Advertisement
ಡಾಲರ್ ಅಥವಾ ಕಾಸಿನ ಮಾಲೆ, ಸರ, ಕಿವಿಯೋಲೆ ಇತ್ಯಾದಿಗಳನ್ನು ಮಹಿಳೆಯರು ಬಹಳ ಹಿಂದಿನಿಂದಲೂ ಧರಿಸುತ್ತಾ ಬಂದಿದ್ದಾರೆ. ಕೇವಲ ಭಾರತದಲ್ಲಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಮಹಿಳೆಯರು ಡಾಲರ್ ಮಾದರಿಯ ಆಭರಣಗಳನ್ನು ತೊಡುತ್ತಾರೆ. ಇದೇ ಕಾರಣಕ್ಕೆ ಲಕ್ಷ್ಮಿ ಪೆಂಡೆಂಟ್ ಅನ್ನೂ ಡಾಲರ್ ಎಂದು ಕರೆಯಲಾಗುತ್ತಿತ್ತು. ಈ ಶೈಲಿ ಪುನಃ ಫ್ಯಾಷನ್ ಲೋಕವನ್ನು ಪ್ರವೇಶಿಸಿದೆ. ಇವುಗಳನ್ನು ಲಂಗ, ಪ್ಯಾಂಟ್, ಸೀರೆ, ಶಾರ್ಟ್ಸ್, ಗೌನ್, ಚೂಡಿದಾರ್ ಯಾವುದರ ಜೊತೆಗೂ ತೊಡಬಹುದಾಗಿದೆ! ಇವುಗಳನ್ನು ಪೂಜೆ, ಮದುವೆ, ಹಬ್ಬ, ಆಫೀಸ್, ಕಾಲೇಜು, ಶಾಪಿಂಗ್, ಹಾಲಿಡೇ… ಎಲ್ಲಿಗೆ ಬೇಕಾದರೂ ಧರಿಸಬಹುದು. ಇವುಗಳನ್ನು ಆನ್‌ಲೈನ್ ಮೂಲಕ ತರಿಸುವುದಾದರೆ ಕಾಯಿನ್ ಇಯರ್ ರಿಂಗ್ಸ್ ಎಂದು ಹುಡುಕಿ.
ಗೆಜ್ಜೆಯಂಥ ಹ್ಯಾಂಗಿಂಗ್ಸ್ ಮತ್ತು ಟ್ಯಾಸೆಲ್ಸ… ಇರುವ ಕಾಸಿನ ಕಿವಿಯೋಲೆ ಈಗ ಹೆಚ್ಚು ಸದ್ದು ಮಾಡುತ್ತಿದೆ. ಬಣ್ಣ ಬಣ್ಣದ ದಾರಗಳಿಂದ ಈ ನಾಣ್ಯಗಳನ್ನು ಪೋಣಿಸಿ, ಉದ್ದನೆಯ ಶಾಂಡೆಲಿಯರ್ ಇಯರ್ ರಿಂಗ್‌ನಂತೆ, ಉಟ್ಟ ಉಡುಪಿಗೆ ತಕ್ಕಂತೆ ಮ್ಯಾಚ್ ಮಾಡಿಕೊಳ್ಳುವ ಆಯ್ಕೆಯೂ ಇದೆ. ನಾಣ್ಯಗಳ ಸುತ್ತ ಮರದ ತುಂಡು, ಗಾಜಿನ ಚೂರು, ಮಣಿ, ಕವಡೆ, ಮುತ್ತು, ಕನ್ನಡಿ ಮತ್ತು ಕಲ್ಲುಗಳನ್ನು ಅಂಟಿಸಿ ಪುಷ್ಪ, ಸೂರ್ಯ, ಚಂದ್ರ, ನಕ್ಷತ್ರದಂಥ ರೂಪ ನೀಡಬಹುದು. ನಾಣ್ಯಕ್ಕೂ ಹೊಸರೂಪ
ನಾಣ್ಯಗಳು ವೃತ್ತಾಕಾರಕ್ಕೆ ಸೀಮಿತವಾಗದೆ ಚೌಕ, ಪಂಚಕೋನಾಕೃತಿ, ಷಟ್ಕೊನ, ಅಷ್ಟಭುಜ, ಹಾರ್ಟ್ ಶೇಪ್ (ಹೃದಯಾಕಾರ), ಮನೆಯ ಚಿತ್ರ, ಝೊಡಿಯಾಕ್ ಸೈನ್ (ರಾಶಿ ಚಿಹ್ನೆ), ಹಾವು, ಮಿಂಚಿನ ಆಕೃತಿ, ಬಲ್ಬ…, ಬಲೂನ್, ಬೀಗ ಅಥವಾ ಬೀಗದ ಕೈ, ಪಾದರಕ್ಷೆ, ಮುಂತಾದ ಆಕಾರಗಳಲ್ಲೂ ತಯಾರಿಸಲಾಗುತ್ತಿದೆ. ಚಿನ್ನ ಅಥವಾ ಬೆಳ್ಳಿಯ ಕಾಸಿನ ಕಿವಿಯೋಲೆ ಈಗಾಗಲೇ ಇದ್ದರೆ, ಅದಕ್ಕೆ ಬೇಕಾದ ಹೊಸ ವಿನ್ಯಾಸ, ಆಕೃತಿ ನೀಡಿ ಹೊಸ ಲುಕ್ ಪಡಿಯಬಹುದು.
Related Articles
Advertisement
– ಅದಿತಿಮಾನಸ ಟಿ.ಎಸ್.