ಬೆಂಗಳೂರು: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಹಣ ಮತ್ತು ಹೆಂಡದ ಹೊಳೆ ಹರಿದಿದ್ದು, ವಿವಿಧ ನೀತಿ ಸಂಹಿತೆ ಜಾರಿ ತಂಡಗಳು ಈ ಕ್ಷೇತ್ರಗಳಲ್ಲಿ 39.48 ಕೋಟಿ ರೂ. ಹಣವನ್ನು ಜಪ್ತಿ ಮಾಡಿಕೊಂಡಿರುವುದು ಮತದಾರರಿಗೆ ಆಮಿಷ ಒಡ್ಡಲು ರಾಜಕೀಯ ಪಕ್ಷಗಳು ನಡೆಸಿದ ಪ್ರಯತ್ನಗಳಿಗೆ ಸಾಕ್ಷಿ.
ವಿದ್ಯಾವಂತರೇ ಹೆಚ್ಚಿರುವ ಕ್ಷೇತ್ರ ಎಂದು ಹೆಸರು ಪಡೆದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳ ಭರಾಟೆ ನಡೆದಿದೆ. 14 ಕ್ಷೇತ್ರಗಳ ಪೈಕಿ ಈ ಕ್ಷೇತ್ರದಲ್ಲಿ ಅತಿ ಹೆಚ್ಚು 5.07 ಕೋಟಿ ನಗದು ಸೇರಿ ಒಟ್ಟಾರೆ 9.09 ಕೋಟಿ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಉಳಿದಂತೆ ಚಿಕ್ಕಬಳ್ಳಾಪುರದಲ್ಲಿ 2.43 ಕೋಟಿ, ಮೈಸೂರಿನಲ್ಲಿ 1.61 ಕೋಟಿ, ಹಾಸನ ಮತ್ತು ಚಿತ್ರದುರ್ಗದಲ್ಲಿ ತಲಾ 1.35 ಕೋಟಿ ಅತಿ ಹೆಚ್ಚು ನಗದ ವಶಪಡಿಸಿಕೊಂಡಿದ್ದರೆ, ಕೋಲಾರದಲ್ಲಿ ಅತಿ ಕಡಿಮೆ 9.17 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಈ ಎಲ್ಲ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಮಾ.10ರಿಂದ ಏ.16ರವರೆಗೆ ಫ್ಲೈಯಿಂಗ್ ಸ್ಕ್ವಾಡ್, ಸ್ಟ್ರಾಟಿಕ್ ಸರ್ವೆಲೆನ್ಸ್ ಟೀಮ್, ಅಬಕಾರಿ ತಂಡಗಳು, ಆದಾಯ ತೆರಿಗೆ ಇಲಾಖೆಗಳು ಸೇರಿ ಒಟ್ಟು 15.17 ಕೋಟಿ ನಗದು, 21.20 ಕೋಟಿ ಮೊತ್ತದ ಮದ್ಯ, 3.06 ಲಕ್ಷ ಮೊತ್ತದ ಮಾದಕ ಪದಾರ್ಥ, 2.55 ಕೋಟಿ ಮೌಲ್ಯದ ಚಿನ್ನಾಭರಣ, 2.55 ಲಕ್ಷ, 52.88 ಲಕ್ಷ ಮೊತ್ತದ ಗೃಹಬಳಕೆ ವಸ್ತುಗಳು ಸೇರಿದಂತೆ ಒಟ್ಟಾರೆ 39.49 ಕೋಟಿ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
898 ಪ್ರಕರಣಗಳು: ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ವಿವಿಧ 898 ಚುನಾವಣಾ ನೀತಿ ಸಂಹಿತೆ ಪ್ರಕರಣಗಳು ದಾಖಲಾಗಿದೆ. ಅಲ್ಲದೇ ಅಕ್ರಮ ಮದ್ಯ ಮಾರಾಟ, ಪರವಾನಗಿ ಉಲ್ಲಂಘನೆ ಸೇರಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು 9,653 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಎಲ್ಲ ಪ್ರಕರಣಗಳು ತನಿಖಾ ಹಂತದಲ್ಲಿವೆ.