Advertisement
ಅಂಕಿ ಅಂಶಗಳ ಪ್ರಕಾರ, ಸಾಲ ಮನ್ನಾ ನಿರ್ಧಾರದಿಂದಾಗಿ ರಾಜ್ಯ ಬೊಕ್ಕಸದ ಮೇಲೆ 8165 ಕೋಟಿ ರೂ. ಹೊರೆ ಬೀಳುತ್ತದೆ. ಇದನ್ನು ಹೊಂದಿಸಲು ಕಾರ್ಮಿಕ ಇಲಾಖೆಗೆ ಸೇರಿದ 5770 ಕೋಟಿ ರೂ.ಸೆಸ್ ಹಣವನ್ನು ಬಳಸಿಕೊಳ್ಳಲು ಮುಂದಾಗಿದೆ. ಇದರ ಜತೆಗೆ, ಸಹಕಾರ ಬ್ಯಾಂಕ್‌ಗಳಿಗೆ ಟಾನಿಕ್ ನೀಡುವ ಸಲುವಾಗಿ ಅಪೆಕ್ಸ್ ಬ್ಯಾಂಕುಗಳ ಮೂಲಕವೇ ವಹಿವಾಟು ನಡೆಸಲು ಒಪ್ಪಿಗೆ ಕೊಡಲು ಚಿಂತನೆ ನಡೆಸಿದೆ. ಅಂದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಾರ್ಮಿಕ ಇಲಾಖೆ ಇಡುತ್ತಿರುವ ಠೇವಣಿಯನ್ನು ಮುಂದೆ ಅಪೆಕ್ಸ್ ಬ್ಯಾಂಕುಗಳಲ್ಲೇ ಇಡಲು ಅನುವು ಮಾಡಿಕೊಡುವುದಾಗಿದೆ.
ರಾಜ್ಯ ಸರ್ಕಾರ ಪ್ರತಿ ವರ್ಷ ಕಟ್ಟಡ ನಿರ್ಮಾಣ ಮಾಡುವವರಿಂದ ಶೇ.1ರಷ್ಟು ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹಿಸುತ್ತದೆ. ಆ ರೀತಿ ಸಂಗ್ರಹಿಸಿರುವ ಹಣ ಸುಮಾರು 5,770 ಕೋಟಿ ರೂ. ಕಾರ್ಮಿಕ ಇಲಾಖೆಯಲ್ಲಿ ಸಂಗ್ರಹವಾಗಿದೆ. ಈ ಹಣವನ್ನು ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದೆ. ಅದರಿಂದ ಪ್ರತಿ ವರ್ಷ ಬರುವ ಬಡ್ಡಿ ಹಣ ಮತ್ತು ಹೊಸದಾಗಿ ಸಂಗ್ರಹವಾದ ಹಣದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆ ಬಳಕೆ ಮಾಡುತ್ತದೆ. ಇದರಿಂದ ಪ್ರತಿ ವರ್ಷ ಕಾರ್ಮಿಕರ ಕಲ್ಯಾಣ ನಿಧಿಗೆ ಸುಮಾರು 700 ರಿಂದ 725 ಕೋಟಿ ರೂ. ಸಂಗ್ರಹವಾಗುತ್ತದೆ.
Related Articles
Advertisement
ಅಪೆಕ್ಸ್ ಬ್ಯಾಂಕ್‌ನಲ್ಲಿ ಇಡುವ ಈ ಠೇವಣಿ ಹಣವನ್ನು ಸಾಲ ಮನ್ನಾದಿಂದ ಸಹಕಾರ ಬ್ಯಾಂಕ್‌ಗಳಿಗೆ ಆಗಿರುವ ಹೊರೆ ತಗ್ಗಿಸಲು ಬಳಸಿಕೊಳ್ಳುವುದು ತಂತ್ರಗಾರಿಕೆಯ ಮುಂದಿನ ಯೋಜನೆಯಾಗಿದೆ. ಇದರಿಂದ ಸರ್ಕಾರಕ್ಕೂ ಸಾಲ ಮನ್ನಾದ ಭಾರ ತಕ್ಷಣಕ್ಕೆ ಉಂಟಾಗುವುದಿಲ್ಲ. ಸಹಕಾರ ಬ್ಯಾಂಕ್‌ಗಳಿಗೂ ತೊಂದರೆಯಾಗುವುದಿಲ್ಲ ಎನ್ನುವುದು ಲೆಕ್ಕಾಚಾರವಾಗಿದೆ.
ಕಾರ್ಮಿಕ ಕಾನೂನು ತಿದ್ದುಪಡಿ?: ಕಾರ್ಮಿಕ ಇಲಾಖೆ ಕಾನೂನಿನ ಪ್ರಕಾರ ಇಲಾಖೆ ಸಂಗ್ರಹಿಸಿರುವ ಸೆಸ್ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮಾತ್ರ ಠೇವಣಿ ಇಡಬೇಕೆಂದು ಸೆಕ್ಷನ್ 36 ರಲ್ಲಿ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಈಗಿರುವ ಕಾನೂನಿನ ಪ್ರಕಾರ ಸೆಸ್ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮಾತ್ರ ಠೇವಣಿ ಇಡಲು ಅವಕಾಶವಿದ್ದು, ಅದಕ್ಕೆ ತಿದ್ದುಪಡಿ ತಂದು ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಅವಕಾಶ ದೊರೆಯುವಂತೆ ಮಾರ್ಪಾಡು ಮಾಡಿ ಹಣ ಬಳಕೆಗೆ ಹಾದಿ ಸುಗಮ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ.
ಸಾಲ ಮನ್ನಾ ಮಾಡಿರುವ 8,165 ಕೋಟಿ ರೂ. ಹೊಂದಾಣಿಕೆ ಮಾಡಲು ಹಣ ಹೊಂದಿಸಬೇಕಿದೆ. ಅದಕ್ಕೆ ಕಾರ್ಮಿಕ ಇಲಾಖೆ ಸಂಗ್ರಹಿಸುವ ಸೆಸ್ ಹಣ ಅಪೆಕ್ಸ್ ಬ್ಯಾಂಕ್‌ನಲ್ಲಿ ಠೇವಣಿ ಇಡಲು ಅವಕಾಶ ಮಾಡಿಕೊಟ್ಟರೆ, ಆ ಹಣವನ್ನು ಹಂತ ಹಂತವಾಗಿ ಸಾಲ ಮನ್ನಾ ತೀರಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಿ ಬಳಸಿಕೊಳ್ಳಲು ಅನುಕೂಲವಾಗಲಿದೆ.– ಕೆ.ಎನ್.ರಾಜಣ್ಣ, ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ – ಶಂಕರ ಪಾಗೋಜಿ