Advertisement

ಹಣ ದೋಚುವ ನಕಲಿ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌: ಎಚ್ಚರ!

02:39 AM Feb 23, 2022 | Team Udayavani |

ಮಂಗಳೂರು: ಗೂಗಲ್‌ನಲ್ಲಿ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌ ನಂಬರ್‌ ಹುಡುಕಿ ಕರೆ ಮಾಡಿ ಸಹಾಯ ಪಡೆಯಲು ಮುಂದಾಗುವ ಮೊದಲು ಜಾಗರೂಕರಾಗಿರಿ. ಈಗ ಸೈಬರ್‌ ವಂಚಕರು ನಕಲಿ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌ಗಳನ್ನು ಸೃಷ್ಟಿಸಿ ಹಣ ದೋಚುತ್ತಿದ್ದಾರೆ!

Advertisement

ಆನ್‌ಲೈನ್‌ನಲ್ಲಿ ಖರೀದಿ, ಪಾವತಿಗೆ ಸಂಬಂಧಿಸಿ ಸಂದೇಹ, ಸಮಸ್ಯೆ ಎದುರಾದಾಗ, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಸೇರಿದಂತೆ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು… ಹೀಗೆ ಹಲವಾರು ಸಂದರ್ಭಗಳಲ್ಲಿಹೆಲ್ಪ್ ಲೈನ್‌/ಕಸ್ಟಮರ್‌ ಕೇರ್‌ನ ಮೊರೆಹೊಗುತ್ತೇವೆ. ಅದನ್ನೇ ಕಾಯುತ್ತಿರುವ ಸೈಬರ್‌ ವಂಚಕರು, ಗೂಗಲ್‌ ಸರ್ಚ್‌ ಕೊಟ್ಟ ಕೂಡಲೇ ಅಸಲಿಯಂತೆಯೇ ಕಾಣುವ ನಕಲಿ ಹೆಲ್ಪ್ ಲೈನ್‌/ ಕಸ್ಟಮರ್‌ ಕೇರ್‌ ಸಂಖ್ಯೆಗಳು ಕಾಣಿಸಿಕೊಳ್ಳುವಂತೆ ಮಾಡುತ್ತಾರೆ. ಅದಕ್ಕೆ ಕರೆ ಮಾಡಿ ಮಾಹಿತಿಗಳನ್ನು ನೀಡುತ್ತಾ ಹೋದರೆ ಖಾತೆಯಲ್ಲಿರುವ ಹಣ “ಹೆಲ್ಪ್ ಲೈನ್‌’ ಅಥವಾ “ಕಸ್ಟಮರ್‌ ಕೇರ್‌’ನವರಿಗೆ ವರ್ಗಾವಣೆಯಾಗುತ್ತಾ ಹೋಗುತ್ತದೆ.

1.92 ಲ.ರೂ. ದೋಚಿದ “ಕಸ್ಟಮರ್‌ ಕೇರ್‌’
2 ಕ್ರೆಡಿಟ್‌ ಕಾರ್ಡ್‌ ಹೊಂದಿದ್ದ ವ್ಯಕ್ತಿ ಯೊಬ್ಬರು ಒಂದನ್ನು ಬ್ಲಾಕ್‌ ಮಾಡುವ ಉದ್ದೇಶದಿಂದ ಗೂಗಲ್‌ನಲ್ಲಿ ಆ ಬ್ಯಾಂಕ್‌ನ ಕಸ್ಟಮರ್‌ ಕೇರ್‌ ನಂಬರನ್ನು ಹುಡುಕಿ ಕರೆ ಮಾಡಿದರು. ಕರೆ ಸ್ವೀಕರಿಸಿದಾತ “ಎನಿ ಡೆಸ್ಕ್’ ಆ್ಯಪ್‌ ಡೌನ್‌ಲೋಡ್‌ ಮಾಡುವಂತೆ ತಿಳಿಸಿದ. ಬಳಿಕ ಕ್ರೆಡಿಟ್‌ಕಾರ್ಡ್‌ ನಂಬರ್‌, ಪಿನ್‌ ವಿವರ ಹಾಕುವಂತೆ ತಿಳಿಸಿದ. ವಿವರ ಹಾಕುವಷ್ಟರಲ್ಲೇ ಅವರ ಖಾತೆಯಿಂದ 1.92 ಲ.ರೂ. ಮಾಯವಾಗಿತ್ತು!

ಆ್ಯಪ್‌ ಡೌನ್‌ಲೋಡ್‌ ಮಾಡಿಸಿದರು
ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ವಸ್ತು ವೊಂದನ್ನು ಆರ್ಡರ್‌ ಮಾಡಿದ್ದು, ಹಲವು ದಿನ ಕಳೆದರೂ ಬಂದಿರಲಿಲ್ಲ. ಗೂಗಲ್‌ನಲ್ಲಿ ಹೆಲ್ಪ್ ಲೈನ್‌ ಹುಡುಕಿ ಕರೆ ಮಾಡಿದರು. ಹಣ ವಾಪಸ್‌ ನೀಡುತ್ತೇವೆ, “ಎನಿ ಡೆಸ್ಕ್’ ಆ್ಯಪ್‌ ಡೌನ್‌ಲೋಡ್‌ ಮಾಡಿ ಎಂದರು. ಮಾಹಿತಿ ಹಾಕುತ್ತಿದ್ದಂತೆಯೇ 48,354 ರೂ. “ಹೆಲ್ಪ್ ಲೈನ್‌’ ನವರ ಖಾತೆಗೆ ವರ್ಗಾವಣೆಗೊಂಡಿದೆ.

ಸೈಬರ್‌ ತಜ್ಞರ ಸಲಹೆಗಳು
– ಹೆಲ್ಪ್ ಲೈನ್‌ ಗೆ ಗೂಗಲ್‌ನಲ್ಲಿ ಹುಡುಕ ಬೇಡಿ. ಡೆಬಿಟ್‌ಕಾರ್ಡ್‌/ ಕ್ರೆಡಿಟ್‌ ಕಾರ್ಡ್‌ ಹಿಂಭಾಗದಲ್ಲೇ ನಂಬರ್‌ ಇದ್ದು, ಅಗತ್ಯ ಬಿದ್ದರೆ ಅದಕ್ಕೆ ಕರೆ ಮಾಡಿ
– ಹೆಲ್ಪ್ ಲೈನ್‌ ನಂಬರನ್ನು ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಿರಿ. ಕಾರ್ಡ್‌ ಕಳೆದು ಹೋದರೂ ಅಧಿಕೃತ ನಂಬರ್‌ ನಿಮ್ಮ ಮೊಬೈಲ್‌ನಲ್ಲೇ ಇರುತ್ತದೆ.
– ಬ್ಯಾಂಕ್‌ ಸಂಬಂಧಿ ಸಮಸ್ಯೆ ಉಂಟಾದರೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಲ್ಲಿಂದಲೇ ಅಧಿಕೃತವಾದ ಕಸ್ಟಮರ್‌ ಕೇರ್‌/ ಹೆಲ್ಪ್ ಲೈನ್‌ ನಂಬರ್‌ ಪಡೆಯಿರಿ.
– ಬ್ಯಾಂಕ್‌ನವರು ಯಾವುದೇ ಕಾರಣಕ್ಕೂ ಖಾತೆಯ ವಿವರ, ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ನ ಸಂಖ್ಯೆ, ಒಟಿಪಿ ಇತ್ಯಾದಿ ಕರೆ ಮಾಡಿ ಕೇಳುವುದಿಲ್ಲ.

Advertisement

ಸೈಬರ್‌ ವಲ್ಚರ್‌ಗಳು!
ಇದು ಸ್ವಲ್ಪ ಭಿನ್ನ ರೀತಿಯ ಸೈಬರ್‌ ವಂಚನೆಯ ವಿಧ. ಕಷ್ಟದಲ್ಲಿರುವವರ ಆತಂಕ, ಗೊಂದಲವನ್ನು ಖದೀಮರು ದುರುಪಯೋಗಪಡಿಸಿಕೊಳ್ಳುತ್ತಾರೆ. ಆನ್‌ಲೈನ್‌ ವ್ಯವಹಾರಕ್ಕೆ ಸಂಬಂಧಿಸಿ ಯಾವುದೇ ತೊಂದರೆ ಎದುರಾದರೆ ಹೆಚ್ಚಿನವರು ಭಯಪಟ್ಟು ಗೂಗಲ್‌ನಲ್ಲಿ ಕೂಡಲೇ ಸಿಗುವ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಅವರು ಕೇಳಿದ ಎಲ್ಲ ವಿವರಗಳನ್ನು ನೀಡುತ್ತಾರೆ. ಇದನ್ನೇ ನಿರೀಕ್ಷಿಸುವ ಸೈಬರ್‌ ವಂಚಕರು ಹಣ ದೋಚುತ್ತಾರೆ. ಇವರನ್ನು ನಾವು “ಸೈಬರ್‌ ವಲ್ಚರ್‌’ಗಳೆಂದು ಕರೆಯುತ್ತೇವೆ. ಗೂಗಲ್‌ನಲ್ಲಿ ಸರ್ಚ್‌ ಆರಂಭಿಸಿದ ಕೂಡಲೇ ನಕಲಿ ಹೆಲ್ಪ್ ಲೈನ್‌ ಗಳು ಮೇಲ್ಗಡೆ ಕಾಣಿಸುವಂತೆಯೂ ಮಾಡುವ ವಂಚಕರಿದ್ದಾರೆ.
– ಡಾ| ಅನಂತಪ್ರಭು ಜಿ.,
ಸೈಬರ್‌ ಭದ್ರತಾ ತಜ್ಞ, ಮಂಗಳೂರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next