ಚಿಂಚೋಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಗತಿಸುತ್ತಿದ್ದರೂ ಸೇಡಂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಅಭಿವೃದ್ಧಿ ಹೆಸರಲ್ಲಿ ಕೇವಲ ಹಣ ಲೂಟಿಯಾಗುತ್ತಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಆರೋಪಿಸಿದರು.
ತಾಲೂಕಿನ ಕರ್ಚಖೇಡ ಮತ್ತು ಗರಗಪಳ್ಳಿ ಗ್ರಾಪಂನ 29 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಗಣಾಪುರ ಗ್ರಾಮದಲ್ಲಿ ನಡೆದ ಬಹಿರಂಗ ಚುನಾವಣೆ ಪ್ರಚಾರದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸೇಡಂ ಮತಕ್ಷೇತ್ರಕ್ಕೆ ಒಳಪಟ್ಟಿರುವ ತಾಲೂಕಿನ 33 ಹಳ್ಳಿಗಳಲ್ಲಿ ಕುಡಿಯುವ ನೀರು, ಸಮುದಾಯ ಭವನ, ಸೇಡಂ-ಚಿಂಚೋಳಿ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ, ಗರಗಪಳ್ಳಿ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ನದಿಗೆ ಬ್ಯಾರೇಜ್ ನಿರ್ಮಿಸಿ ಪರದಾರ ಮೋತಕಪಳ್ಳಿ, ಗಂಗನಪಳ್ಳಿ, ಭಕ್ತಂಪಳ್ಳಿ, ಗರಗಪಳ್ಳಿ ಗ್ರಾಮಗಳ ರೈತರಿಗೆ ನೀರಾವರಿ ಅನುಕೂಲ ಮಾಡಿಕೊಡಲಾಗಿದೆ. ಬುರುಗಪಳ್ಳಿ-ಇರಗಪಳ್ಳಿ ಗ್ರಾಮಗಳ ಮಧ್ಯೆ 4ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಿ ರೈತರಿಗೆ ನೀರಾವರಿ ಸೌಕರ್ಯ ಒದಗಿಸಲಾಗಿದೆ. ಗರಗಪಳ್ಳಿ ಗ್ರಾಪಂ ನೂತನ ಕಟ್ಟಡ ನಿರ್ಮಿಸಲು ನನ್ನ ಅವಧಿಯಲ್ಲಿ 50ಲಕ್ಷ ರೂ. ಮಂಜೂರಿ ಮಾಡಲಾಗಿದೆ ಎಂದು ಹೇಳಿದರು.
ಸೇಡಂ ಮತಕ್ಷೇತ್ರದ ಶಾಸಕರಾಗಿ ಮತ್ತು ಸಚಿವರಾಗಿ 15 ವರ್ಷ ಅಧಿಕಾರ ನಡೆಸಿದ್ದೇನೆ. ಯಾವುದೇ ಅಧಿಕಾರಿಗಳ ಹತ್ತಿರ ಒಂದು ಪೈಸೆ ಲಂಚ ಪಡೆದಿಲ್ಲ. ಬಿಜೆಪಿಯವರು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.
ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.
ಮುಖಂಡರಾದ ಸುರೇಶ ಪಾಟೀಲ ರಾಯಕೋಡ, ಲಿಂಗಶೆಟ್ಟಿ ರುದನೂರ, ತಾಹೇರ ಪಟೇಲ, ಬಸವರಾಜ ಕೆರೋಳಿ, ಸಂತೋಷ ಗುತ್ತೇದಾರ, ವಿಲಾಸ ಗೌತಮ್ ನಿಡಗುಂದಾ, ಮೇಘರಾಜ ರಾಠೊಡ, ಬಸವರಾಜ ಸಜ್ಜನಶೆಟ್ಟಿ, ಬಸವರಾಜ ಬಿರಾದಾರ, ಭೀಮರೆಡ್ಡಿ ಪಾಟೀಲ, ಮಲ್ಲಿಕಾರ್ಜುನ ಸಕ್ರಿ, ರಮೇಶ ಬಾಬು, ಸುರೇಶ ಬಾಬು, ಮಹೇಶ ಪಾಟೀಲ, ಖಾಜಾಬೇಗಂ, ನರಸಮ್ಮ, ಸವಿತಾ ಇನ್ನಿತರರಿದ್ದರು. ವಿನೋದ ಗಣಾಪುರ ಸ್ವಾಗತಿಸಿದರು.