ಬೆಂಗಳೂರು : ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್. ರವಿಕಾಂತೇಗೌಡ ಅವರ ಮನೆಯಿಂದ ಹಣ, ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದ ಕೆಲಸದಾಕೆಯನ್ನು ಸಂಜಯ ನಗರ ಪೊಲೀಸರು ವಶಕ್ಕೆ ಪಡೆದು, ಹೇಳಿಕೆ ದಾಖಲಿಸಿಕೊಂಡು ಕಳುಹಿಸಿದ್ದಾರೆ.
ಬಳ್ಳಾರಿ ಮೂಲದ ಅಕ್ಷತಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸುಮಾರು ಆರೇಳು ವರ್ಷಗಳಿಂದ ರವಿಕಾಂತೇಗೌಡರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಆಕೆ, ಎರಡು ದಿನಗಳ ಹಿಂದೆ ಏಕಾಏಕಿ ಮನೆಯಲ್ಲಿದ್ದ ನಾಲ್ಕೈದು ಸಾವಿರ ರೂ. ನಗದು ಮತ್ತು ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಳು.
ಈ ಸಂಬಂಧ ರವಿಕಾಂತೇಗೌಡ ಅವರ ಪರವಾಗಿ ಅವರ ಕೆಲಸಗಾರರೊಬ್ಬರು ಸಂಜಯನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬಳ್ಳಾರಿ ಹೋಗುವ ಮಾರ್ಗ ಮಧ್ಯೆ ಹಾವೇರಿಯಲ್ಲಿ ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ.
ಕಳ್ಳತನ ಮಾಡಿಲ್ಲ :
ಪ್ರಾಥಮಿಕ ವಿಚಾರಣೆಯಲ್ಲಿ ತಾನೂ ಕಳ್ಳತನ ಮಾಡಿಲ್ಲ. ಊರಿಗೆ ಹೋಗಲು ಹಣ ಬೇಕಿತ್ತು. ಜತೆಗೆ ಮಾತನಾಡಲು ಮೊಬೈಲ್ ಬೇಕಿತ್ತು. ಹೀಗಾಗಿ ಯಾರಿಗೂ ಹೇಳದೆ ತೆಗೆದುಕೊಂಡು ಹೋಗಿದ್ದೆ ಎನ್ನುತ್ತಿದ್ದಾಳೆ. ಮತ್ತೂಂದೆಡೆ ಆಕೆ ಕೊಂಡೊಯ್ದಿದ್ದ ಮೊಬೈಲ್ ಅನ್ನು ಬೇರೆಯವರಿಗೆ ಕೊಟ್ಟಿದ್ದಾಳೆ. ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಆ ನಂಬರ್ ಉತ್ತರ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ ಪತ್ತೆ ಕಾರ್ಯ ಮುಂದುವರಿದಿದೆ. ಅದು ಪತ್ತೆಯಾದ ಬಳಿಕ ಪ್ರಕರಣದ ವಿಚಾರಣೆ ತೀವ್ರಗೊಳ್ಳಲಿದೆ. ಸದ್ಯ ಆಕೆಗೆ ಮತ್ತೂಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಕೊಟ್ಟು ಕಳುಹಿಸಲಾಗಿದೆ. ಒಂದು ವೇಳೆ ತನಿಖೆಯಲ್ಲಿ ಕಳ್ಳತನ ಸಾಬೀತಾದರೆ ಬಂಧಿಸಲಾಗುತ್ತದೆ. ಸದ್ಯ ನಾಪತ್ತೆ ಪ್ರಕರಣ ದಾಖಲಾಗಿದ್ದರಿಂದ ಆಕೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಹೇಳಿದರು.