ಬೀದರ: ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುವ ಮೇಲ್ಮನೆ ಚುನಾವಣೆ ಎಂದಾಕ್ಷಣ ಪಕ್ಷ ಅಥವಾ ಅಭ್ಯರ್ಥಿಗಳ ಬಲಾಬಲಕ್ಕಿಂತ ಕಾಂಚಾಳದ ಲೆಕ್ಕಾಚಾರದ್ದೇ ಹೆಚ್ಚು ಸದ್ದು.
ಬಹುತೇಕ ಮತಗಳು ಚುನಾವಣೆಗೂ ಮುನ್ನವೇ ಫಿಕ್ಸ್ ಆಗಿರುತ್ತವೆ. ಹೀಗಾಗಿ ಶುಕ್ರವಾರ ನಡೆದ ಮತದಾನಕ್ಕಾಗಿ ಮತಗಟ್ಟೆ ಎದುರು ಸದಸ್ಯ ಮತದಾರರ ಅಬ್ಬರವೇ ಇರಲಿಲ್ಲ. ತಮ್ಮ ನಾಯಕರೊಂದಿಗೆ ಗುಂಪಾಗಿ ಬಂದು ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.
ಹಾಲಿ ಸದಸ್ಯ ವಿಜಯಸಿಂಗ್ ಅವರಿಂದ ತೆರವಾಗಿರುವ ಬೀದರ ವಿಧಾನ ಪರಿಷತ್ ಕ್ಷೇತ್ರಕ್ಕೆ ಶುಕ್ರವಾರ ಮತದಾನ ನಡೆಯಿತು. ಚುನಾವಣೆ ಎಂದರೆ ಮತಗಟ್ಟೆ ಎದುರು ಮತದಾರರು ಜಮಾವಣೆ ಆಗುವುದು ಸಾಮಾನ್ಯ. ಆದರೆ, ಮೇಲ್ಮನೆ ಚುನಾವಣೆಗೆ ಅತಿ ಕಡಿಮೆ ಸಂಖ್ಯೆಯಲ್ಲಿ ಮತದಾನ ಇರುವ ಹಿನ್ನೆಲೆಯಲ್ಲಿ ಮತ ಕೇಂದ್ರದ ಹೊರಗೆ ಮತದಾರರ ಜನಗುಂಗುಳಿಯೇ ಇರಲಿಲ್ಲ. ಆಗೊಬ್ಬ-ಈಗೊಬ್ಬರಂತೆ ಅಥವಾ ಗುಂಪಾಗಿ ಮತದಾನ ಮಾಡಿದ್ದರಿಂದ, ಕೇಂದ್ರಗಳಲ್ಲಿ ಚುನಾವಣೆ ಸಿಬ್ಬಂದಿ, ಪೊಲೀಸ್ ಪೇದೆಗಳು ಮಾತ್ರ ಕಾಣಿಸಿಕೊಂಡರು. ಗ್ರಾಪಂ, ನಗರಸಭೆ, ಪಪಂ ಸೇರಿ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಈ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
ರಾಜಕೀಯ ಪಕ್ಷಗಳು ಚುನಾವಣೆ ಪೂರ್ವದಲ್ಲೇ ಮತದಾರರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಕೆಲವು ಕಡೆಗಳಲ್ಲಿ ಕೊನೆ ಹಂತದವರೆಗೂ ಅಭ್ಯರ್ಥಿಗಳಿಂದ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಅಲ್ಲಲ್ಲಿ ಕಂಡು ಬಂತು. ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಬೆಳಗ್ಗೆ 10ಗಂಟೆ ಸುಮಾರಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದರೆ, ಆ ಹೊತ್ತಿಗೆ ಇನ್ನು ಕೆಲವು ಕಡೆ ಕೇವಲ ಎರಡ್ಮೂರು ಮಾತ್ರ ಮತದಾನವಾಗಿತ್ತು. ಪ್ರತಿಯೊಂದು ಮತವೂ ಸಹ ಅಭ್ಯರ್ಥಿಗಳ ಹಣೆಬರಹ ಬರೆಯುವುದರಿಂದ ಊರು, ನಗರ ಬಿಟ್ಟು ಹೋದವರನ್ನು ಕರೆತಂದು ಮತ ಹಾಕಿಸಿಕೊಳ್ಳುತ್ತಿರುವುದು ಕಂಡುಬಂತು. ಕೈಲಾಗದ ವಯಸ್ಕರು, ಅಂಗವಿಕಲ ಸದಸ್ಯರು ಮತ ಹಾಕಲು ಆಸಕ್ತಿ ತೋರಿಸಿದರು.