Advertisement

ಪೌರಕಾರ್ಮಿಕರ ಖಾತೆಗೆ ಹಣ ಜಮೆ ಮಾಡಿ

08:19 PM Dec 10, 2019 | Team Udayavani |

ತುಮಕೂರು: ಸಫಾಯಿ ಕರ್ಮಚಾರಿಗಳ ಬಾಕಿಯಿರುವ ಪಿಎಫ್, ಇಎಸ್‌ಐ ಹಣ ಒಂದು ತಿಂಗಳೊಳಗಾಗಿ ಪೌರಕಾರ್ಮಿಕರ ಖಾತೆಗೆ ನೇರ ಜಮೆ ಮಾಡುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್‌ ಹಿರೆಮಣಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಫಾಯಿ ಕರ್ಮಚಾರಿಗಳಿಗೆ ಮನೆಗಳ ಸಮಸ್ಯೆಯಿದ್ದು, ಈಗಾಗಲೇ ನಿವೇಶನ ವಿತರಿಸಲು ಅಗತ್ಯ ಜಮೀನು ಗುರುತಿಸಲಾಗಿದೆ. ಮನೆ ನಿರ್ಮಿಸಿ ವಿತರಿಸಲಾಗುವುದು, ಸಫಾಯಿ ಕರ್ಮಚಾರಿಗಳಿಗೆ ಉತ್ತಮ ಜೀವನ ಭದ್ರತೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಇನ್ನಿತರೆ ಸೌಲಭ್ಯ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮೂಲಸೌಲಭ್ಯ ಒದಗಿಸಿ: ಸಫಾಯಿ ಕರ್ಮಚಾರಿಗಳು ನಿರ್ವಹಿಸುವ ಕೆಲಸಕ್ಕೆ ಬೇಕಾಗುವ ಸುರಕ್ಷತಾ ಕಿಟ್‌, ಸಮವಸ್ತ್ರ, ಪಾದರಕ್ಷೆಗಳು ಸೇರಿ ವಿವಿಧ ರೀತಿಯ ಮೂಲಸೌಲಭ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ಮಚಾರಿಗಳಿಗೆ ತಪ್ಪದೇ ಆರೋಗ್ಯ ತಪಾಸಣೆ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವವರಿಗೆ ಸರ್ಕಾರದ ಆದೇಶದಂತೆ ಕನಿಷ್ಠ ವೇತನ ನೀಡಬೇಕು ಎಂದು ಸೂಚಿಸಿದರು.

ಅನ್ಯಾಯವಾಗಬಾರದು: ಪೌರಕಾರ್ಮಿಕರು ಗುತ್ತಿಗೆ ಆಧಾರಡಿ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಎಂಬ ದಾಖಲೆ ಪರಿಶೀಲಿಸಬೇಕು. ಗುತ್ತಿಗೆದಾರರು ಪೌರಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ದಿನಗೂಲಿ ಆಧಾರದ ಮೇಲೆ ಹಲವಾರು ವರ್ಷಗಳಿಂದ ಸ್ವತ್ಛತಾಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಪಂಚಾಯಿತಿ ಸ್ವತ್ಛಗಾರರ ನೇಮಕಾತಿಗಳಲ್ಲಿ ಶೇ. 100 ಆದ್ಯತೆ ನೀಡಬೇಕು.

ಅವರಿಗೆ ಶೈಕ್ಷಣಿಕ ಮಾನದಂಡ ನಿಗದಿಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗಬಾರದು ಎಂದು ತಿಳಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್‌, 15 ದಿನಗಳಲ್ಲಿ ಪಿಡಿಒಗಳ ಸಭೆ ಕರೆದು ಮಾಹಿತಿ ಪಡೆದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಮ್ಯಾನ್ಯುಯಲ್‌ ಸ್ಕಾವೆಂಜರ್ ಕುರಿತಂತೆ ವ್ಯಾಪಕ ಅರಿವು ಮೂಡಿಸಬೇಕು. ಅಲ್ಲದೆ ಸರ್ಕಾರದಿಂದ ಅವರ ಅಭಿವೃದ್ಧಿಗಿರುವ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸೌಲಭ್ಯ ಪಡೆಯುವಂತೆ ಮಾಡಬೇಕು ಎಂದು ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೋ.ನ ವಂಶಿಕೃಷ್ಣ ಸೇರಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next