ಕಾರವಾರ/ಶಿರಸಿ: ಜಿಲ್ಲೆಯ ಬನವಾಸಿಯಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ ಕದಂಬೋತ್ಸವಕ್ಕೆ ಜಿಲ್ಲೆಯ ದೇವಾಲಯಗಳಿಂದ ದೇಣಿಗೆ ಸಂಗ್ರಹಿಸಿ, ಆ ಹಣವನ್ನು ಉತ್ಸವಕ್ಕೆ ಬಳಸಲು ಮುಂದಾಗಿರುವ ಮುಜರಾಯಿ ಇಲಾಖೆಯ ಅಧಿಕಾರಿಯ ಕ್ರಮ ವಿವಾದ ಹುಟ್ಟುಹಾಕಿದೆ.
ಕದಂಬೋತ್ಸವ ಆರಂಭವಾಗಿ 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿಹಬ್ಬ ಆಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ನಡೆಸಲು ಸರ್ಕಾರ ನಿರ್ಧರಿಸಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್, ಖ್ಯಾತ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅರ್ಜುನ ಜನ್ಯ ಹಾಗೂ ಕೊಳಲು ವಾದಕ ಪ್ರವೀಣ ಗೋಡ್ಕಿಂಡಿ ಸೇರಿದಂತೆ ಅನೇಕ ಕಲಾವಿದರು ಇಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಲಕ್ಷಾಂತರ ರೂ. ವ್ಯಯಿಸಲಾಗುತ್ತಿದೆ. ಪಂಪ ಪ್ರಶಸ್ತಿ ಪ್ರದಾನ ಸಮಾರಂಭ ಸಹ ಕದಂಬೋತ್ಸವ ವೇದಿಕೆಯಲ್ಲಿ ನಡೆಯಲಿದೆ.
ಆದರೆ ಕದಂಬೋತ್ಸವಕ್ಕೆ ಉದ್ಯಮಿಗಳು, ಕಾರ್ಪೊರೇಟ್ ಕಂಪನಿಗಳಿಂದ, ಜಿಲ್ಲೆಯ ಕೈಗಾರಿಕೆಗಳಿಂದ, ಉಸುಕು, ಕಲ್ಲುಗಣಿ ಉದ್ಯಮಿಗಳಿಂದ ಮೊದಲು ಹಣ ಸಂಗ್ರಹಿಸಲಾಗುತ್ತಿತ್ತು. ಇದು ಕೆಲ ಅಕ್ರಮ ಚಟುವಟಿಕೆಗಳಿಗೆ ದಾರಿಯಾಗುತ್ತಿತ್ತು. ಈಗಿನ ಸರ್ಕಾರ ಇಂಥ ಅಕ್ರಮಗಳಿಗೆ ಅವಕಾಶ ನೀಡುತ್ತಿಲ್ಲ. ಹಾಗಾಗಿ ಹಣದ ಸಂಗ್ರಹ ಸಹ ಕಷ್ಟವಾಗಿದೆ. ಜೊತೆಗೆ ಆರ್ಥಿಕ ಕುಸಿತ ಕಾರಣವಾಗಿ ಉದ್ಯಮಿಗಳ ದಾನ ಸಹ ಮೊದಲಿನಂತಿಲ್ಲ. ಹಾಗಾಗಿ ದೇವಾಲಯಗಳ ಹುಂಡಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿರುವುದು ಮುಜರಾಯಿ ಇಲಾಖೆಯ ದೇವಾಲಯ ಸಮಿತಿಗಳಿಗೆ ಬರೆದಿರುವ ಪತ್ರದಿಂದ ಎದ್ದು ಕಾಣುತ್ತಿದೆ.
ದೇವಾಲಯಗಳ ಸಮಿತಿಗೆ ಪತ್ರ: ಉತ್ಸವಕ್ಕೆ ಹಣ ಹೊಂದಿಸುವುದಕ್ಕಾಗಿ ಮುಜರಾಯಿ ಇಲಾಖೆ ಹಾಗೂ ಪ್ರವಾಸೋಧ್ಯಮ ಎರಡೂ ಇಲಾಖೆಗಳ ಪ್ರಭಾರಿ ಅ ಧಿಕಾರಿ ಜಿಲ್ಲೆಯ ಎ ಮತ್ತು ಬಿ ದರ್ಜೆಯ ಮುಜರಾಯಿ ದೇವಾಲಯಗಳಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ದೇವಾಲಯಗಳ ವ್ಯವಸ್ಥಾಪನಾ ಸಮಿತಿಗೆ ಪತ್ರ ಬರೆದು, ಕದಂಬೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಣಯಿಸಲಾಗಿದ್ದು, ಜಿಲ್ಲಾಡಳಿತದ ಎಲ್ಲ ಇಲಾಖೆಗಳ ಸಹಯೋಗದಿಂದ ಉತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎ ಮತ್ತು ಬಿ ವರ್ಗದ ದೇವಸ್ಥಾನಗಳಿಂದ ದೇಣಿಗೆ ಸಂಗ್ರಹಿಸಲು ಉದ್ದೇಶಿಸಿದ್ದು, ದೇವಸ್ಥಾನದ ನಿಧಿಯಿಂದ ಜಿಲ್ಲಾಧಿಕಾರಿ ಉತ್ತರಕನ್ನಡ ಕಾರವಾರ ಇವರ ಹೆಸರಿಗೆ ರೂ. 1 ಲಕ್ಷ ಮೊತ್ತದ ಚೆಕ್‌ನ್ನು ಸಲ್ಲಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಪತ್ರದಲ್ಲಿ ಸೂಚಿಸಿದ್ದಾರೆ.
ಸಹಾಯಕ ಆಯಕ್ತರ ಈ ನಿರ್ಣಯ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಈಗಾಗಲೇ ಶಿರಸಿಯ ಮಾರಿಕಾಂಬಾ ದೇವಾಲಯದ ಆಡಳಿ ಮಂಡಳಿ ನಾಲ್ಕು ಲಕ್ಷ ರೂ. ದೇಣಿಗೆ ನೀಡಿದ್ದು, ಅನೇಕ ದೇವಾಲಯಗಳ ಸಮಿತಿಗಳೂ ಲಕ್ಷ ರೂ. ದೇಣಿಗೆ ನೀಡಿವೆ. ಭಕ್ತರು ದೇವರಿಗೆ ಹಾಕಿದ ಕಾಣಿಕೆ ಆ ದೇವಾಲಯಗಳ ಅಭಿವೃದ್ಧಿಗೆ ಬಳಸಬೇಕು. ಅದು ಬಿಟ್ಟು ಭಕ್ತರ ಹಣ ಉತ್ಸವದಂತ ಮೋಜು ಮಸ್ತಿಗೆ ಬಳಸುವುದೇಷ್ಟು ಸರಿ. ಸರ್ಕಾರದ ಅನುದಾನ ಪಡೆಯುವ ಅನ್ಯ ಧರ್ಮಿಯರ ಧಾರ್ಮಿಕ ಸಂಸ್ಥೆಗಳಿಂದ ಯಾಕೆ ದೇಣಿಗೆ ಸಂಗ್ರಹಿಸಲಾಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.
ಕದಂಬೋತ್ಸಕ್ಕೆ ದೇಣಿಗೆ ನೀಡುವಂತೆ ಮುಜರಾಯಿ ಇಲಾಖೆಗಳ ವ್ಯಾಪ್ತಿಗೆ ಬರುವ “ಎ’ ಮತ್ತು “ಬ’ ವರ್ಗದ ದೇವಾಲಯಗಳ ಆಡಳಿತ ಸಮಿತಿಗೆ ಪತ್ರ ಬರೆದಿರುವುದು ನಿಜ. ಆದರೆ ಕಡ್ಡಾಯವಾಗಿ ನೀಡುವಂತೆ ಯಾರನ್ನೂ ಒತ್ತಾಯಿಸಿಲ್ಲ.
ಪುರುಷೋತ್ತಮ ಸಾತವಲ್ಲಿ,ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು –ಧರ್ಮದಾಯ ದತ್ತಿಗಳ ಇಲಾಖೆ, ಕಾರವಾರ.