ರಾಯಚೂರು: ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮಾಡುವ ಖರ್ಚು ವೆಚ್ಚಗಳ ಮೇಲೆ ವಿಶೇಷ ನಿಗಾ ವಹಿಸಲಿದ್ದು, ಮಾದರಿ ನೀತಿ ಸಂಹಿತೆ ಮೀರದಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶ ಕುಮಾರ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನೀತಿ ಸಂಹಿತೆ ಪಾಲಿಸುವ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಪಕ್ಷದ ಅಭ್ಯರ್ಥಿಗಳು ಚುನಾವಣೆ ಖರ್ಚು ವೆಚ್ಚದ ಬಗ್ಗೆ ಸಕಾಲಕ್ಕೆ ಮಾಹಿತಿ ನೀಡಬೇಕು. ಅಭ್ಯರ್ಥಿ ಮತ್ತು ಪಕ್ಷದಿಂದ ಚುನಾವಣೆಗೆ ಖರ್ಚು ಮಾಡುತ್ತಿರುವ ವೆಚ್ಚ ನಿರ್ವಹಣೆ ಮಾಡಲು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು. ಪಕ್ಷ ಮತ್ತು ಅಭ್ಯರ್ಥಿಗಳ ಖರ್ಚು ವೆಚ್ಚದ ಬಗ್ಗೆ ಮೇಲ್ವಿಚಾರಣೆ
ಮಾಡಲು ಜಿಪಂ ಮುಖ್ಯ ಲೆಕ್ಕಾಧಿಕಾರಿಯನ್ನು ನೇಮಿಸಲಾಗುವುದು.
ಬಹಿರಂಗ ಸಭೆ, ರ್ಯಾಲಿಗಳಲ್ಲಿ ಬಳಸುವ ಮೈಕ್, ಬ್ಯಾಂಡ್ ಬಾಜಾ ಸೇರಿದಂತೆ ಪ್ರತಿಯೊಂದಕ್ಕೂ ಶುಲ್ಕ ನಿಗದಿಪಡಿಸಲಾಗಿದೆ. ಚುನಾವಣೆಯನ್ನು ಪಾರದರ್ಶಕವಾಗಿ ನಿರ್ವಹಿಸಲು ರಾಜಕೀಯ ಪಕ್ಷಗಳ ಮುಖಂಡರು ಸಹಕಾರ ನೀಡಬೇಕು. ರಾಜಕೀಯ ಪಕ್ಷಗಳು ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯಾವುದೇ ಕಾರಣಕ್ಕೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಚಾರ ಮಾಡುವಂತಿಲ್ಲ. ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವಂಥ ಭಾಷಣ, ಹೇಳಿಕೆ ನೀಡುವಂತಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಅಡಿಗಲ್ಲು ಮಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಮತ್ತು ಪ್ರಕೃತಿ ವಿಕೋಪಕ್ಕೆ ಸಂಬಂಧಿ ಸಿದಂತೆ ಸಭೆಗಳನ್ನು ಮಾತ್ರ ನಡೆಸಲು ಅವಕಾಶ ಇರುತ್ತದೆ ಎಂದರು.
ಲಿಂಗಸೂಗೂರು, ಸಿಂಧನೂರು ಮತ್ತು ಮಸ್ಕಿ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿ ಯಾವುದೇ ಸಭೆ, ಸಮಾರಂಭ, ಬಹಿರಂಗ ಪ್ರಚಾರ, ರ್ಯಾಲಿ, ರೋಡ್ ಶೋ ನಿರ್ವಹಿಸಬೇಕಾದರೆ ಲಿಂಗಸೂಗೂರು ಸಹಾಯಕ ಆಯುಕ್ತರಿಂದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ.
ಚುನಾವಣೆಯಲ್ಲಿ ವಾಹನಗಳ ಬಳಕೆಗೂ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂದರು. ಪಕ್ಷದ ಕಚೇರಿಯಲ್ಲಿ ಕೇವಲ ಕಾರ್ಯಕರ್ತರು ಮಾತ್ರ ಸಭೆ ನಡೆಸಬೇಕು. ಮತದಾರರು ಸೆಳೆಯಲು ಯಾವುದೇ ಆಸೆ ಆಮಿಷವೊಡ್ಡಿದರೆ ಪ್ರಕರಣ ದಾಖಲಿಸಬೇಕಾಗುತ್ತದೆ. ಎಡಿಸಿ ಕೆ.ಆರ್.ದುರಗೇಶ್, ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.