Advertisement

ಲಾಕ್‌ ಡೌನ್‌ ತಂದ ಉಳಿತಾಯ: ಚಿಕ್ಕ ಶಾಪಿಂಗ್‌ ರೂಟೀನ್‌ !

04:45 PM Apr 20, 2020 | mahesh |

ಲಾಕ್‌ಡೌನ್‌ ಕಾರಣದಿಂದ ಜನ ಮನೆಯೊಳಗೇ ಕೂತಿದ್ದಾರೆ. ಅವರೆಲ್ಲ, ತಮಗೆ ಗೊತ್ತಿಲ್ಲದಂತೆಯೇ ಸಾಕಷ್ಟು ಉಳಿತಾಯವನ್ನೂ ಮಾಡಿದ್ದಾರೆ…

Advertisement

ಲಾಕ್‌ ಡೌನ್‌ ಕಾರಣಕ್ಕೆ ಯಾರೂ ಮನೆಯಿಂದ ಆಚೆಗೇ ಹೋಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್‌ ಅಥವಾ ಪೋಸ್ಟ್ ಆಫಿಸ್‌ಗಾಗಲಿ, ಚಿಟ್‌ ಫ‌ಂಡ್‌ ಕಚೇರಿಗೇ ಆಗಲಿ ಹೋಗುವುದು ಈಗ ದೂರದ ಮಾತು. ಹೀಗಿದ್ದರೂ, ಮನೆಯೊಳಗೇ ಇರುವ ಪ್ರತಿಯೊಬ್ಬರಿಗೂ ಈ ಒಂದು ತಿಂಗಳಲ್ಲಿ ಸಾವಿರ ರೂಪಾಯಿಗೂ ಹೆಚ್ಚು (ಕೆಲವರಿಗೆ ಆರೇಳು ಸಾವಿರಕ್ಕೂ ಹೆಚ್ಚು!) ಉಳಿತಾಯ ಆಗಿದೆ ಅಂದರೆ ನಂಬುತ್ತೀರಾ? ಸ್ವಾರಸ್ಯವೆಂದರೆ, ಹೀಗೆ ಉಳಿತಾಯವಾದ ಹಣ, ನಮ್ಮ ಜೇಬು ಎಂಬ ಅಕೌಂಟ್‌ನಲ್ಲಿಯೇ ಭದ್ರವಾಗಿ ಇದೆ!

ಅಂದಹಾಗೆ, ಯಾವಯಾವ ರೀತಿಯಲ್ಲಿ ಅಂದಾಜು ಎಷ್ಟೆಷ್ಟು ಹಣ ಉಳಿದಿದೆ ಗೊತ್ತಾ?

1. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರು- ಇಂಥ ನಗರಗಳಲ್ಲಿ ಇದ್ದುಕೊಂಡು ಸಿಟಿ ಬಸ್‌ನಲ್ಲಿ ಆಫಿಸ್‌ಗೆ ಹೋಗುತ್ತಿದ್ದವರು ಅಂದುಕೊಳ್ಳಿ. ಅವರು ಬಸ್‌ ಪಾಸ್‌ಗೆ ಎಂದೇ ತಿಂಗಳಿಗೆ 1000 ರೂಪಾಯಿ ಕೊಡಬೇಕಿತ್ತು. ಅಷ್ಟೂ ಹಣ ಈಗ ಉಳಿತಾಯ ಆಗಿದೆ!

2. ಬಸ್ಸು, ಆ ರಶ್‌, ಆ ಟ್ರಾಫಿಕ್‌ನ ಸಹವಾಸ ಬೇಡ. ನಂದು ಬೈಕ್‌ ಇದೆ ಅನ್ನುತ್ತಿದ್ದವರು, ದಿನಕ್ಕೆ ಕಡಿಮೆ ಅಂದರೂ 100 ರೂಪಾಯಿಯನ್ನು ಪೆಟ್ರೋಲ್‌ಗೇ ತೆಗೆದಿಡಬೇಕಾಗಿತ್ತು. ಒಂದು ದಿನಕ್ಕೆ 100 ರೂಪಾಯಿ ಅಂದರೆ, ತಿಂಗಳಿಗೆ 3000 ರೂಪಾಯಿ!! ಈ ಹಣವೂ ಈಗ ಉಳಿತಾಯವೇ.

Advertisement

3. ಭಾನುವಾರಗಳಂದು ಮಧ್ಯಾಹ್ನ ಅಥವಾ ರಾತ್ರಿ ವೀಕೆಂಡ್‌ ನೆಪದಲ್ಲಿ ಹೋಟೆಲಿಗೆ ಊಟಕ್ಕೆ ಹೋಗುವುದು ಎಷ್ಟೋ ಕುಟುಂಬಗಳ ರೂಟೀನ್‌ ಆಗಿಹೋಗಿತ್ತು. ಊಟಕ್ಕೆ ಕಡಿಮೆ ಅಂದರೂ 600 ರೂ., ಹೋಗಿ ಬರಲು ಕ್ಯಾಬ್‌ಗ 400 ರೂ., ಊಟದ ನಂತರ ಚಿಕ್ಕ ಶಾಪಿಂಗ್‌ಗೆ 500- 700 ರೂ. ಹೋಗಿಬಿಡುತ್ತಿತ್ತು. ಅಂದರೆ, ವೀಕೆಂಡ್‌ ನೆಪದಲ್ಲಿ ವಾರಕ್ಕೆ 1500 ಮಾಯವಾಗುತ್ತಿತ್ತು. ಅಂದರೆ, ತಿಂಗಳಿಗೆ 5 ರಿಂದ 6 ಸಾವಿರ ರೂಪಾಯಿ. ಆದಷ್ಟೂ ಈಗ ಉಳಿತಾಯ ಆಗಿದೆ.

4. ಸಂಜೆ 5 ಗಂಟೆ ಆಗುತ್ತಿದ್ದಂತೆಯೇ ಆಫಿಸ್‌ಗೆ ಹತ್ತಿರದಲ್ಲೇ ಇದ್ದ ಹೋಟೆಲಿನಲ್ಲಿ ಎರಡು ಇಡ್ಲಿ ತಿಂದು ಕಾಫಿ ಕುಡಿಯುವ ಅಭ್ಯಾಸ ತುಂಬಾ ಜನಕ್ಕಿತ್ತು. ಎರಡು ಇಡ್ಲಿ, ಒಂದು ಕಾಫಿ ಅಂದರೆ 50 ರೂ. ದಿನಕ್ಕೆ 50 ರೂ ಅಂದರೆ ತಿಂಗಳಿಗೆ 1500 ರೂ. ಉಳಿಸಿದಂತಾಯಿತಲ್ಲ?

5. ಈ ಲಾಕ್‌ಡೌನ್‌ ಅವಧಿಯಲ್ಲಿ ಭಾರೀ ಉಳಿತಾಯ ಆಗಿರುವುದು ಸಿಗರೇಟ್‌ ಪ್ರಿಯರಿಗೆ. ಒಬ್ಬ ವ್ಯಕ್ತಿ ದಿನಕ್ಕೆ ಕಡಿಮೆ ಅಂದರೂ 100 ರೂಪಾಯಿಗಳನ್ನು ಸಿಗರೇಟ್‌ಗೆ ಖರ್ಚು ಮಾಡುತ್ತಿದ್ದ. ಅಂದರೆ ತಿಂಗಳಿಗೆ 3000 ರೂಪಾಯಿ. ಅದರಲ್ಲಿ ಈಗ ಪೂರ್ತಿ ಅಲ್ಲದಿದ್ದರೂ ಅರ್ಧಕ್ಕರ್ಧ ಅಂತೂ ಉಳಿತಾಯ ಆಗಿದೆ. (ವಾರಕ್ಕೊಮ್ಮೆ ,3 ದಿನಕ್ಕೊಮ್ಮೆ ಗುಂಡು ಹಾಕುತ್ತಿದ್ದವರಿಗೆ ಎಷ್ಟು ಉಳಿತಾಯ ಆಗಿರಬಹುದೋ ಸುಮ್ಮನೆ ಲೆಕ್ಕ ಹಾಕಿ)

6.  ಆನ್‌ಲೈನ್‌ ಶಾಪಿಂಗ್‌ನಲ್ಲಿ ಪ್ರತಿ ವಾರ ಏನನ್ನಾದರೂ ಖರೀದಿಸುವುದು ಬಹಳ ಜನರಿಗೆ ಹವ್ಯಾಸವೇ ಆಗಿಬಿಟ್ಟಿತ್ತು. ಲಾಕ್‌ ಡೌನ್‌ನ ಕೃಪೆಯಿಂದ, ಆ ಹಣವೂ ಉಳಿದುಕೊಂಡಿದೆ.

7.  ಟ್ರಾಫಿಕ್‌ನ ಕಾರಣಕ್ಕೆ, ಕೆಟ್ಟ ಗಾಳಿ ಸೇವನೆಯ ಕಾರಣದಿಂದ ತಲೆನೋವು, ಗಂಟಲು ಕೆರೆತದಂಥ ಸಮಸ್ಯೆಗಳಿಗೆ ತುತ್ತಾಗಿ ಆಸ್ಪತ್ರೆಗೆ ಹೋಗುತ್ತಿದ್ದವರು ಒಬ್ಬಿಬ್ಬರಲ್ಲ, ಅವರೆಲ್ಲ ಮೆಡಿಸಿನ್‌ಗೆ ಸುರಿಯುತ್ತಿದ್ದ ಹಣ ಕೂಡ ಉಳಿದುಕೊಂಡಿದೆ!!

ಈ ದೃಷ್ಟಿಯಿಂದ ನೋಡುವುದಾದರೆ, ಲಾಕ್‌ ಡೌನ್‌ ಕಾರಣದಿಂದ, ಮನೆಯೊಳಗೇ ಕುಳಿತಿದ್ದರೂ ಜನ, ತಮಗೆ ಗೊತ್ತಿಲ್ಲ ದಂತೆಯೇ ಸಾಕಷ್ಟು ಉಳಿತಾಯ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next