ಕೆ.ಆರ್.ಪುರ: ಜೆಡಿಎಸ್‌ಗಾಗಿ 25 ವರ್ಷಗಳ ಕಾಲ ಸಲ್ಲಿಸಿದ ಪ್ರಮಾಣಿಕ ಸೇವೆ ಪರಿಗಣಿಸದೆ ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಬೇಸರಗೊಂಡು ಅಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಎಂ.ಸಿ ಪ್ರಬಾಕರ ರೆಡ್ಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದ, ಕೇವಲ ಹಣಬಲ ಹೊಂದಿರುವ ಪ್ರಭಾವಿಗಳಿಗೆ ಕೆ.ಆರ್.ಪುರ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ತಳಮಟ್ಟದಿಂದ ಪಕ್ಷ ಕಟ್ಟಿರುವ ಕಾರ್ಯಕರ್ತರಿಗೆ ಬೆಲೆ ನೀಡದೇ ಹೈಕಮಾಂಡ್ àಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮದೇ ಪಕ್ಷದ ಮುಖಂಡರು ನನ್ನ ಬಗ್ಗೆ ವರಿಷ್ಠರಿಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದನ್ನೇ ನಂಬಿರುವ ವರಿಷ್ಠರು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಚುನಾವಣೆ ಮೂಲಕ ಆಯ್ಕೆಯಾದ ನನ್ನ ಅವಧಿ ಮುಗಿಯುವ ಮುನ್ನವೇ ನನ್ನ ಗಮನಕ್ಕೂ ತಾರದೆ ಬೇರೊಬ್ಬರನ್ನು ನನ್ನ ಹುದ್ದೆಗೆ ಆಯ್ಕೆ ಮಾಡಿರುವುದು ಅಸಾಂವಿಧಾನಿಕ ಕ್ರಮ.
ಇನ್ನು ಮೂರು ದಿನಗಳಲ್ಲಿ ನನ್ನನ್ನು ಮತ್ತೆ ಅಧ್ಯಕ್ಷನನ್ನಾಗಿ ಮುಂದುವರಿಸದಿದ್ದರೆ ವಾರ್ಡ್ ಅಧ್ಯಕ್ಷರು ಸೇರಿದಂತೆ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡುತ್ತೇವೆ,’ ಎಂದು ಎಚ್ಚರಿಕೆ ನೀಡಿದರು. “ಕೆ.ಆರ್.ಪುರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರನ್ನಾಗಿ ದೇವರಾಜ್ ಅವರನ್ನು ಆಯ್ಕೆ ಮಾಡಿರುವುದರ ಹಿಂದೆ ಡಿ.ಎ.ಗೋಪಾಲ್ ಅವರ ಕುತಂತ್ರ ಅಡಗಿದೆ.
ಈಬಗ್ಗೆ ಬೇಸರಗೊಂಡು ರಾಜೀನಾಮೆ ಪತ್ರವನ್ನು ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದು, ಅದನ್ನು ಕೂಡಲೆ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ರಾಜ್ಯಾಧ್ಯಕ್ಷರಿಗೆ ತಲುಪಿಸುವಂತೆ ಮನವಿ ಮಾಡಲಾಗಿದೆ.’ ಎಂದರು. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಆರ್.ಕೃಷ್ಣಮೂರ್ತಿ, ನಗರ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮೊದಲಾದವರು ಹಾಜರಿದ್ದರು.