಳು ರೈತನ ಬಾಳೆ ಮತ್ತು ತೆಂಗನ್ನು ಸರ್ವನಾಶ ಮಾಡಿವೆ.

ತುರ್ತು ಏನೇನಾಗಬೇಕು?: ಎಲ್ಲೆಲ್ಲಿ ಮಂಗ ಸತ್ತು ಬೀಳುತ್ತದೆಯೋ ಅದನ್ನು ಕೂಡಲೇ ಸುಟ್ಟುಹಾಕಲು ಪೌರಕಾರ್ಮಿಕರಂತೆ ದುಡಿಯಬಲ್ಲ ಸಿಬ್ಬಂದಿ ಬೇಕು. ಪ್ರತ್ಯೇಕ ಪ್ರಯೋಗಾಲಯಬೇಕು. ಅರಣ್ಯ ಇಲಾಖೆ ಗಾರ್ಡ್‌ಗಳು ಮತ್ತು ಫಾರೆಸ್ಟರ್‌ಗಳನ್ನು ನೇಮಿಸಿ ಮೈಸೂರು ಪ್ರಾಂತ್ಯದಲ್ಲಿ ಆನೆ ಓಡಿಸಿದಂತೆ ಮಂಗಗಳನ್ನು ದಟ್ಟಕಾಡಿಗೆ ಓಡಿಸುವ ವ್ಯವಸ್ಥೆ ಆಗಬೇಕು. ಸರ್ಕಾರ ಮಣಿಪಾಲದಲ್ಲಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದರೂ ನಾಲ್ಕಾರು ದಿನ ಜ್ವರ ಬಂದ ಮೇಲೆ ಹೋಗಿ ಪ್ರಯೋಜನವಿಲ್ಲ. ಜ್ವರ ಬಂದವರನ್ನು ತಕ್ಷಣ ಗುರುತಿಸಿ ಆಸ್ಪತ್ರೆಗೆ ಸಾಗಿಸಬೇಕಾಗಿದೆ. ಇದನ್ನೆಲ್ಲಾ ಮಾಡಲು ಮಂಗನ ಕಾಯಿಲೆ ವಿಭಾಗಕ್ಕೆ ಸಿಬ್ಬಂದಿ, ಹಣ, ವಾಹನ ಬೇಕು. ಮುಖ್ಯಮಂತ್ರಿವರೆಗೆ ಹೋಗಿ ಮಂಗನ ಕಾಯಿಲೆ ಕುರಿತು ಉಚಿತ ಸಲಹೆ ನೀಡಿ ಜಿಲ್ಲೆಗೆ ಬಂದು ಪತ್ರಿಕಾ ವರದಿ ನೀಡುವ ರಾಜಕಾರಣಿಗಳು ಈ ವ್ಯವಸ್ಥೆ ಮಾಡಿಸಿಕೊಡಬೇಕಾಗಿದೆ.

ಒಂದೇ ಎರವಲು ಆಫೀಸು! ; ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಸಂಬಂ ಧಿಸಿ ಒಂದೇಎರವಲು ಆಫೀಸಿದೆ, ಒಬ್ಬರೇ ವೈದ್ಯರಿದ್ದಾರೆ. ಮಂಗನ ಕಾಯಿಲೆ ವಿರುದ್ಧ ಯುದ್ಧ ಸಾರಲು ಉಣ್ಣಿ ಸಂಗ್ರಹಿಸುವ ಸಿಬ್ಬಂದಿಯಿಲ್ಲ, ಟೈಪಿಸ್ಟ್‌ಗಳಿಲ್ಲ, ಸರಿಯಾದ ವಾಹನವಿಲ್ಲ. ಒಂದಿಬ್ಬರು ಸಿಬ್ಬಂದಿಯೊಂದಿಗೆ ಮೂರ್‍ನಾಲ್ಕು ತಾಲೂಕು ಓಡಾಡುತ್ತ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ನೆರವಿನಿಂದ ಮಂಗನ ಕಾಯಿಲೆ ತಡೆಯುವುದು ಅಸಾಧ್ಯ.

ಎಚ್ಚರ ವಹಿಸದ ಸಾರ್ವಜನಿಕರು ;  ಮಳೆಗಾಲದಲ್ಲಿ ನಿರಪಾಯಕಾರಿಯಾದ ಉಣ್ಣಿಗಳನ್ನು ದನಗಳ ಮೈಯಿಂದ ನಿವಾರಿಸಲು ಸರ್ಕಾರ ಔಷಧ ಕೊಟ್ಟರೂ ಅದನ್ನು ಸಮರ್ಪಕವಾಗಿ ಜನ ಬಳಸಿಕೊಳ್ಳಲಿಲ್ಲ. ಮಂಗನ ಕಾಯಿಲೆ ಸಂಭವನೀಯ ಪ್ರದೇಶದಲ್ಲಿ ನೀಡಲೆಂದು 1.5 ಲಕ್ಷ ಡೋಸ್‌ ಲಸಿಕೆ ತರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಟ್ಟು ಬಂದು ಚುಚ್ಚುಮದ್ದು ಪಡೆಯಿರಿ ಎಂದರೆ ಬಂದವರು 30,000 ಜನ ಮಾತ್ರ. ನಂತರ ಕಾಡಿನಲ್ಲಿ ಓಡಾಡುವಾಗ ಎಚ್ಚರ ವಹಿಸಿ ಎಂದು ಡಿಎಂಪಿ ತೈಲ ಹಂಚಿದರೂ ಜನ ಹಚ್ಚಿಕೊಳ್ಳಲಿಲ್ಲ. ಈಗ ಉಣ್ಣಿ ನಿವಾರಣೆ ಸಾಧ್ಯವಿಲ್ಲ, ಚುಚ್ಚುಮದ್ದು ಪರಿಣಾಮಕಾರಿಯಲ್ಲ.

Advertisement

 

-ಜೀಯು ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next