Advertisement

ಕೆರೆ ಡಿನೋಟಿಫಿಕೇಶನ್‌ ಮೂಲಕ ಹಣ ಮಾಡುವ ಹುನ್ನಾರ

02:28 PM Jul 27, 2017 | |

ಸಾಗರ: ಕೆಲ ದಿನಗಳ ತಮ್ಮ ಹೇಳಿಕೆಯಿಂದ ರಾಜ್ಯದ ಕಾಡಿಗೆ ಕಂಟಕ ತಂದಿಟ್ಟ ಸಚಿವ ಕಾಗೋಡು ತಿಮ್ಮಪ್ಪ ಅವರು ಈಗ ಕೆರೆಗಳತ್ತ ಕಣ್ಣು ಹಾಕಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿ ಹಣ ಮಾಡುವ ವ್ಯವಸ್ಥಿತ ಸಂಚಿನ ಭಾಗವಾಗಿಯೇ ಅವರು ಮೂಲ ಸ್ವರೂಪ ಕಳೆದುಕೊಂಡ ನೆಪದಲ್ಲಿ ಕೆರೆಗಳ ಡಿ-ನೋಟಿಫಿಕೇಶನ್‌ ಗೆ ಮುಂದಾಗಿದ್ದಾರೆ. ಇದು ಬಿಲ್ಡರ್‌ಗಳ ಮೂಲಕ ಹಣ ಸಂಪಾದಿಸಲು ಮಾಡಿರುವ ತಂತ್ರಗಾರಿಕೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಳಾದ ಕೆರೆಗಳ ಹೂಳು ತೆಗೆದು ಜಲ ಮರುಪೂರಣ ಮಾಡುವ ಬರದಿಂದ ಕಂಗೆಟ್ಟ ರಾಜ್ಯಕ್ಕೆ ಕಾಯಕಲ್ಪ ಮಾಡಬೇಕಿತ್ತು. ಆದರೆ ಇಳಿ ವಯಸ್ಸಿನಲ್ಲಿ ಕಾಗೋಡು ಅವರಿಗೆ ಹಣ ಮಾಡುವ ಲೆಕ್ಕಾಚಾರ ಬಂದಿದೆ. ಬೆಂಗಳೂರಿನ ರಾಜಕಾಲುವೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲು ಸಾಧ್ಯವಾಗದೆ ಮೌನವಾಗಿ ಕುಳಿತಿದ್ದಾರೆ. ರಾಜಾ ಕಾಲುವೆಯಲ್ಲಿ ಮಂತ್ರಿ ಮಹಲ್‌, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಕಾಂಗ್ರೆಸ್‌ ಮುಖಂಡರ ಆಸ್ತಿ ಇದೆ ಎಂಬುದೇ ಕಾರಣ ಎಂದು ಆಪಾದಿಸಿದರು.

ಕಾಗೋಡು ತಮ್ಮ ಪುತ್ರಿಯನ್ನು ರಾಜಕೀಯಕ್ಕೆ ತಂದಿರುವುದರ ಹಿಂದೆ ಅವರ ನಂತರ ಟಿಕೆಟ್‌ ಯಾರಿಗೆ ಎಂಬುದು ಸ್ಪಷ್ಟವಾಗಿದೆ. ಈ ಬೆಳವಣಿಗೆಗಳನ್ನು ನೋಡಿ ಕಾಂಗ್ರೆಸ್‌ನ ಎರಡನೇ ಹಂತದ ನಾಯಕರು ನೇಣು ಹಾಕಿಕೊಳ್ಳುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಸರ್ವಋತು ಜಲಪಾತದ ಹೆಸರಿನಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತದ ಪರಿಸರದ ಉದ್ದೇಶಿತ ಯೋಜನೆ ಜಾರಿಗೆ ಅವಕಾಶ ಕೊಡುವುದಿಲ್ಲ. ಈ ಭಾಗದಲ್ಲಿ ಹಕ್ಕುಪತ್ರ ಇಲ್ಲದೆ ಸಂಕಷ್ಟ ಸ್ಥಿತಿಯಲ್ಲಿರುವ 425ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು ನೀಡಬೇಕಾದ ಕಾಗೋಡು ಬಿ.ಆರ್‌. ಶೆಟ್ಟಿಯಂತಹ ಬಂಡವಾಳಶಾಹಿಗೆ ಸಾವಿರಾರು ಎಕರೆ ಜಾಗವನ್ನು ಕೊಡಲು ಹೊರಟಿರುವ ಕ್ರಮ ಖಂಡನೀಯ ಎಂದರು.

ನಾಲಿಗೆ ಹರಿತವಿದೆ ಎಂದು ಶಾಸಕ ಮಧು ಬಂಗಾರಪ್ಪ ಬಿ.ಎಸ್‌. ಯಡಿಯೂರಪ್ಪ ಅವರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅವರ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕುರಿತು ಕೂಡ ನಾವು ಸಾವಿರ ಮಾತನಾಡಬಹುದು. ಹಾಗೆಲ್ಲ ಮಾತನಾಡುವುದು ಸಭ್ಯತೆಯಲ್ಲ. ಯುವ ರಾಜಕಾರಣಿ ತಮ್ಮ ಜವಾಬ್ದಾರಿಯನ್ನು ಅರಿತು  ಗೌರವಯುತವಾಗಿ ಮಾತನಾಡಬೇಕು ಎಂದರು. 

ತಾಲೂಕಿನ ಅರಣ್ಯ ಇಲಾಖೆಯಲ್ಲಿ ನೆಡುತೋಪು ವಿಷಯದಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದಕ್ಕೆ ಕಾರಣವಾಗಿರುವ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ ಗಂಗೊಳ್ಳಿ ಅವರನ್ನು ಇನ್ನು ಹದಿನೈದು ಇಪ್ಪತ್ತು ದಿನದಲ್ಲಿ ವರ್ಗಾವಣೆ ಮಾಡುವ ಮೂಲಕ ಸೂಕ್ತ ತನಿಖೆ ನಡೆಸದೆ ಇದ್ದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ರಾಷ್ಟ್ರೀಯ ಹೆದ್ದಾರಿ ಸ್ವಾತಂತ್ರ್ಯ ಬಂದ ನಂತರ ಇಷ್ಟು ಹಾಳಾಗಿರುವುದು ಈಗಲೇ ಎಂದು ಕಾಣುತ್ತದೆ. ರಾಜ್ಯದ ಎಲ್ಲ ಭಾಗದ ಜನ ಜೋಗ
ಜಲಪಾತವನ್ನು ನೋಡಲು ಬರಲು ಇದೇ ರಸ್ತೆ ಬಳಸುತ್ತಿದ್ದಾರೆ. ಈ ಸ್ಥಿತಿಯನ್ನು ನೋಡಿದರೆ ಸಾಗರ ಕ್ಷೇತ್ರದಲ್ಲಿ ಶಾಸಕರೇ ಇಲ್ಲವೇನೋ ಎಂಬ
ಭಾವನೆ ಮೂಡುತ್ತದೆ ಎಂದು ಕುಟುಕಿದರು. ಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಸಂತೋಷ್‌ ಶೇಟ್‌, ಅರವಿಂದ ರಾಯ್ಕರ್‌, ನಾಗರತ್ನ, ಭೀಮನೇರಿ ಶಿವಪ್ಪ, ಬಿ. ಮೋಹನ್‌, ವಿ. ಮಹೇಶ್‌, ಕಲಸೆ ಚಂದ್ರಪ್ಪ, ಎಸ್‌.ಎಲ್‌. ಮಂಜುನಾಥ್‌, ಭೀಮನೇರಿ ಶಿವಪ್ಪ, ಸುವರ್ಣ ಟೀಕಪ್ಪ, ಚಂದ್ರಶೇಖರ ಅದರಂತೆ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next