ಹುಬ್ಬಳ್ಳಿ/ಬೆಂಗಳೂರು: ವಾಹನ ಚಾಲಕರಿಂದ ಭಾರೀ ಪ್ರಮಾಣದ “ಹಣ ವಸೂಲಿ’ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧ ಚೆಕ್‌ಪೋಸ್ಟ್‌ಗಳ ಮೇಲೆ ಮಧ್ಯರಾತ್ರಿ ದಾಳಿ ಮಾಡಿ ದಾಖಲೆ ಹಾಗೂ ವಾಹನಗಳಿಂದ ಸಂಗ್ರಹವಾಗಿರುವ ನಗದು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಆರ್‌ಟಿಒ ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ ವಾಹನಗಳ ಟ್ಯಾಕ್ಸ್ ಸಂಗ್ರಹ ಹಣದಲ್ಲಿ ವ್ಯತ್ಯಾಸ ಕಂಡು ಬಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್, ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಬಳಿಯ ಆರ್‌ಟಿಒ ಚೆಕ್‌ಪೋಸ್ಟ್, ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಧೂಳಖೇಡ್ ಬಳಿಯ ಆರ್‌ಟಿಒ ಚೆಕ್‌ಪೋಸ್ಟ್, ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಬಳಿಯ ಆರ್‌ಟಿಒ ಚೆಕ್‌ಪೋಸ್ಟ್ ಮೇಲೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಬಳಿಯ ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ರಹಿತ 41,700 ರೂ., ಧೂಳಖೇಡ್ ಚೆಕ್‌ಪೋಸ್ಟ್‌ನಲ್ಲಿ 2 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಆರ್‌ಟಿಒ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿ ಕಡತಗಳನ್ನು ಪರಿಶೀಲಿಸಿದರು.
ಪಟ್ಟಣದ ಐಬಿ ಸರ್ಕಲ್ ಸಮೀಪವಿರುವ ಆರ್‌ಟಿಒ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ವೇಳೆ ಆರ್‌ಟಿಒ ಅಧಿಕಾರಿ ಸುಭಾಷ್ ಕರ್ತವ್ಯದಲ್ಲಿದ್ದರು. ಅಧಿಕಾರಿಗಳು ಕಚೇರಿಯಲ್ಲಿರುವ ಕಡತಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭ ವಾಹನಗಳ ಟ್ಯಾಕ್ಸ್ ಸಂಗ್ರಹ ಹಣದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ರಶೀದಿ ಇಲ್ಲದೆ ಪಡೆದಿದ್ದ ಸುಮಾರು 4 ಸಾವಿರ ರೂ.ಹಣ ದೊರಕಿದೆ. ಈ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಮೇಲೆ ಕ್ರಮ ವಹಿಸಲು ಲೋಕಾಯುಕ್ತ ಎಸ್ಪಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸಮೀಪ ಇರುವ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ಜಿಲ್ಲಾ ಲೋಕಾಯುಕ್ತ ಎಸ್ಪಿ ಆ್ಯಂಟನಿ ನೇತೃತ್ವದಲ್ಲಿ ದಾಳಿ ನಡೆಸಿ, ತಪಾಸಣೆ ನಡೆಸಲಾಯಿತು. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಧನಂಜಯ್ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 20 ಸಾವಿರಕ್ಕೂ ಅಧಿಕ ಅಕ್ರಮ ಹಣವನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.
ಅಧಿಕಾರಿಗಳಿಗೆ ಹಣ ಕೊಡಲು ಸಾಲುಗಟ್ಟಿದ್ದ ಚಾಲಕರು?
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸಮೀಪ ಇರುವ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ವಾಹನ ಚಾಲಕರು ಅಧಿಕಾರಿಗಳಿಗೆ ಹಣ ನೀಡಲು ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಇದನ್ನು ಲೋಕಾಯುಕ್ತ ಪೊಲೀಸರು ವಿಡಿಯೋ ಮಾಡಿಕೊಂಡಿದ್ದಾರೆ. “ಹಣವನ್ನು ಯಾರಿಗೆ, ಏಕೆ ಕೊಡುತ್ತಿದ್ದೀರಿ’ ಎಂದು ವಾಹನ ಚಾಲಕರನ್ನು ಪ್ರಶ್ನಿಸಿದರೂ ಅವರು ಬಾಯಿ ಬಿಟ್ಟಿಲ್ಲ ಎನ್ನಲಾಗಿದೆ.
ಎಲ್ಲೆಲ್ಲಿ, ಏಕೆ ದಾಳಿ?
* ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಆರ್‌ಟಿಒ ಚೆಕ್‌ಪೋಸ್ಟ್ ಗಳ ಮೇಲೆ ದಾಳಿ
* ವಾಹನ ಚಾಲಕರಿಂದ ಭಾರೀ ಪ್ರಮಾಣದ “ಹಣ ವಸೂಲಿ’ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ