Advertisement

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಿಸೋಡಿಯರನ್ನು ಎಳೆದೊಯ್ದ ಪೊಲೀಸರು

08:58 PM May 23, 2023 | Team Udayavani |
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಡಿಸಿಎಂ ಮನೀಷ್‌ ಸಿಸೋಡಿಯ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜೂ.1ರವರೆಗೆ ವಿಸ್ತರಿಸಿ ದೆಹಲಿಯ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಸಿಸೋಡಿಯ ಅವರಿಗೆ ಜೈಲಿನ ಒಳಗಡೆ ಮೇಜು, ಕುರ್ಚಿ ಹಾಗೂ ಪುಸ್ತಕಗಳನ್ನು ಒದಗಿಸುವಂತೆ ಜೈಲಿನ ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.
ವಿಚಾರಣೆ ನಂತರ ಸಿಸೋಡಿಯ ಅವರನ್ನು ನ್ಯಾಯಾಲಯದಿಂದ ಜೈಲಿಗೆ ಪೊಲೀಸರು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರ ಹೇಳಿಕೆ ಪಡೆಯಲು ಸುದ್ದಿಗಾರರು ಪ್ರಯತ್ನಿಸಿದರು. ಅವರನ್ನು ಎಲ್ಲೆಡೆಯಿಂದ ಪೊಲೀಸರು ಸುತ್ತುವರಿದಿದ್ದರು. ಸುದ್ದಿಗಾರರು ಚಿತ್ರೀಕರಣ ನಡೆಸದಂತೆ ತಡೆಯಲು ಪೊಲೀಸರು ಮುಂದಾದರು. ಈ ವೇಳೆ ಮಾತನಾಡಿದ ಸಿಸೋಡಿಯ, “ದೆಹಲಿ ಸರ್ಕಾರದ ಅಧಿಕಾರಿಗಳ ಮೇಲೆ ನಿಯಂತ್ರಣ ಹೊಂದಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಸರಿಯಲ್ಲ. ನರೇಂದ್ರ ಮೋದಿ ಅಹಂಕಾರಿಯಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರನ್ನು ತಡೆದ ಪೊಲೀಸ್‌ ಅಧಿಕಾರಿಯೊಬ್ಬರು, ಅವರ ಹೆಗಲ ಮೇಲೆ ಕೈಹಾಕಿ, ಎಳೆದುಕೊಂಡು ಹೋಗಿದ್ದಾರೆ.  ಪೊಲೀಸ್‌ ಅಧಿಕಾರಿಯ ಈ ಕೃತ್ಯಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೇರಿ ಆಪ್‌ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್‌ ಆಕ್ರೋಶ: “ಸಿಸೋಡಿಯ ಅವರನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳಲು ಪೊಲೀಸರಿಗೆ ಅಧಿಕಾರವಿದೆಯೇ?, ಪೊಲೀಸರಿಗೆ ಈ ರೀತಿ ವರ್ತಿಸಿ ಎಂದು ಅವರ ಮೇಲಧಿಕಾರಿಗಳು ನಿರ್ದೇಶಿಸದ್ದಾರೆಯೇ? ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ. “ಸಿಸೋಡಿಯ ಅವರೊಂದಿಗೆ ಪೊಲೀಸರ ದುರ್ವರ್ತನೆ ನಿಜಕ್ಕೂ ಆಶ್ಚರ್ಯಕರವಾಗಿದೆ,’ ಎಂದು ದೆಹಲಿ ಶಿಕ್ಷಣ ಸಚಿವೆ ಅತಿಶಿ ಟ್ವೀಟ್‌ ಮಾಡಿದ್ದಾರೆ.
ವಿಚಾರಣೆಗೆ ಖುದ್ದು ಹಾಜರಾಗಿ: ಕೇಜ್ರಿಗೆ ಸಮನ್ಸ್‌
 ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.7ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಆಪ್‌ ರಾಜ್ಯಸಭೆ ಸದಸ್ಯ ಸಂಜಯ್‌ ಸಿಂಗ್‌ ಅವರಿಗೆ ಅಹಮದಾಬಾದ್‌ ನ್ಯಾಯಾಲಯ ಮಂಗಳವಾರ ಸಮನ್ಸ್‌ ಜಾರಿಗೊಳಿಸಿದೆ.  ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಕುರಿತು ಉಭಯ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್‌ ವಿಶ್ವವಿದ್ಯಾಲಯವು ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲಿಸಿತ್ತು. ಈ ಹಿಂದೆ ಮೇ 23ರಂದು ಸಮನ್ಸ್‌ ಜಾರಿ ಮಾಡಿದ್ದರೂ ನ್ಯಾಯಾಲಯದ ಎದುರು ಇಬ್ಬರು ನಾಯಕರು ಹಾಜರಾಗಿಲ್ಲ ಎಂದು ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಸ್‌.ಜೆ.ಪಾಂಚಾಲ್‌ ಉಲ್ಲೇಖೀಸಿದರು.
ಕೋರ್ಟ್‌ ಜಾರಿ ಮಾಡಿದ್ದ ಸಮನ್ಸ್‌ ಅನ್ನು ಇಬ್ಬರೂ ನಾಯಕರು ಸ್ವೀಕರಿಸಬೇಕಾಗಿದೆ ಎಂದು ಗುಜರಾತ್‌ ಆಪ್‌ನ ಕಾನೂನು ವಿಭಾಗದ ಮುಖ್ಯಸ್ಥ ಪ್ರಣವ್‌ ಠಕ್ಕರ್‌ ಹೇಳಿದರು. “ಒಂದು ವೇಳೆ ಗುಜರಾತ್‌ ವಿಶ್ವವಿದ್ಯಾಲಯದಲ್ಲಿ ಮೋದಿ ಶಿಕ್ಷಣ ಪಡೆದಿದ್ದರೆ, ತನ್ನ ವಿದ್ಯಾರ್ಥಿ ಪ್ರಧಾನಿ ಆಗಿದ್ದಾರೆ  ಎಂದು ವಿವಿ ಸಂಭ್ರಮಿಸಬೇಕಿತ್ತು. ಆದರೆ ಪದವಿ ಪ್ರಮಾಣಪತ್ರ ಏಕೆ ನೀಡುತ್ತಿಲ್ಲ’ ಎಂದು ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದರು.
“ಪ್ರಧಾನಿ ಮೋದಿಯವರ ನಕಲಿ ಪದವಿ ಪ್ರಮಾಣಪತ್ರವನ್ನೇ ಅಸಲಿ ಎಂದು ಸಾಬೀತುಪಡಿಸಲು ಗುಜರಾತ್‌ ವಿಶ್ವವಿದ್ಯಾಲಯ ಮುಂದಾಗಿದೆ’ ಎಂದು ಸಂಜಯ್‌ ಸಿಂಗ್‌ ಆರೋಪಿಸಿದ್ದರು. ವಿಶ್ವವಿದ್ಯಾಲಯದ ವಿರುದ್ಧ ವ್ಯಂಗ್ಯ ಮತ್ತು ಮಾನಹಾನಿಕರ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಇಬ್ಬರ ವಿರುದ್ಧ ಗುಜರಾತ್‌ ವಿವಿ ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲಿಸಿದೆ.
ಕೇಜ್ರಿವಾಲ್‌ಗೆ ದೀದಿ ಬೆಂಬಲ
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಗೆ ಆಗಮಿಸಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಮಂಗಳವಾರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ನೇಮಕಾತಿ ಮತ್ತು ಅಧಿಕಾರಿಗಳ ವರ್ಗಾವಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧದ ಹೋರಾಟದಲ್ಲಿ ದೆಹಲಿ ಸರ್ಕಾರಕ್ಕೆ ತೃಣಮೂಲ ಕಾಂಗ್ರೆಸ್‌ ಬೆಂಬಲ ನೀಡಲಿದೆ ಎಂದು ಇದೇ ವೇಳೆ ಮಮತಾ ಬ್ಯಾನರ್ಜಿ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next