ಉಡುಪಿ: ತಾನು ಕಷ್ಟದಲ್ಲಿದ್ದರೂ ಅದನ್ನು ಲೆಕ್ಕಿಸದೆ ಲಾಕ್‌ಡೌನ್ ಸಮಯದಲ್ಲಿ ಹಮ್ಮಿಕೊಂಡ ಅನ್ನದಾನ ಯೋಜನೆಗೆ ಕೂಲಿ ಮಾಡಿ ಸಂಗ್ರಹಿಸಿದ ಹಣವನ್ನು ನೀಡಿ ಮಹಿಳೆಯೊಬ್ಬರು ಮಾದರಿಯಾಗಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೆಬಲ್ ಟ್ರಸ್ಟ್ ಕಡಿಯಾಳಿ ತೊಂದರೆಗೆ ಸಿಲುಕಿದವರಿಗೆ ಮಾ.25ರಿಂದ ಮಧ್ಯಾಹ್ನದ ಹೊತ್ತು ನಿತ್ಯವೂ ಅನ್ನದಾನದ ಸೇವೆ ನಡೆಸುತ್ತಿದೆ. ಇವರ ಅನ್ನದಾನ ಯೋಜನೆಗೆ ಹಲವು ಮಂದಿ ದಾನಿಗಳು ನೆರವು ನೀಡುತ್ತಿದ್ದಾರೆ.
ಅನ್ನದಾನ ಯೋಜನೆಗೆ ಅಡುಗೆ ಸಿದ್ಧಪಡಿಸುವ ಕಡಿಯಾಳಿ ಶ್ರೀ ಶಾರದಾ ಕಲ್ಯಾಣ ಮಂಟಪಕ್ಕೆ ಶನಿವಾರ ಮಂಜುಳಾ ಕೆರಾಡಿ ಎಂಬ ಬಡ ಮಹಿಳೆಯೊಬ್ಬರು ಆಗಮಿಸಿ 5,000 ರೂ. ನ್ನು ಅನ್ನದಾನ ಸೇವೆಗೆ ದೇಣಿಗೆಯಾಗಿ ನೀಡಿದ್ದಾರೆ. ಅವರು ಜೀವನೋಪಾಯಕ್ಕಾಗಿ ಶ್ರೀಮಂತರ ಮನೆಗಳಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಅದರಿಂದ ಸಂಗ್ರಹವಾಗಿದ್ದ ಹಣ ನೀಡಿ ಮಾದರಿಯಾಗಿದ್ದಾರೆ.
ಪೆನ್ಶನ್ ಹಣ ನೀಡಿದ ನಿವೃತ್ತ ಶಿಕ್ಷಕಿ
ಪೆನ್ಶನ್ ಹಣದಿಂದ ಜೀವನ ನಡೆಸುತ್ತಿರುವಕಡಿಯಾಳಿ ಹಿ. ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ಕಮಲಾಕ್ಷಿ ಟೀಚರ್ ಅವರು ಕೂಡ ಬಡವರ ಅನ್ನದಾನಕ್ಕೆ ತನ್ನ ಒಂದು ತಿಂಗಳ ಪೆನ್ಶನ್ ಹಣ ನೀಡಿದ್ದಾರೆ.