Advertisement
ಬಾಗಲಕೋಟೆಯ ಗುಳೇದ ಗುಡ್ಡ ಅಂದರೆ ಸಾಕು; ಬರಗಾಲದ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ ಗುಳೇಗುಡ್ಡಕ್ಕೆ ಸಮೀಪವಿರುವ ಪರ್ವತಿ ಗ್ರಾಮದ ಹನುಮಂತ ತಿಪ್ಪಣ್ಣ ಹುನಗುಂದರಿಗೆ ಬರವೇನೂ ತಟ್ಟಿಲ್ಲ. ಅವರ ಬದುಕಿನ ಬೆಂಗಾವಲಾಗಿ ಮೂಲಂಗಿ ಇದೆ. 7 ವರ್ಷದಿಂದ ಮೂಲಂಗಿ ಬೆಳೆದೇ ಈತ ಬದುಕನ್ನು ಹಸನಾಗಿಸಿಕೊಂಡಿದ್ದಾರೆ. ಹಾಗಂತ ಹನುಮಂತರೇನು ಹತ್ತಾರು ಎಕರೆ ಜಮೀನನ್ನು ಹೊಂದಿಲ್ಲ. ಇರುವ ಅಲ್ಪ ಜಮೀನಿನಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಆದಾಯ ಗಳಿಸುತ್ತಿದ್ದಾರೆ. ಹಾಗೆ ನೋಡಿದರೆ, ಪರ್ವತಿ ಗ್ರಾಮದ ಸುತ್ತಮುತ್ತ ಮೂಲಂಗಿಯನ್ನು ಬೆಳೆದು ಹೀಗೂ ಬದುಕಬಹುದು ಅಂತ ತೋರಿಸಿದ್ದೇ ಹನುಮಂತರು. ಮೊದಲು ಬಾರಿಗೆ ಅವರು ಈ ಪ್ರಾಂತ್ಯದಲ್ಲಿ ಮೂಲಂಗಿ ಬೀಜ ಬಿತ್ತಿ ಎಲ್ಲರ ಗಮನ ಸೆಳೆದರು. ಈಯಪ್ಪಾ ಏನೋ ಮಾಡ್ತಾ ಇದ್ದಾನೆ ಅಂತ ಪರ್ವತಿ ಹಾಗೂ ಸುತ್ತುಮುತ್ತಲಿನ ಗ್ರಾಮದ ರೈತರು ನೋಡುವ ಹೊತ್ತಿಗೆ ಹನುಮಂತರ ಜೇಬು ತುಂಬಿತ್ತು.
ರೈತ ಹನುಮಂತ, ಅಂಕೂರ ಹೈಬ್ರಿಡ್ ತಳಿಯ ಮೂಲಂಗಿ ಬೆಳೆಯುತ್ತಾರೆ. ಇದು ಎರಡೂವರೆ ತಿಂಗಳಲ್ಲಿ ಫಸಲು ಬರುವ ಬೆಳೆ. ಒಂದು ಬಾರಿ ಕಳೆ ತೆಗೆಯುತ್ತಾರೆ. ನಾಲ್ಕು ಬಾರಿ ಕೀಟನಾಶಕ ಔಷಧ ಸಿಂಪಡನೆ ಮಾಡುತ್ತಾರೆ. ಒಂದು ಎಕರೆಗೆ 5,000 ವರೆಗೆ ಖರ್ಚು ಮಾಡುತ್ತಾರೆ. ಹಾಗೇ ಒಂದು ವರ್ಷಕ್ಕೆ ಎಲ್ಲ ಖರ್ಚು ವೆಚ್ಚ ತೆಗೆದರೂ 2 ಲಕ್ಷ ರೂ. ಆದಾಯ ಸಿಗುತ್ತಿದೆ. ಮೂಲಂಗಿ ಬೆಳೆಗೆ ನೀರು ಬಹಳ ಮುಖ್ಯ. ಕನಿಷ್ಠ ನಾಲ್ಕು ದಿನಕ್ಕೊಮ್ಮೆ ನೀರು ಉಣಿಸಬೇಕು. ಮೂಲಂಗಿಗೆ ಬರುವ ರೋಗ ಬಾಧೆಗಳು ಸಹ ಕಡಿಮೆ. ಹನುಮಂತರು ಮೂರು ಬಾರಿ ಫಸಲನ್ನು ಪಡೆಯುತ್ತಾರೆ. ಉಳಿದ ಅವಧಿಯಲ್ಲಿ ಜಮೀನಿನ ಫಲವತ್ತತೆ ಹೆಚ್ಚಿಸಲು ಹಸು ಮತ್ತು ಕುರಿಯ ಸಾವಯುವ ಗೊಬ್ಬರ ಬಳಕೆ ಮಾಡುತ್ತಾರೆ. ಹನುಮಂತರು ಅವರು ಬೆಳೆದ ಮೂಲಂಗಿಯನ್ನು ಬಾಗಲಕೋಟೆ, ಹುಬ್ಬಳ್ಳಿ, ಆಲಮಟ್ಟಿ, ಗುಳೇದಗುಡ್ಡ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಅಮೀನಗಡದ ಮಾರುಕಟ್ಟೆಗೆ ಕಳುಹಿಸುತ್ತಾರೆ. ಅಲ್ಲಿ ಐವತ್ತು ಮೂಲಂಗಿಯ ಗುಡ್ಡೆಗೆ 60-70 ರೂ. ಸಿಗುತ್ತದೆ. ಇದು ಮೂಲವ್ಯಾಧಿ ರೋಗಕ್ಕೆ ಉತ್ತಮ ಮನೆಮದ್ದು. ಹೀಗಾಗಿ, ಸುತ್ತ ಮುತ್ತಲಿನ ಗ್ರಾಮಗಳಲ್ಲಿನ ರೋಗಿಗಳು ಈ ಗ್ರಾಮಕ್ಕೆ ಬಂದು ಮೂಲಂಗಿ ತೆಗೆದುಕೊಂಡು ಹೋಗುತ್ತಾರೆ. ಮೂಲಂಗಿ ಬೆಳೆಯ ನಿರ್ವಹಣೆ ಕಷ್ಟವಲ್ಲ. ಕೇವಲ ಒಬ್ಬ ವ್ಯಕ್ತಿಯಿಂದ ಇಡೀ ಬೆಳೆ ಮತ್ತು ಭೂಮಿಯ ನಿರ್ವಹಣೆ ಮಾಡಬಹುದು. ಕಡಿಮೆ ಖರ್ಚಿನಲ್ಲಿ ಆದಾಯ ನೀಡುವ ಮೂಲಂಗಿಯೂ ಜೀವನ ನಿರ್ವಹಣೆಗೆ ಸಹಾಯಕಾರಿಯಾಗಿದೆ ಎನ್ನುತ್ತಾರೆ ಹನುಮಂತ.
Related Articles
Advertisement
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಪರ್ವತಿ ಗ್ರಾಮದ ಹಣಮಂತ ತಿಪ್ಪಣ್ಣ ಹುನಗುಂದ ಎಂಬ ರೈತ ಈ ವಿಧಾನ ಅನುಸರಿಸಿದವರು. ವಾಸ್ತವಿಕವಾಗಿ ಗುಳೇದಗುಡ್ಡ ತಾಲೂಕು ಬರಪೀಡಿತ ಎಂಬ ಪಟ್ಟಿಗೆ ಸೇರಿದ್ದರೂ ಇವರು ನೀರಾವರಿಯ ಮೂಲಕ ಕೇವಲ ಒಂದು ಎಕರೆ ಭೂಮಿಯಲ್ಲಿ ಮೂಲಂಗಿ ಬೆಳೆದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಕೇವಲ ಮೂಲಂಗಿ ಒಂದೇ ಇವರು ಬೆಳೆಯುವ ಬೆಳೆ. ಸತತ ಏಳು ವರ್ಷಗಳಿಂದ ಬೆಳೆಯುತ್ತಿದ್ದರೂ ಒಮ್ಮೆಯೂ ನಷ್ಟ ಅನುಭವಿಸಿಲ್ಲ. ಮಾರುಕಟ್ಟೆಯಲ್ಲಿ ಸಹ ಉತ್ತಮ ದರ ಬರುತ್ತಿದೆ.
– ರೇವಣ್ಣ ಅರಳಿ